ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಕಾರ್ಕಳ ಕೃಷ್ಣಶಿಲೆ ರವಾನೆ

By Kannadaprabha News  |  First Published Mar 18, 2023, 6:35 AM IST

ನೆಲ್ಲಿಕಾರಿನಿಂದ ಹೊರಟ 9 ಟನ್‌ ತೂಕದ, 10 ಅಡಿ ಉದ್ದದ ಕಲ್ಲು, ಅಂತಿಮವಾಗಿ ಆಯ್ಕೆಯಾದರೆ ಈ ಶಿಲೆಯಿಂದಲೇ ವಿಗ್ರಹ. 


ರಾಂ ಅಜೆಕಾರು

ಕಾರ್ಕಳ(ಮಾ.18):  ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಸ್ಥಾಪನೆಯಾಗಲಿರುವ ರಾಮಲಲ್ಲಾನ ಮೂರ್ತಿ ಕೆತ್ತನೆಗೆ ಆಯ್ಕೆ ಮಾಡಲಾದ 2-3 ಶಿಲೆಗಳ ಪೈಕಿ ಉಡುಪಿ ಜಿಲ್ಲೆಯ ಕಾರ್ಕಳದ ಕೃಷ್ಣಶಿಲೆಯನ್ನೂ ಆಯ್ಕೆ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಶಿಲೆಯಿಂದ ರಾಮಲಲ್ಲಾನ ಮೂರ್ತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಗುರುವಾರ ರಾತ್ರಿ ಕಾರ್ಕಳ ತಾಲೂಕಿನ ಈದು ಗ್ರಾಮದ ತುಂಗಾ ಪೂಜಾರಿ ಮನೆಯಿಂದ ನೆಲ್ಲಿಕಾರು ಮಾದರಿಯ ಶಿಲೆಯನ್ನು ಬೃಹತ್‌ ಲಾರಿ ಮೂಲಕ ಅಯೋಧ್ಯೆಗೆ ಸಾಗಿಸಲಾಯಿತು.

Latest Videos

undefined

ಈಗಾಗಲೇ ನೇಪಾಳ ಸೇರಿ ಎರಡ್ಮೂರು ಕಡೆಗಳಿಂದ ರಾಮಲಲ್ಲಾನ ಮೂರ್ತಿ ನಿರ್ಮಾಣಕ್ಕೆ ವಿಶಿಷ್ಟಶಿಲೆಗಳನ್ನು ಅಯೋಧ್ಯೆಗೆ ತರಿಸಲಾಗಿದೆ. ಆ ಪಟ್ಟಿಗೆ ಇದೀಗ ಕಾರ್ಕಳದ ಶಿಲೆಯೂ ಸೇರಿದೆ. ಈ ಶಿಲೆಗಳ ಪೈಕಿ ಸೂಕ್ತವಾದುದನ್ನು ಮೂರ್ತಿ ನಿರ್ಮಾಣಕ್ಕೆ ಬಳಸಲಾಗುವುದು ಎಂದು ತಿಳಿದುಬಂದಿದೆ.

ಉಡುಪಿ: ಕಡಿಯಾಳಿ ದೇವಸ್ಥಾನದಲ್ಲಿ ಧ್ವಜ ಪ್ರತಿಷ್ಠೆ ಧೂಳಿ ಮಂಡಲ

ಕೆಲ ತಿಂಗಳ ಹಿಂದೆ ಖ್ಯಾತ ಶಿಲಾ ತಜ್ಞ ಖಷ್ದೀಪ್‌ ಬನ್ಸಾಲ್‌ ಮುಂತಾದ ತಜ್ಞರ ಜೊತೆಗೂಡಿ ಸ್ಥಳೀಯ ಬಜರಂಗದಳ ಕಾರ್ಯಕರ್ತರು ಈ ನೆಲ್ಲಿಕಾರು ಶಿಲೆಯನ್ನು ಪರೀಕ್ಷಿಸಿದ್ದರು. ಮೂರ್ತಿ ನಿರ್ಮಾಣಕ್ಕೆ ಅತ್ಯುತ್ತಮವಾದುದು ಎಂದು ಮನವರಿಕೆಯಾದ ನಂತರ ಅಯೋಧ್ಯೆಗೆ ಕೊಂಡೊಯ್ಯಲು ಒಪ್ಪಿಗೆ ಸೂಚಿಸಿದರು. ಈಗ ಅಯೋಧ್ಯೆಯತ್ತ ಹೊರಟಿರುವ ಶಿಲೆ 9 ಟನ್‌ ತೂಕ, 10 ಅಡಿ ಉದ್ದ, 6 ಅಡಿ ಅಗಲ ಮತ್ತು 4 ಅಡಿ ದಪ್ಪವಿದೆ.

