ಇದೇ ಮೊದಲ ಬಾರಿ ಬಿಜೆಪಿ ವರ್ಸಸ್‌ ಶೆಟ್ಟರ್‌ ಫೈಟ್‌: ಹುಬ್ಬಳ್ಳಿ - ಧಾರವಾಡ ಸೆಂಟ್ರಲ್‌ನಲ್ಲಿ ತುರುಸಿನ ಚುನಾವಣೆ

By Kannadaprabha News  |  First Published May 1, 2023, 3:19 PM IST

ಬಿಜೆಪಿ ಭದ್ರಕೋಟೆಯಿದು. ಬಿಜೆಪಿ ಅತ್ಯಂತ ಸಲೀಸಾಗಿ ಗೆಲ್ಲುತ್ತಿದ್ದ ಕ್ಷೇತ್ರವಿದು. ಆದರೆ ಈ ಸಲ ಪರಿಸ್ಥಿತಿ ಹಾಗಿಲ್ಲ. 30 ವರ್ಷದಿಂದ ಬಿಜೆಪಿಯಿಂದ ಆಯ್ಕೆಯಾಗುತ್ತಿದ್ದ ಶೆಟ್ಟರ್‌ಗೆ ಈ ಸಲ ಟಿಕೆಟ್‌ ನಿರಾಕರಣೆ ಮಾಡಲಾಗಿದ್ದು ಅವರು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದಾರೆ. 


(ಶಿವಾನಂದ ಗೊಂಬಿ)
ಹುಬ್ಬಳ್ಳಿ (ಮೇ 1, 2023): ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕಾರಣ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿವರ್ತನೆಯಾಗಿದೆ. ಇಲ್ಲಿ ಬಿಜೆಪಿ ವರ್ಸಸ್‌ ಕಾಂಗ್ರೆಸ್‌ ಬದಲು ಬಿಜೆಪಿ ವರ್ಸಸ್‌ ಶೆಟ್ಟರ್‌ ಚುನಾವಣೆ ಎಂಬಂತಾಗಿರುವುದು ವಿಶೇಷ.

ರಾಷ್ಟ್ರಧ್ವಜ ತಯಾರಿಸುವ ಏಕೈಕ ಕೇಂದ್ರವಾಗಿರುವ ಬೆಂಗೇರಿ ಖಾದಿ ಗ್ರಾಮೋದ್ಯೋಗ ಇರುವುದು ಇದೇ ಕ್ಷೇತ್ರದಲ್ಲಿ. ಈ ಕಾರಣದಿಂದ ಹುಬ್ಬಳ್ಳಿಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದು ಕೊಟ್ಟಕ್ಷೇತ್ರ ಇದು. ಇಬ್ಬರು ಮುಖ್ಯಮಂತ್ರಿಗಳನ್ನು (ಎಸ್‌.ಆರ್‌.ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌) ನೀಡಿರುವ ಕ್ಷೇತ್ರವಿದು. 1994ರಿಂದ ಕ್ಷೇತ್ರದಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಅನಭಿಷಿಕ್ತ ನಾಯಕರೆಂಬಂತೆ ಆಯ್ಕೆಯಾಗುತ್ತಾ ಬಂದವರು. ಬಿಜೆಪಿ ಭದ್ರಕೋಟೆಯಿದು. ಬಿಜೆಪಿ ಅತ್ಯಂತ ಸಲೀಸಾಗಿ ಗೆಲ್ಲುತ್ತಿದ್ದ ಕ್ಷೇತ್ರವಿದು. ಆದರೆ ಈ ಸಲ ಪರಿಸ್ಥಿತಿ ಹಾಗಿಲ್ಲ.
30 ವರ್ಷದಿಂದ ಬಿಜೆಪಿಯಿಂದ ಆಯ್ಕೆಯಾಗುತ್ತಿದ್ದ ಶೆಟ್ಟರ್‌ಗೆ ಈ ಸಲ ಟಿಕೆಟ್‌ ನಿರಾಕರಣೆ ಮಾಡಲಾಗಿದೆ. ಬಿಜೆಪಿಯಿಂದ ಮಹೇಶ ಟೆಂಗಿನಕಾಯಿಗೆ ಟಿಕೆಟ್‌ ನೀಡಲಾಗಿದೆ. ಇದರಿಂದ ಮುನಿಸಿಕೊಂಡಿರುವ ಶೆಟ್ಟರ್‌, ಪಕ್ಷ ಅವಮಾನಿಸಿದೆ ಎಂದು ಆರೋಪಿಸಿ ಕಾಂಗ್ರೆಸ್‌ಗೆ ಸೇರಿ ಅಲ್ಲಿಂದ ಕಣಕ್ಕಿಳಿದಿದ್ದಾರೆ. ಯಾರೂ ನಿರೀಕ್ಷಿಸದ ರಾಜಕೀಯ ಬೆಳವಣಿಗೆಗೆ ಇದು ಕಾರಣವಾದಂತಾಗಿದೆ.

