ಪುತ್ತೂರು: ಬಿಜೆಪಿಗೆ ಹಿಂದುತ್ವ ಅಭ್ಯರ್ಥಿಯೇ ಟಕ್ಕರ್‌: ಕ್ಷೇತ್ರದಲ್ಲಿ ಹಿಂದೂ ಸಂಘಟಕ ಅರುಣ್‌ಕುಮಾರ್ ಪುತ್ತಿಲರದ್ದೇ ಸದ್ದು

By Kannadaprabha News  |  First Published May 1, 2023, 3:52 PM IST

ಕಳೆದ ಅವಧಿಯಲ್ಲಿ ಇಲ್ಲಿ ಬಿಜೆಪಿ ಶಾಸಕರಿದ್ದರು. ಈ ಬಾರಿ ಹಾಲಿ ಶಾಸಕ ಸಂಜೀವ ಮಠಂದೂರು ಬದಲು ಹೊಸಮುಖ ಆಶಾ ತಿಮ್ಮಪ್ಪರನ್ನು ಕಣಕ್ಕಿಳಿಸಲಾಗಿದೆ.


(ಆತ್ಮಭೂಷಣ್‌)
ಪುತ್ತೂರು (ಮೇ 1, 2023): ಈ ಬಾರಿಯ ಅಸೆಂಬ್ಲಿ ಚುನಾವಣೆ ಪೈಕಿ ಕರಾವಳಿ ಜಿಲ್ಲೆಯಲ್ಲಿ ಇಡೀ ರಾಜ್ಯದ ಗಮನ ಸೆಳೆಯುತ್ತಿರುವ ಕ್ಷೇತ್ರ ಎಂದರೆ ಅದು ಪುತ್ತೂರು. ಬಿಜೆಪಿ ಭದ್ರಕೋಟೆ ಒಡೆಯುವ ಯತ್ನ ಕಾಂಗ್ರೆಸ್‌ನಿಂದ ನಡೆಯುತ್ತಿದ್ದರೆ, ಅದನ್ನು ಉಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ನಡುವೆ ಇಲ್ಲಿ ಹಿಂದುತ್ವದ ಕೋಟೆ ಕಟ್ಟಲು ಪಕ್ಷೇತರ ಅಭ್ಯರ್ಥಿ ತೊಡೆತಟ್ಟಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದ್ದು, ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ವರ್ಸಸ್‌ ಹಿಂದುತ್ವ ಸಿದ್ಧಾಂತದ ಪಕ್ಷೇತರ ಅಭ್ಯರ್ಥಿ ನಡುವೆಯೇ ಕದನ ಏರ್ಪಡುವ ನಿರೀಕ್ಷೆ ಇದೆ. ಇದರ ಲಾಭ ಪಡೆಯಲು ಕಾಂಗ್ರೆಸ್‌ ಹವಣಿಸುತ್ತಿದೆ.

