ಬೆಳಗಾವಿ ತಹಶಿಲ್ದಾರ್ ಕಚೇರಿಯಲ್ಲಿ ಎಫ್‌ಡಿಸಿ ರುದ್ರಣ್ಣ ಯಡವಣ್ಣನವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಚಿವರ ಆಪ್ತ ಸಹಾಯಕನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಬೆಳಗಾವಿ (ಅ.05): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈಗಾಗಲೇ ವಾಲ್ಮೀಕಿ ನಿಗಮದ ಹಗರಣದಲ್ಲಿ ಶಿವಮೊಗ್ಗದಲ್ಲಿ ಸರ್ಕಾರಿ ನೌಕರ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು. ಇದರ ಬೆನ್ನಲ್ಲಿಯೇ ಸಚಿವರು ರಾಜೀನಾಮೆ ನೀಡಿ, ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇದೀಗ ಪುನಃ ಬೆಳಗಾವಿಯಲ್ಲಿ ಮತ್ತೊಬ್ಬ ಸರ್ಕಾರಿ ನೌಕರ ರಾಜ್ಯ ಸರ್ಕಾರದ ಸಚಿವರ ಆಪ್ತ ಸಹಾಯಕನ ಹೆಸರನ್ನು ಬರೆದಿಟ್ಟು ತಹಸೀಲ್ದಾರರ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೌದು, ಬೆಳಗಾವಿ ತಹಶಿಲ್ದಾರ್ ಕಚೇರಿಯಲ್ಲಿ ಎಫ್‌ಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಶಿಲ್ದಾರ್ ಆಫೀಸ್‌ನಲ್ಲಿ ಘಟನೆ ನಡೆದಿದೆ. ತಹಶಿಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ರುದ್ರಣ್ಣ ಯಡವಣ್ಣನವರ ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರನಾಗಿದ್ದಾರೆ. ತಹಶೀಲ್ದಾರ್ ಬಸವರಾಜ ನಾಗರಾಳ ಕಚೇರಿಯಲ್ಲಿಯೇ ನೇಣುಬಿಗಿದುಕೊಂಡಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
undefined
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಅವ್ಯವಹಾರ; ಸಚಿವರ ಹೆಸರು ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ
ಇನ್ನು ಸರ್ಕಾರಿ ನೌಕರ ಆತ್ಮಹತ್ಯೆಗೆ ಶರಣಾಗುವ ಮುನ್ನ ರಾಜ್ಯ ಸರ್ಕಾರದ ಪ್ರಭಾವಿ ಸಚಿವರ ಆಪ್ತ ಸಹಾಯಕನ (ಪಿಎ) ಹೆಸರು ಬರೆದಿಟ್ಟಿದ್ದಾರೆ. ಬೆಳಗಾವಿಯ ತಹಶಿಲ್ದಾರ್ ಬಸವರಾಜ್ ನಾಗರಾಳ ಚೇಂಬರ್‌ನಲ್ಲಿಯೇ ಕೆಲಸ ಮಾಡುತ್ತಿದ್ದ ಎಫ್‌ಡಿಸಿ ರುದ್ರಣ್ಣ ಯಡಣ್ಣವರ ಇದೇ ಬೆಳಗಾವಿ ಜಿಲ್ಲೆಯ ರಾಯಭಾಗ ಮೂಲದರಾಗಿದ್ದರು. ಇನ್ನು ನೌಕರ ಬರೆದಿಟ್ಟಿದ್ದ ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂದಿದ್ದಾರೆ. ಘಟನಾ ಸ್ಥಳಕ್ಕೆ ತಹಶಿಲ್ದಾರ್, ಖಡೇಬಜಾರ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಕಾರ್ಯದರ್ಶಿ ಹೆಸರು ಉಲ್ಲೇಖ:
ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಗ್ರೂಪ್‌ಲ್ಲಿ ಸಂದೇಶ ರವಾನಿಸಿದ್ದ ರುದ್ರಣ್ಣ. ಬೆಳಗಾವಿ ತಹಶಿಲ್ದಾರ್ ಕಚೇರಿ ಸಿಬ್ಬಂದಿಯ ವಾಟ್ಸಪ್ ಗ್ರೂಪಲ್ಲಿ ಸಂದೇಶ ರವಾನೆ. ನಾನು ಆತ್ಮಹತ್ಯೆಗೆ ಶರಣಾಗುವುದಾಗಿ ಗ್ರೂಪ್‌ನಲ್ಲಿ ಮೆಸೆಜ್ ಮಾಡಿದ್ದರು. ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ ಹಾಗೂ ಸಚಿವರ ಆಪ್ತ ಸಹಾಯಕ ಸೋಮು ಅವರೇ ಕಾರಣ. ಇನ್ನು ಡೆತ್ ನೋಟ್‌ನಲ್ಲಿ ಬರೆದಿಟ್ಟ ಸೋಮು ದೊಡದವಾದ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಕಾರ್ಯದರ್ಶಿ ಆಗಿದ್ದಾರೆ. ನಮ್ಮ ತಹಶಿಲ್ದಾರ್ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಮೆಸೇಜ್ ಮೂಲಕ ಮನವಿ ಮಾಡಿದ್ದು, ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವರ್ಗಾವಣೆಯಾಗಿದ್ದ ರುದ್ರಣ: ಇನ್ನು ಮೃತ ಸರ್ಕಾರಿ ನೌಕರ ರುದ್ರಣ್ಣ ಅವರು ನಿನ್ನೆಯಷ್ಟೇ ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆ ಆಗುದ್ದರು. ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರಿಂದ ಆದೇಶ ಹೊರಡಿಸಲಾಗಿತ್ತು. ಎಫ್‌ಡಿಸಿ ರುದ್ರಣ್ಣ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಟುಂಬಸ್ಥರ ಭೇಟಿ ನಿಡಿದ್ದಾರೆ. ರುದ್ರಣ್ಣನ ಪತ್ನಿ ಗಿರಿಜಾ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.