Tap to resize

Latest Videos

ಇದನ್ನು ಓದಿ: ಕ್ಷೇತ್ರ ಸಮೀಕ್ಷೆ ​ಬಳ್ಳಾರಿ: ಗಣಿನಾಡಲ್ಲಿ ರೆಡ್ಡಿ ಪ್ರವೇಶದಿಂದ ಚತುಷ್ಕೋನ ಸಮರ

ಶೆಟ್ಟರ್‌ ವರ್ಸಸ್‌ ಬಿಜೆಪಿ: ಶೆಟ್ಟರ್‌ ಬಿಜೆಪಿ ತೊರೆದಿರುವುದು ಆ ಪಕ್ಷಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಕ್ಷೇತ್ರ ಉಳಿಸಿಕೊಳ್ಳಬೇಕು, ಜತೆಗೆ ಬೇರೆ ಬೇರೆ ಕ್ಷೇತ್ರಗಳ ಮೇಲೆ ಆಗುತ್ತಿರುವ ಪರಿಣಾಮವನ್ನೂ ತಡೆಯುವುದು ಬಿಜೆಪಿಗೆ ಸವಾಲು. ಹೀಗಾಗಿ ಬಿಜೆಪಿಗೆ ಈ ಕ್ಷೇತ್ರ ಪ್ರತಿಷ್ಠೆಯಾಗಿದ್ದು, ಕ್ಷೇತ್ರವನ್ನು ಕೇಂದ್ರೀಕೃತ ಮಾಡಿಕೊಂಡಂತಾಗಿದೆ. ಪಕ್ಷಕ್ಕೆ ಸಡ್ಡು ಹೊಡೆದಿರುವ ಶೆಟ್ಟರ್‌ ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂಬ ಒಂದು ಸಾಲಿನ ಫರ್ಮಾನು ಹೈಕಮಾಂಡ್‌ನದ್ದು. ರಾಷ್ಟ್ರೀಯ, ರಾಜ್ಯ ನಾಯಕರೆಲ್ಲರೂ ನಾಲ್ಕಾರು ಸುತ್ತುಗಳಲ್ಲಿ ಪ್ರಚಾರ ಕೈಗೊಂಡು ಶೆಟ್ಟರ್‌ ಪಕ್ಷ ಬಿಟ್ಟಿರುವುದರಿಂದ ಆಗಿರುವ ಡ್ಯಾಮೇಜ್‌ ಕಂಟ್ರೋಲ್‌ ಮಾಡಲೆತ್ನಿಸುತ್ತಿದ್ದಾರೆ. ಜತೆಗೆ ಬಿಜೆಪಿ ಮತ ಹಿಡಿದಿಟ್ಟುಕೊಳ್ಳಲು ಬೆವರಿಳಿಸುತ್ತಿದ್ದಾರೆ.