ಬಿಜೆಪಿಗೆ ದೊಡ್ಡ ಸವಾಲು: ಕಳೆದ ಅವಧಿಯಲ್ಲಿ ಇಲ್ಲಿ ಬಿಜೆಪಿ ಶಾಸಕರಿದ್ದರು. ಈ ಬಾರಿ ಹಾಲಿ ಶಾಸಕ ಸಂಜೀವ ಮಠಂದೂರು ಬದಲು ಹೊಸಮುಖ ಆಶಾ ತಿಮ್ಮಪ್ಪರನ್ನು ಕಣಕ್ಕಿಳಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ, ಅಧ್ಯಕ್ಷೆಯಾಗಿ ಕೆಲಸ ಮಾಡಿದ ಅನುಭವ ಬಿಟ್ಟರೆ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪಕ್ಷದ ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದ ಪ್ರಖರ ಹಿಂದುತ್ವವಾದಿ, ಸಂಘಟಕ ಅರುಣ್‌ ಕುಮಾರ್‌ ಕುಮಾರ್‌ ಪುತ್ತಿಲ ಅವರಿಗೆ ಕಾರ್ಯಕರ್ತರ ಬೆಂಬಲ ಇದ್ದರೂ ಅದನ್ನು ಕಡೆಗಣಿಸಿ ಸುಳ್ಯ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯ ಆಶಾರನ್ನು ಪುತ್ತೂರಿನಲ್ಲಿ ಕಣಕ್ಕಿಳಿಸಿದ್ದು ಬಿಜೆಪಿಯಲ್ಲಿ ಅತೃಪ್ತಿ ಹೊಗೆಯಾಡಲು ಕಾರಣವಾಯಿತು. ಪುತ್ತಿಲ ಅವರು ಬೆಂಬಲಿಗರ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಇದೀಗ ಕಣದಲ್ಲಿದ್ದಾರೆ. ಬಿಜೆಪಿಗೇ ಸಡ್ಡು ಹೊಡೆದು ನಿಂತಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿಯೊಳಗೆ ಎದ್ದಿರುವ ಅಸಮಾಧಾನ ಸರಿಪಡಿಸಲು ಸಂಘಪರಿವಾರ ಮತ್ತು ಪಕ್ಷದ ಮುಖಂಡರು ಹಗಲಿರುಳು ಶ್ರಮಿಸುತ್ತಲೇ ಇದ್ದಾರೆ. ಅದು ಈವರೆಗೆ ಫಲ ಕೊಟ್ಟಿಲ್ಲ.

Tap to resize

Latest Videos

ಇದನ್ನು ಓದಿ: ಇದೇ ಮೊದಲ ಬಾರಿ ಬಿಜೆಪಿ ವರ್ಸಸ್‌ ಶೆಟ್ಟರ್‌ ಫೈಟ್‌: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್‌ನಲ್ಲಿ ತುರುಸಿನ ಚುನಾವಣೆ

ಚುನಾವಣೆ ಘೋಷಣೆಗೂ ಮೊದಲು ಕ್ಯಾಂಪ್ಕೋ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಂದುಹೋಗಿದ್ದರು. ಅದರ ಲಾಭದ ನಿರೀಕ್ಷೆ ಬಿಜೆಪಿಗರಲ್ಲಿತ್ತು. ಆದರೆ ಅಭ್ಯರ್ಥಿ ಆಯ್ಕೆಯಲ್ಲಿನ ಅಸಮಾಧಾನ ಇದನ್ನು ಬುಡಮೇಲು ಮಾಡಿದೆ. ಈಗಾಗಲೇ ಸ್ಟಾರ್‌ ಕ್ಯಾಂಪೇನರ್‌, ರಾಜ್ಯದ ಸಹ ಉಸ್ತುವಾರಿ ಅಣ್ಣಾಮಲೈರನ್ನು ಕರೆಸಿ ಸಮಾವೇಶ ಹಾಗೂ ವಿಟ್ಲದಲ್ಲಿ ರೋಡ್‌ಶೋ ನಡೆಸಿದೆ. ಕೊನೇ ಹಂತದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಪುತ್ತೂರಿಗೆ ಕರೆಸಿ ಸಮಾವೇಶ ನಡೆಸಿ ಹಿಂದು ಮತಗಳನ್ನು ಕ್ರೋಢೀಕರಿಸುವ ತಂತ್ರಗಾರಿಕೆ ಹೆಣೆದಿದೆ.

