ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ನಡೆದಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮೇ 09): ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ನಡೆದಿದೆ. ಆಯಾ ಕ್ಷೇತ್ರದ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ನಡೆಸಲಾಗುತ್ತಿದೆ. ವಿಜಯಪುರ ಶೈನಿಕ ಶಾಲಾ ಆವರಣದಲ್ಲಿ ಮಸ್ಟರಿಂಗ್ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 2078 ಮತಗಟ್ಟೆಗಳು ತೆರೆಯಲಾಗಿದೆ. 1049 ವೆಬ್ ಕಾಸ್ಟಿಂಗ್ ಸೌಲಭ್ಯ ಹಾಗೂ 204 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಕ ಮಾಡಲಾಗಿದೆ. ಇದರ ಜತೆ 60 ವಿಡಿಯೋ ಗ್ರಾಫರ್ ಗಳ ನೇಮಕ ಸಹ ಮಾಡಲಾಗಿದೆ. ಮತದಾನಕ್ಕಾಗಿ 20,000 ಸಿಬ್ಬಂದಿ ನೇಮಕಗೊಂಡಿದ್ದಾರೆ. ತಮ್ಮ ತಮ್ಮ ಮತಗಟ್ಟೆಗಳಿಗೆ ಇವಿಎಂ ಜತೆ ಸಿಬ್ಬಂದಿಗಳು ಬಸ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ಮತದಾನ ಹೆಚ್ಚಳಕ್ಕೆ ಕ್ರಮ:
ಕಳೆದ 2018ರ ಚುನಾವಣೆ ಯಲ್ಲಿ ರಾಜ್ಯದಲ್ಲಿ ಮತದಾನ ಪ್ರಮಾಣ ತೀವ್ರ ಕುಂಠಿತಗೊಂಡ ಕ್ಷೇತ್ರಗಳಲ್ಲಿ ಜಿಲ್ಲೆಯ 5 ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಶೇ. 69.69ರಷ್ಟು ಮತದಾನ ವಾಗಿತ್ತು. ಹೀಗಾಗಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ವ್ಯಾಪಕ ಜಾಗೃತಿ ಮೂಡಿಸಲಾಗಿದೆ. ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಲಾಗಿದೆ.
ಎಲ್ಲೆಡೆಯೂ ಬಿಗಿ ಭದ್ರತೆ:
ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ಗಳಲ್ಲಿ ಸಾಮಾನ್ಯ, ಸೂಕ್ಷ್ಮ, ಅತಿ ಸೂಕ್ಷ್ಮ ಹಾಗೂ ಕ್ಲಸ್ಟರ್ ಮತಗಟ್ಟೆಗಳೆಂದು ವಿಭಜಿಸಲಾಗಿದ್ದು, ಚುನಾವಣಾ ಕರ್ತವ್ಯಕ್ಕಾಗಿ 6 ಡಿಎಸ್‌ಪಿ, 17 ಸಿಪಿಐ, 54 ಪಿಎಸ್‌ಐ, 357 ಎಎಸ್‌ಐ, 1127 ಹೆಡ್ ಕಾನ್ಸಟೇಬಲ್, 750 ಹೋಂಗಾರ್ಡ್ ಸೇರಿದಂತೆ 2113 ಜನರನ್ನು ನೇಮಿಸಿದ್ದು, ಹೊರ ಜಿಲ್ಲೆಯಿಂದ 3 ಡಿಎಸ್‌ಪಿ, 16 ಸಿಪಿಐ, 7 ಪಿಎಸ್‌ಐ ಹಾಗೂ 1 ಎಎಸ್‌ಐ ಮತ್ತು 351 ಕಾನ್ಸಟೇಬಲ್ ಸೇರಿದಂತೆ 678 ಪೊಲೀಸರನ್ನು ನಿಯೋಜಿಸ ಲಾಗಿದೆ. ಕೇಂದ್ರ ಮೀಸಲು ಪಡೆಯ 24 ಪಡೆಗಳು, ಐಆರ್‌ಬಿ-ಕೆಎಸ್‌ಆರ್‌ಪಿ- 8, ಡಿಎಆರ್-3 ತುಕಡಿಗಳು ಸೇರಿದಂತೆ ಒಟ್ಟು 5,256 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಭ್ಯರ್ಥಿಗಳು-ಮತದಾರರ ವಿವರ ಹೀಗಿದೆ:
ಎಂಟು ಕ್ಷೇತ್ರಗಳಲ್ಲಿ ಒಟ್ಟು 95 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುದ್ದೇಬಿಹಾಳ-8, ದೇವರಹಿಪ್ಪರಗಿ-13, ಬಸವನಬಾಗೇವಾಡಿ-13, ಬಬಲೇಶ್ವರ-14, ವಿಜಯಪುರ ನಗರ-14, ನಾಗಠಾಣ-15, ಇಂಡಿ-9 ಹಾಗೂ ಸಿಂದಗಿ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 18,92,852 ಮತದಾರರಿದ್ದಾರೆ. ಜಿಲ್ಲೆಯಲ್ಲಿರುವ 1851 ಸೇವಾ ಮತದಾರರಿಗೆ ಈಗಾಗಲೇ ಇಟಿಪಿಬಿಎಸ್ ಮೂಲಕ ಅಂಚೆ ಮತಪತ್ರ ಕಳುಹಿಸಲಾಗಿದೆ.
ಮತಗಟ್ಟೆ ವಿವರಗಳು:
ಜಿಲ್ಲೆಯಾದ್ಯಂತ 64 ವಿಶೇಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. 40 ಸಖಿ ಮತಗಟ್ಟೆ, 8 ಅಂಗವಿಕಲ, 8 ಯುವ ಮತದಾರರ ಮತಗಟ್ಟೆ ಹಾಗೂ 8 ವಿಷಯಾಧಾರಿತ, ಹೆಚ್ಚುವರಿ 6 ಮತಗಟ್ಟೆ ಸೇರಿ 2078 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 33 ವಲ್ನರೇಬಲ್ ಮತಗಟ್ಟೆಗಳು ಸೇರಿದಂತೆ 334 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸ ಲಾಗಿದೆ. ಈ ಮತಗಟ್ಟೆಗಳ ಪೈಕಿ 274 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್‌ವರ್, 60 ಮತಗಟ್ಟೆಗ ಳಲ್ಲಿ ವಿಡಿಯೋ ಗ್ರಾಫಿ ವ್ಯವಸ್ಥೆ ಹಾಗೂ ಎಲ್ಲ 334 ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಿ ಮತದಾನಕ್ಕೆ ಪ್ರೇರೇಪಿಸಲು ಶೇಕಡಾವಾರು ಮತದಾನ ಕಡಿಮೆ ಇರುವ ಒಂದು ಸಾವಿರಕ್ಕಿಂತ ಹೆಚ್ಚಿನ ಮತಗಟ್ಟೆಗಳಲ್ಲಿ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸ ಲಾಗಿದೆ. ವೇಟಿಂಗ್ ರೂಂಗಳ ಸ್ಥಾಪನೆ, ಅವಶ್ಯವಿರುವ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ, ಅಂಗವಿಕಲ ಮತದಾರರಿಗೆ ವ್ಹೀಲ್ ಚೇರ್, ಭೂತಕನ್ನಡಕ ಹಾಗೂ ಬ್ರೈಲ್ ಬ್ಯಾಲೆಟ್ ಪೇಪರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹಿಂದೂ ರಾಷ್ಟ್ರಕ್ಕಾಗಿ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಬೇಕು: ಗೋವಾ ಸಿಎಂ ಸಾವಂತ