ಇನ್ನು ಬಿಜೆಪಿ ತೊರೆದಿರುವ ಶೆಟ್ಟರ್‌ಗೂ ಇದು ಪ್ರತಿಷ್ಠೆಯೇ ಆಗಿದೆ. ತಮ್ಮ ತಾಕತ್ತು ಏನೆಂಬುದನ್ನು ತೋರಿಸಬೇಕು. ಜತೆಗೆ ತಮ್ಮ ರಾಜಕೀಯ ಭವಿಷ್ಯ ಭದ್ರ ಪಡಿಸಿಕೊಳ್ಳಬೇಕು ಎಂದರೆ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯ. ಹೀಗಾಗಿ, ಇತ್ತ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಹಾಗೂ ಅತ್ತ ಕಾಂಗ್ರೆಸ್‌ ಪಕ್ಷ ಎರಡೂ ಗೌಣವೇ ಆಗಿದ್ದು, ಸ್ಪರ್ಧೆ ಏನಿದ್ದರೂ ಶೆಟ್ಟರ್‌ ವರ್ಸಸ್‌ ಬಿಜೆಪಿ ಎಂಬಂತಾಗಿದೆ. ಪ್ರತಿಸಲ ಸಲೀಸಾಗಿ ಗೆದ್ದು ಬರುತ್ತಿದ್ದ ಬಿಜೆಪಿಗೆ ಈ ಸಲ ಕಷ್ಟವಾಗಿರುವುದಂತೂ ಸ್ಪಷ್ಟ.

ಇದನ್ನೂ ಓದಿ: ಕ್ಷೇತ್ರ ಸಮೀಕ್ಷೆ ವಿಜಯಪುರ: ಕಮಲ ಬಿಗಿ ಹಿಡಿತದಿಂದ ಪಾರಾಗಲು ‘ಕೈ’ ಕಸರತ್ತು

ಹಾಗಂತ ಶೆಟ್ಟರ್‌ಗೆ ಚುನಾವಣೆ ಸುಲಭ ಎನ್ನುವಂತಿಲ್ಲ. ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳ ಜೊತೆಗೆ ಬಿಜೆಪಿ ಮತಗಳನ್ನೂ ಸೆಳೆಯಲೇಬೇಕು. ಅದಕ್ಕಾಗಿ ತಮ್ಮ 30 ವರ್ಷದ ರಾಜಕೀಯ ಅಸ್ತ್ರಗಳನ್ನೆಲ್ಲ ಬಳಸುತ್ತಿದ್ದಾರೆ. ಟಿಕೆಟ್‌ ನಿರಾಕರಣೆಗೆ ಕಾರಣ ಯಾರೆಂದು ಹೇಳುತ್ತಿರುವ ಶೆಟ್ಟರ್‌ ಇದು ತಮಗಾದ ಅವಮಾನವಲ್ಲ, ಲಿಂಗಾಯತರಿಗೆ ಮಾಡಿದ ಅಪಮಾನ ಎಂದು ಲಿಂಗಾಯತ ದಾಳ ಉರುಳಿಸುತ್ತಿದ್ದಾರೆ. ಇನ್ನು ಬಿಜೆಪಿ ಕೂಡ 2ನೇ ಪೀಳಿಗೆ ಬೆಳೆಸಲು ಲಿಂಗಾಯತ ಯುವಕನಿಗೇ ಟಿಕೆಟ್‌ ನೀಡಿದ್ದೇವೆ ಎಂದು ಪ್ರತಿ ದಾಳ ಉರುಳಿಸುತ್ತಿದೆ. ಎರಡೂ ಕಡೆಯಲ್ಲೂ ಅತ್ಯಂತ ತುರುಸು ನಡೆಯುತ್ತಿರುವುದಂತೂ ಸ್ಪಷ್ಟವಾಗಿದೆ.

ಯಾರೇ ಗೆದ್ದರೂ ಇಲ್ಲಿ ಸ್ಪಷ್ಟ ರಾಜಕೀಯ ಸಂದೇಶ ದೊರೆಯುವುದಂತೂ ಖಚಿತ. ಹೀಗಾಗಿ ಇಡೀ ದೇಶದ ಕುತೂಹಲವನ್ನು ಕ್ಷೇತ್ರ ಕೆರಳಿಸಿರುವುದಂತೂ ಸತ್ಯ.