ಕೈ ವಶಕ್ಕೆ ಸಿದ್ಧತೆ: ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ ಶಕುಂತಳಾ ಶೆಟ್ಟಿ2013ರಲ್ಲಿ ಇಲ್ಲಿ ಗೆದ್ದಿದ್ದರು. ಅದೇ ಫಲಿತಾಂಶ ಈ ಬಾರಿ ಪುನರಾವರ್ತನೆಯಾಗುವ ಆಶಯವನ್ನು ಕಾಂಗ್ರೆಸಿಗರು ಹೊಂದಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಟಿಕೆಟ್‌ ಗಿಟ್ಟಿಸಿಕೊಂಡ ಉದ್ಯಮಿ ಅಶೋಕ್‌ ಕುಮಾರ್‌ ರೈ ಅವರು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಹಿಂದೆ ತಾನು ನೆರವು ನೀಡಿದ ಫಲಾನುಭವಿಗಳ ಬೆಂಬಲ ನೆಚ್ಚಿಕೊಂಡದ್ದಲ್ಲದೆ, ಅಲ್ಪಸಂಖ್ಯಾತರ ಒಲವು ಗಳಿಸಲು ತಂತ್ರಗಾರಿಕೆ ಕೈಗೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಹಾಲಿ ಶಾಸಕರು ಏನೂ ಸಾಧನೆ ಮಾಡಿಲ್ಲ ಎಂದು ಜನತೆಗೆ ಮನವರಿಕೆ ಮಾಡಲು ಯತ್ನಿಸುತ್ತಿದ್ದಾರೆ. ಪುತ್ತೂರಿಗೆ ಡಿ.ಕೆ.ಶಿವಕುಮಾರ್‌ ಅಥವಾ ಸಿದ್ದರಾಮಯ್ಯ ಇಲ್ಲವೇ ಪಕ್ಷದ ಸ್ಟಾರ್‌ ಪ್ರಚಾರಕರನ್ನು ಕರೆಸಿ ಭರ್ಜರಿ ಪ್ರಚಾರ ನಡೆಸುವ ಇರಾದೆ ಹೊಂದಿದ್ದಾರೆ.

ಇದನ್ನೂ ಓದಿ: ಕ್ಷೇತ್ರ ಸಮೀಕ್ಷೆ ​ಬಳ್ಳಾರಿ: ಗಣಿನಾಡಲ್ಲಿ ರೆಡ್ಡಿ ಪ್ರವೇಶದಿಂದ ಚತುಷ್ಕೋನ ಸಮರ

ಪಕ್ಷೇತರ ತಂತ್ರಗಾರಿಕೆ: 2008ರಂತೆ ಈ ಬಾರಿ ಪುತ್ತೂರು ಬಿಜೆಪಿಯಲ್ಲಿ ಕಾಣಿಸಿದ ಬಂಡಾಯ ಪಕ್ಷಕ್ಕೆ ನಡುಕ ಹುಟ್ಟಿಸಿದರೆ, ಇದರ ಲಾಭ ತನಗೆ ದಕ್ಕುತ್ತದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ. ಬಿಜೆಪಿಯಿಂದ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಹಿಂದುತ್ವದ ಹೆಸರಿನಲ್ಲಿ ಕಣಕ್ಕಿಳಿದಿರುವ ಅರುಣ್‌ ಕುಮಾರ್‌ ಪುತ್ತಿಲ ಪರ ಹಿಂದೂ ಸಂಘಟನೆಗಳಿಂದ ಮಾತ್ರವಲ್ಲ, ಬಿಜೆಪಿ ಕಾರ್ಯಕರ್ತರಿಂದಲೂ ಸದ್ದಿಲ್ಲದೆ ಬೆಂಬಲ ವ್ಯಕ್ತವಾಗುತ್ತಿದೆ. ಪುತ್ತಿಲ ಹೋದ ಕಡೆಗಳಲ್ಲಿ ಜನ ಸೇರುತ್ತಿರುವುದು ಬಿಜೆಪಿ ಹಾಗೂ ಕಾಂಗ್ರೆಸ್‌ ಅನ್ನೂ ಕಂಗೆಡಿಸಿದೆ. ಸಾಮಾಜಿಕ ಜಾಲತಾಣದ ಮೂಲಕ ಭಾರೀ ಪ್ರಚಾರ ಕಾರ್ಯ ನಡೆಸುತ್ತಿರುವುದು ಪುತ್ತಿಗೆ ಅವರ ಪಾಲಿಗೆ ಪ್ಲಸ್‌ ಪಾಯಿಂಟ್‌.