ಅಂತಾರಾಷ್ಟ್ರೀಯ ಪ್ರಸಿದ್ಧಿ:

ಕರಿಕಲ್ಲಿನ ನಗರಿ ಎಂದು ಕರೆಯಲ್ಪಡುವ ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ರಾಷ್ಟ್ರಪತಿ ಭವನದಲ್ಲಿರುವ ಕಾರ್ಕಳ ಬಾಹುಬಲಿ, ಮಾನಸ್ತಂಭ ಪ್ರತಿಕೃತಿ, ಕವಿ ಮುದ್ದಣ, ಮಿಥುನ ನಾಗ, ಸೋಮನಾಥಪುರದ ದ್ವಾರ, ಗಜಸಿಂಹ, ಗೇಟ್‌ ವೇ, ಕಲ್ಲಿನ ಕಾರಂಜಿ, ಚೆನ್ನಿಗರಾಯ ದೇವರು ಸೇರಿ ಒಟ್ಟು 10 ವಿಗ್ರಹಗಳನ್ನು ಇದೇ ಕಲ್ಲಿನಿಂದ ತಯಾರಿಸಲಾಗಿದೆ. ದೆಹಲಿಯ ಗುರುಗ್ರಾಮ ರಸ್ತೆಯಲ್ಲಿರುವ 15 ಅಡಿ ಎತ್ತರದ ಮಹಾವೀರ ವಿಗ್ರಹ, ದೆಹಲಿಯ ಮಹಾವೀರನ ಪ್ರತಿಮೆ, ಗುರುವಾಯೂರಲ್ಲಿರುವ ಒಂದು ಶ್ರೀಕೃಷ್ಣ ಪ್ರತಿಮೆ, ಕೆನಡಾದ ಟೊರೆಂಟೋದಲ್ಲಿರುವ ದೇವೇಂದ್ರನ ವಿಗ್ರಹ, ಜಪಾನ್‌ನ ಅವಲೋಹಿತೇಶ್ವರ ಪ್ರತಿಮೆ, ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿರುವ ಕೃಷ್ಣ ವಿಗ್ರಹ, ಇತ್ತೀಚೆಗೆ ಮಲೇಷ್ಯಾದಲ್ಲಿ ದುರ್ಗ ವಿಗ್ರಹವನ್ನೂ ಇಲ್ಲಿನ ಶಿಲೆಯಲ್ಲೇ ಕೆತ್ತಲಾಗಿದೆ.

ಚಿಕ್ಕಬಳ್ಳಾಪುರದಿಂದ ಕಲ್ಲುಗಳ ರವಾನೆ:

ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ರಾಜ್ಯದ ಚಿಕ್ಕಬಳ್ಳಾಪುರದ ಕಲ್ಲುಗಳನ್ನು ಬಳಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸಿಗುವ ಶಿಲೆಗಳು ಅತಿ ಹೆಚ್ಚಿನ ಹಾಗೂ ಅತೀ ಕಡಿಮೆ ತಾಪಮಾನ ಎರಡನ್ನೂ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ರಾಮಮಂದಿರದ ಅಡಿಪಾಯಕ್ಕಾಗಿ ಆ ಶಿಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಕಾರ್ಕಳ ಶಿಲ್ಪಿಗಳಿಗೂ ಪ್ರಸಿದ್ಧಿ