ಇದನ್ನೂ ಓದಿ: ಕಾಂಗ್ರೆಸ್‌ನದು 85% ಕಮಿಷನ್‌ ಸರ್ಕಾರ; ಇದನ್ನು ಆ ಪಕ್ಷದ ಪ್ರಧಾನಿಯೇ ಒಪ್ಪಿಕೊಂಡಿದ್ರು: 40% ಆರೋಪಕ್ಕೆ ಮೋದಿ ತಿರುಗೇಟು

ಹಿನ್ನೋಟ: 1957ರಿಂದ ಈವರೆಗೆ ಒಟ್ಟು 14 ಚುನಾವಣೆ ಎದುರಿಸಿರುವ ಕ್ಷೇತ್ರದಲ್ಲಿ 5 ಬಾರಿ ಕಾಂಗ್ರೆಸ್‌, 3 ಬಾರಿ ಜೆಎನ್‌ಪಿ, 6 ಬಾರಿ ಬಿಜೆಪಿ ಗೆಲುವು ಕಂಡಿದೆ. ಕಾಂಗ್ರೆಸ್‌ನ ಎಂ.ಆರ್‌.ಪಾಟೀಲ, ಜೆಎನ್‌ಪಿಯಿಂದ ಎಸ್‌.ಆರ್‌.ಬೊಮ್ಮಾಯಿ ತಲಾ 3 ಬಾರಿ, ಕಾಂಗ್ರೆಸ್‌ನ ಗೋಪಿನಾಥ ಸಾಂಡ್ರಾ 2 ಸಲ ಚುನಾಯಿತರಾಗಿದ್ದರೆ. ಆರು ಚುನಾವಣೆಗಳಲ್ಲಿ ಜಗದೀಶ್‌ ಶೆಟ್ಟರ್‌ ಅವರದ್ದೇ ಇಲ್ಲಿ ಪಾರುಪತ್ಯ. ಬೊಮ್ಮಾಯಿ ಹಾಗೂ ಶೆಟ್ಟರ್‌ ಇಲ್ಲಿಂದ ಗೆದ್ದು ಮುಖ್ಯಮಂತ್ರಿಯಾದವರು.

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ 2.43 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಇದರಲ್ಲಿ ಲಿಂಗಾಯತ 75 ಸಾವಿರಕ್ಕೂ ಅಧಿಕ, ಮುಸ್ಲಿಂ 45 ಸಾವಿರ, ಎಸ್‌ಎಸ್‌ಕೆ 25 ಸಾವಿರ, ಬ್ರಾಹ್ಮಣ 10 ಸಾವಿರ, ಒಬಿಸಿ 33 ಸಾವಿರ, ಎಸ್ಸಿ-ಎಸ್ಟಿ 40 ಸಾವಿರ, ಕ್ರಿಶ್ಚಿಯನ್‌ 15 ಸಾವಿರ ಮತದಾರರಿದ್ದಾರೆ. ಲಿಂಗಾಯತ ಮತದಾರರೇ ಇಲ್ಲಿ ನಿರ್ಣಾಯಕ.

ಕರಕೊಂಡು ಬಂದು ಹೊರನಡೆದರು!
ಶೆಟ್ಟರ್‌ ವಿರುದ್ಧ ಸ್ಪರ್ಧಿಸಿದ್ದ ಈಗಿನ ಸಿಎಂ ಬಸವರಾಜ ಬೊಮ್ಮಾಯಿ, ವಿಜಯ ಸಂಕೇಶ್ವರ, ಶಂಕರಣ್ಣ ಮುನವಳ್ಳಿ, ರಾಜಣ್ಣ ಕೊರವಿ, ಮಹೇಶ ನಾಲ್ವಾಡ ಸೇರಿ ಹಲವರು ಇದೀಗ ಬಿಜೆಪಿಯಲ್ಲಿರುವುದು ವಿಶೇಷ. ಇವರೆಲ್ಲರನ್ನು ಬಿಜೆಪಿಗೆ ಕರೆತಂದಿದ್ದು ಶೆಟ್ಟರ್‌. ಇದೀಗ ಅವರೇ ಬಿಜೆಪಿ ತೊರೆದಿರುವುದು ವಿಪರ್ಯಾಸ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.

click me!