ಪುತ್ತೂರಿನಲ್ಲಿ ಒಕ್ಕಲಿಗ ಹಾಗೂ ಮುಸ್ಲಿಂ ಮತಗಳೇ ಅಧಿಕ. ಆದರೆ ಈ ಕ್ಷೇತ್ರ ಹಿಂದುತ್ವದ ಪ್ರಯೋಗಶಾಲೆ ಆಗಿರುವುದರಿಂದ ಇಲ್ಲಿ ಜಾತಿವಾರು ಲೆಕ್ಕಾಚಾರ ಬಿಜೆಪಿ ಪಾಲಿಗೆ ಯಾವತ್ತೂ ಗೌಣ. ಇದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತವರು ಜಿಲ್ಲೆಯೂ ಆಗಿರುವುದರಿಂದ ಬಿಜೆಪಿ ಹಾಗೂ ಸಂಘಪರಿವಾರ ಇದನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಕಾಂಗ್ರೆಸ್‌ಗೆ ಲಾಭವಾದರೂ ಅಚ್ಚರಿ ಇಲ್ಲ. ಇಲ್ಲಿ ಯಾರು ಗೆದ್ದರೂ ಕೂದಲಂತರದಲ್ಲಿ ಎಂಬ ಪರಿಸ್ಥಿತಿ ಇದೆ. ಪುತ್ತೂರು ಕ್ಷೇತ್ರದಲ್ಲಿ ಈ ಬಾರಿ ಕಣದಲ್ಲಿ 8 ಮಂದಿ ಇದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ, ಕಾಂಗ್ರೆಸ್‌ನ ಅಶೋಕ್‌ ಕುಮಾರ್‌ ರೈ, ಬಂಡಾಯ ಪಕ್ಷೇತರ ಅರುಣ್‌ ಕುಮಾರ್‌ ಪುತ್ತಿಲ ಅಲ್ಲದೆ, ಜೆಡಿಎಸ್‌ನ ದಿವ್ಯಪ್ರಭಾ ಗೌಡ, ಆಮ್‌ ಆದ್ಮಿ ಪಾರ್ಟಿಯ ಡಾ.ಬಿ.ಕೆ.ವಿಷು ಕುಮಾರ್‌ ಗೌಡ, ಎಸ್‌ಡಿಪಿಐನ ಶಾಫಿ ಬೆಳ್ಳಾರೆ, ಕರ್ನಾಟಕ ರಾಷ್ಟ್ರಸಮಿತಿಯ ಐವನ್‌ ಫೆರಾವೋ ಪಿ, ಪಕ್ಷೇತರ ಸುಂದರ ಕೊಯಿಲ ಇದ್ದಾರೆ.

ಇದನ್ನೂ ಓದಿ: ಕ್ಷೇತ್ರ ಸಮೀಕ್ಷೆ ವಿಜಯಪುರ: ಕಮಲ ಬಿಗಿ ಹಿಡಿತದಿಂದ ಪಾರಾಗಲು ‘ಕೈ’ ಕಸರತ್ತು

ಜಾತಿ ಲೆಕ್ಕಾಚಾರ
ಒಕ್ಕಲಿಗ-50,000, ಮುಸ್ಲಿಂ-48,000, ಬಂಟ್ಸ್‌-28,000, ಬಿಲ್ಲವ-25,000, ದಲಿತ-25,000, ಬ್ರಾಹ್ಮಣ-15,000, ಇತರೆ-15,000

ಒಟ್ಟು ಮತದಾರರು
2,12,753, ಪುರುಷರು-1,04,918, ಮಹಿಳೆಯರು-1,07,832, ತೃತೀಯ ಲಿಂಗಿ-3

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಕಾಂಗ್ರೆಸ್‌ನದು 85% ಕಮಿಷನ್‌ ಸರ್ಕಾರ; ಇದನ್ನು ಆ ಪಕ್ಷದ ಪ್ರಧಾನಿಯೇ ಒಪ್ಪಿಕೊಂಡಿದ್ರು: 40% ಆರೋಪಕ್ಕೆ ಮೋದಿ ತಿರುಗೇಟು

click me!