ಕಾರ್ಕಳದ ರೆಂಜಾಳ ಗೋಪಾಲಕೃಷ್ಣ ಶೆಣೈ ಹಾಗೂ ಕೆ.ಶಾಮರಾಯ ಆಚಾರ್ಯ ಶಿಲ್ಪಿಗಳು ರಾಷ್ಟ್ರಮಟ್ಟದಲ್ಲೇ ಹೆಸರುವಾಸಿ. ಧರ್ಮಸ್ಥಳದ ಬಾಹುಬಲಿ ಮೂರ್ತಿ ಕೆತ್ತಿದ ಪ್ರಸಿದ್ಧ ಶಿಲ್ಪಿ, ಕೇಂದ್ರ ಪ್ರಶಸ್ತಿ ಪುರಸ್ಕೃತ ರೆಂಜಾಳ ಗೋಪಾಲಕೃಷ್ಣ ಶೆಣೈ ಅವರ ಶಿಷ್ಯ ಕೆ.ಶಾಮರಾಯ ಆಚಾರ್ಯ ಅವರನ್ನು 2011ರಲ್ಲಿ ಅಂದಿನ ಉಪರಾಷ್ಟ್ರಪತಿ ಭೈರವ್‌ ಸಿಂಗ್‌ ಶೇಖಾವತ್‌ ಶಿಲ್ಪಗುರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಬೇಸಗೆ ಮಳೆ ಸಿಂಚನ: ಉಡುಪಿಯಲ್ಲಿ ತುಂತುರು

ನನ್ನ ತಂದೆ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶದ ವಿವಿಧೆಡೆ ಸಂಚರಿಸಿ ಗುಣಮಟ್ಟದ ಶಿಲೆಗಳ ಸರ್ವೆ ಮಾಡಲಾಗಿತ್ತು. ಅದರಲ್ಲಿ ನೆಲ್ಲಿಕಾರಿನ ಕೃಷ್ಣ ಶಿಲೆ ಉತ್ತಮ ಗುಣಮಟ್ಟದ್ದೆಂದು ತಿಳಿದು ಬಂದಿದೆ. ಈ ಕೃಷ್ಣ ಶಿಲೆಗೆ ಕೆತ್ತನೆಯ ನಂತರ ಉತ್ತಮ ಹೊಳಪು ಬರುತ್ತದೆ. ಮೂರ್ತಿ ನಿರ್ಮಾಣ ಮಾಡಲು ಇದು ನಾಜೂಕಾಗಿದೆ ಅಂತ ಪ್ರಸಿದ್ಧ ಶಿಲ್ಪಿ, (ಕೆ.ಶಾಮರಾಯ ಆಚಾರ್ಯ ಅವರ ಪುತ್ರ) ಶಿಲ್ಪ ಗ್ರಾಮ ಕಾರ್ಕಳ ಸತೀಶ್‌ ಆಚಾರ್ಯ ತಿಳಿಸಿದ್ದಾರೆ. 

ಶಿಲ್ಪಿಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆ ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಕೆತ್ತನೆಗೆ ಆಯ್ಕೆಯಾಗಿದೆ. ಪೂರ್ತಿ ವಿಶ್ವವೇ ಈ ಶಿಲೆಯಿಂದ ರೂಪುಗೊಳ್ಳಲಿರುವ ಭಗವಾನ್‌ ಶ್ರೀರಾಮನ ದರ್ಶನ ಪಡೆಯಲಿದೆ ಎಂಬುದು ನಮ್ಮನ್ನು ಪುಳಕಿತರನ್ನಾಗಿ ಮಾಡಿದೆ. ಈ ಸೇವೆ ಮಾಡುವ ಅವಕಾಶವನ್ನು ರಾಜ್ಯಕ್ಕೆ ನೀಡಿದ ಪ್ರಭು ಶ್ರೀರಾಮನಿಗೆ ಶಿರಸಾಷ್ಟಾಂಗ ನಮಸ್ಕಾರಗಳು ಅಂತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದ್ದಾರೆ. 

click me!