ಕರ್ನಾಟಕದ ಗಡಿಯೊಳಗೆ ಮಹಾರಾಷ್ಟ್ರ ಸರ್ಕಾರ ನಾಮಫಲಕ: ಕನ್ನಡಿಗರ ಆಕ್ರೋಶ..!

By Kannadaprabha News  |  First Published Jun 18, 2022, 5:12 AM IST

*  ಮೂರು ಕಿಮೀ ಮೊದಲೇ ಮಹಾ ಸರ್ಕಾರ ಅಳವಡಿಸಿದ್ದ ನಾಮಫಲಕ
*  ಕನ್ನಡಪರ ಸಂಘಟನೆಗಳ ಆಕ್ರೋಶ
*  ನಾಮಫಲಕ ಅಳವಡಿಸಿ ಉದ್ಧಟತನ ಪ್ರದರ್ಶಿಸಿದ್ದ ಮಹಾರಾಷ್ಟ್ರ 
 


ಸಂಕೇಶ್ವರ(ಜೂ.18):  ಮಹಾರಾಷ್ಟ್ರದಲ್ಲಿರುವ ಊರುಗಳ ಹೆಸರನ್ನು ಮರಾಠಿಯಲ್ಲಿ ಬರೆದು ಕರ್ನಾಟಕದ ಗಡಿಯಲ್ಲಿ ಹಾಕಿದ್ದ ನಾಮಫಲಕಗಳನ್ನು ಕನ್ನಡಪರ ಸಂಘಟನೆಗಳು ತೆರವುಗೊಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಹತ್ತಿರವಿರುವ ರಾಷ್ಟ್ರೀಯ ಹೆದ್ದಾರಿ ಗಡಹಿಂಗ್ಲಜ್‌ ರಸ್ತೆಯ ಬ್ರಿಡ್ಜ್‌ ಬಳಿ ನಡೆದಿದೆ.

ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ರಾಜ್ಯದ ಗಡಿಯಲ್ಲಿ, ಅದೂ ಕನ್ನಡ ನೆಲದಲ್ಲಿ ಮರಾಠಿ ಭಾಷೆಯಲ್ಲಿ ಮಹಾರಾಷ್ಟ್ರ ಶಾಸನ ಹಾಗೂ ಮಹಾರಾಷ್ಟ್ರಕ್ಕೆ ಸೇರಿದ ಊರುಗಳ ಹೆಸರು, ಕಿಲೋಮೀಟರ್‌ಗಳನ್ನು ಬರೆದು, ರಸ್ತೆಯ ಮಾರ್ಗಸೂಚಿಯ ನಾಮಫಲಕ ಅಳವಡಿಸಿ ಉದ್ಧಟತನ ಪ್ರದರ್ಶಿಸಿತ್ತು. ಇದನ್ನು ಗಮನಿಸಿ ಕುಪಿತಗೊಂಡ ಕನ್ನಡ ಪರ ಸಂಘಟನೆಗಳು ನಾಮಫಲಕವನ್ನು ಗುರುವಾರ ತೆರವುಗೊಳಿಸಿತು.

Tap to resize

Latest Videos

ಎಸಿಬಿ ದಾಳಿ: ಬಚ್ಚಲಲ್ಲಿ ಹಣ ಬಚ್ಚಿಟ್ಟಿದ್ದ ಭ್ರಷ್ಟ ಅಧಿಕಾರಿ..!

ಇದುವರೆಗೆ ಇರದೇ ಇದ್ದ ಈ ನಾಮಫಲಕವು ಕಳೆದ ಮೂರು ದಿನಗಳ ಹಿಂದೆ ಪಟ್ಟಣದ ಹೊರವಲಯದ ರಾ.ಹೆ. ಗಡಹಿಂಗ್ಲಜ್‌ ರಸ್ತೆಯ ಬ್ರಿಡ್ಜ್‌ ಬಳಿ ಮಹಾರಾಷ್ಟ್ರ ಶಾಸನ ಎಂಬ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ರಾಜ್ಯದ ಮೂರು ಕಿಮೀ ಒಳಗಡೆ ಈ ನಾಮ ಫಲಕವನ್ನು ಅಲ್ಲಿನ ಸರ್ಕಾರ ಅಳವಡಿಸಿತ್ತು. ಆದರೆ, ಇದನ್ನು ಗಮನಿಸದ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಕನ್ನಡ ಪರ ಸಂಘಟನೆಯ ಮುಖಂಡರು ಮಹಾ ಸರ್ಕಾರದ ವಿರುದ್ಧ ಹಾಗೂ ನಿದ್ದೆಯಲ್ಲಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿ ಕೂಡಲೇ ಮಹಾರಾಷ್ಟ್ರ ಶಾಸನ ಎಂಬ ನಾಮ ಫಲಕ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ತಕ್ಷಣವೇ ಸ್ಥಳಕ್ಕೆ ಸಂಕೇಶ್ವರ ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರಹ್ಲಾದ ಚನ್ನಗಿರಿ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಗಣಪತಿ ಕೊಂಗನೊಳಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಆಗಮಿಸಿ, ಜೆಸಿಬಿ ಯಂತ್ರದ ಮೂಲಕ ನಾಮಫಲಕ ತೆರವುಗೊಳಿಸಿದರು.

ಇಲ್ಲ ಸಲ್ಲದ ಆರೋಪ ಮಾಡಿದವರಿಗೆ ತಕ್ಕ ಪ್ರತ್ಯುತ್ತರ: ಹೆಬ್ಬಾಳಕರ

ಈ ವೇಳೆ ಮಾತನಾಡಿದ ಕನ್ನಡ ಪರ ಹೋರಾಟಗಾರ ಸಂತೋಷ ಪಾಟೀಲ ಕನ್ನಡ ನೆಲದಲ್ಲಿ ಮಹಾರಾಷ್ಟ್ರ ಸರ್ಕಾರ ಫಲಕ ಅಳವಡಿಸಿದರೂ ಇಲ್ಲಿನ ಅಧಿಕಾರಿಗಳು ಮೌನ ವಹಿಸಿರುವುದು ನಾಚಿಕೆ ಪಡುವಂತಹ ಸಂಗತಿ. ಮೂರು ಕಿಮೀ ಒಳಗೆ ಗಡಿ ಪ್ರವೇಶಿಸಿ ಮಹಾರಾಷ್ಟ್ರ ಸರ್ಕಾರ ಎಂಬ ಫಲಕ ಅಳವಡಿಸಿದರೂ ಕ್ರಮ ಕೈಗೊಳ್ಳದಿರುವುದು ಆಕ್ಷೇಪಾರ್ಹವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರರಾದ ಸಂತೋಷ ಪಾಟೀಲ, ಪ್ರೀತಂ ಸುಮಾರೆ, ಲಕ್ಷ್ಮಣ ಬಾನೆ, ಸಂತೋಷ ಸತ್ಯನಾಯಿಕ, ಪಿಂಟೂ ಸೂರ್ಯವಂಶಿ, ಪ್ರದೀಪ್‌ ಕರದನ್ನವರ, ಮೋಶಿನ್‌ ಪಠಾಣ, ಮಹೇಶ ಬೋರಗಲ್ಲಿ ಸೇರಿದಂತೆ ಇತರರು ಇದ್ದರು.
 

click me!