ಚುನಾವಣಾ ಸಿಬ್ಬಂದಿ ವಿವರ:
ಜಿಲ್ಲಾದ್ಯಂತ ಸ್ಥಾಪಿಸಲಾದ 2078 ಮತಗಟ್ಟೆಗಳಿಗೆ ಮತಗಟ್ಟೆಗೊಬ್ಬರಂತೆ ಅಧ್ಯಕ್ಷಾಧಿಕಾರಿ, ಒಬ್ಬ ಸಹಾಯಕ ಅಧ್ಯಕ್ಷಾಧಿಕಾರಿ ಇಬ್ಬರು ಮತಗಟ್ಟೆ ಅಧಿಕಾರಿ ಸೇರಿ ವಿವಿಧ ಹಂತಗಳಲ್ಲಿ 9884 ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮುದ್ದೇಬಿಹಾಳ-1164, ದೇವರಹಿಪ್ಪರಗಿ-1192, ಬಸವನಬಾಗೇವಾಡಿ-1114, ಬಬಲೇಶ್ವರ-1158, ವಿಜಯಪುರ ನಗರ ಕ್ಷೇತ್ರ-1304, ನಾಗಠಾಣ-1399, ಇಂಡಿ-1270 ಹಾಗೂ ಸಿಂದಗಿ ಮತಕ್ಷೇತ್ರಕ್ಕೆ 1283 ಸಿಬ್ಬಂದಿ ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ ಶೇ.20 ಸಿಬ್ಬಂದಿಯನ್ನು ಕಾಯ್ದಿರಿಸ ಲಾಗಿದೆ. ಒಟ್ಟು 7744 ವಿದ್ಯುನ್ಮಾನ ಯಂತ್ರ ಬಳಕೆ: ಮುದ್ದೇಬಿಹಾಳ-903, ದೇವರಹಿಪ್ಪರಗಿ-934, ಬಸವನಬಾಗೇವಾಡಿ-860, ಬಬಲೇಶ್ವರ-908, ವಿಜಯಪುರ ನಗರ-1026, ನಾಗಠಾಣ-1109, ಇಂಡಿ-993 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 1011 ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
Karnataka Assembly Election 2023 Live Updates: ಮಹಿಳೆಯರಿಗಾಗಿ ಪಿಂಕ್ ಬೂತ್
ಮಾದರಿ ನೀತಿ ಸಂಹಿತೆ ಹೀಗಿದೆ:
ಮಾದರಿ ನೀತಿ ಸಂಹಿತಿ ಉಲ್ಲಂಘನೆಗೆ ಸಂಬಂಧ ಪಟ್ಟಂತೆ 1356 ದೂರುಗಳನ್ನು ಸ್ವೀಕರಿಸಲಾಗಿದ್ದು, 29 ಪ್ರಕರಣಗಳನ್ನು ದಾಖಲಿಸಲಾಗಿದೆ. 2,49,06,774.92 ರೂ. ಮೊತ್ತದ ವಸ್ತು-ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮೇ 8ರ ಸಂಜೆ 5ರಿಂದ ಮೇ 11ರಂದು ಮತದಾನ ಮುಕ್ತಾಯವಾಗುವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚೆ ಮೇ 8ರ ಸಂಜೆ 6 ರಿಂದ ಮೇ 10ರ ಮಧ್ಯರಾತ್ರಿ 12ರವರೆಗೆ ಎಲ್ಲ ತಹರದ ಮದ್ಯ ಮಾರಾಟ, ಸಂಗ್ರಹಣೆ, ಶೇಖರಣೆ ಮಾಡುವುದು ನಿಷೇಧಿಸ ಲಾಗಿದೆ. ಮೇ 9 ಹಾಗೂ 10ರಂದು ನಡೆಯುವ ಸಂತೆ ಹಾಗೂ ಜಾತ್ರೆ- ಮಹೋತ್ಸವ ಗಳನ್ನು ಜಿಲ್ಲೆಯಾದ್ಯಂತ ನಿಷೇಧಿಸಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.