ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಮತ್ತೊಮ್ಮೆ ಶಾಸಕರಾಗಿ ಇದೀಗ ಸಚಿವ ಸ್ಥಾನವನ್ನು ಪಡೆದುಕೊಂಡಿರುವ ನಾರಾಯಣ ಗೌಡ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಗಿದೆ.
ರಾಮನಗರ [ಫೆ.29]: ರಾಜ್ಯದ ಜನರ ಮತ ಪಡೆದು ಅಧಿಕಾರದಲ್ಲಿರುವ ಪೌರಾಡಳಿತ ಸಚಿವ ನಾರಾಯಣಗೌಡ ಮಹಾರಾಷ್ಟ್ರ ಮತ್ತು ಶಿವಾಜಿಗೆ ಜೈಕಾರ ಕೂಗುವ ಮೂಲಕ ನಾಡಿಗೆ ದ್ರೋಹ ಎಸಗಿದ್ದಾರೆ. ಇವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು, ಅಪ್ಪಟ ಕನ್ನಡಿಗರು ವಾಸಿಸುವ ಪ್ರದೇಶವಾದ ಮಂಡ್ಯ ಜಿಲ್ಲೆಯಲ್ಲಿ ಅಧಿಕಾರ ಪಡೆದು, ಮಹಾರಾಷ್ಟ್ರ ಪರವಾಗಿ ಘೋಷಣೆ ಕೂಗುವ ಮೂಲಕ ಮಂಡ್ಯ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಕರ್ನಾಟಕ ಸರ್ಕಾರದ ಸಚಿವನಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಘೋಷಣೆ ಕೂಗುವ ಮೂಲಕ ನಾಡಿಗೆ ಅಪಚಾರ ಎಸಗಿದ್ದಾರೆ. ಇವರು ಒಂದು ಕ್ಷಣ ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆ ಉಳಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡದ್ರೋಹಿ: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿಗೆ ನಾಡಿನ ಬಗ್ಗೆ ಅಭಿಮಾನ ಇದ್ದರೆ ಕೂಡಲೇ ನಾಡದ್ರೋಹಿ ಸಚಿವನನ್ನು ವಜಾಗೊಳಿಸ ಬೇಕು. ಇಲ್ಲವಾದಲ್ಲಿ ಈ ಸಚಿವರು ಪಾಲ್ಗೊಳ್ಳುವ ಎಲ್ಲಾ ಕಾರ್ಯಕ್ರಮದಲ್ಲಿ ಕರವೇ ಕಾರ್ಯಕರ್ತರು ಕಪ್ಪು ಪಟ್ಟಿಪ್ರದರ್ಶಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕನ್ನಡಿಗರನ್ನ ಕೆಣಕಿದರೆ ಯಮ ರೂಪಿಯಂತೆ ಎರಗುತ್ತೇವೆ: ನಾರಾಯಣಗೌಡ...
ಇಲ್ಲಿಂದ ಮುಂಬೈಗೆ ತೆರಳಿ ಅಲ್ಲಿ 35 ವರ್ಷದಿಂದ ಉದ್ಯಮಗಳನ್ನು ನಡೆಸುತ್ತಿದ್ದೇನೆ. ಇಂದು ನಾನು ಇಷ್ಟುಶಕ್ತಿವಂತನಾಗಲು ಮಹಾರಾಷ್ಟ್ರವೇ ಕಾರಣವಾಗಿದೆ ಎಂದೂ ಹೇಳಿದ್ದಾರೆ. ಹಾಗಿದ್ದರೆ ಅವರು ಮಹಾರಾಷ್ಟ್ರದಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಮಹಾರಾಷ್ಟ್ರ ಜನರ ಋುಣ ತೀರಿಸಲಿ. ನಮ್ಮ ರಾಜ್ಯದಲ್ಲಿ ಯಾಕೆ ಇದ್ದಾರೆ ಎಂದು ಪ್ರಶ್ನಿಸಿದರು.
ವಿವಾದಗಳಿವೆ: ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಗಡಿ ವಿವಾದ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಜಲ ವಿವಾದವೂ ಕೂಡ ಇದೆ. ಇಂತಹ ವೇಳೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ನಾರಾಯಣಗೌಡ ಮಹಾರಾಷ್ಟ್ರ ಪರ ಘೋಷಣೆ ಕೂಗುವುದು ಅಕ್ಷಮ್ಯ ಅಪರಾಧ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.