ಮತ್ತೆ ಬಾಲ ಬಿಚ್ಚಿದ MES,ಆ ಬಾಲ ಕಟ್ ಮಾಡದಿದ್ರೆ ಬೊಮ್ಮಾಯಿ ಮನೆ ಎದುರು ಧರಣಿಗೆ ನಿರ್ಧಾರ

By Suvarna News  |  First Published May 2, 2022, 7:44 PM IST

• ಸಾಮಾಜಿಕ ಜಾಲತಾಣಗಳಲ್ಲಿ ಎಂಇಎಸ್ ಕಿಡಿಗೇಡಿತನ
• ಮಹಾರಾಷ್ಟ್ರದಲ್ಲಿ ಕರ್ನಾಟಕ ಗಡಿ ಭಾಗ ಸೇರಿಸಿ ವಿವಾದಿತ ನಕ್ಷೆ ಪೋಸ್ಟ್
• ನಾಡದ್ರೋಹಿಗಳಿಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಬೆಂಬಲ
• MES ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ರೆ ಸಿಎಂ ಮನೆ ಮುಂದೆ ಧರಣಿಗೆ ನಿರ್ಧಾರ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ, (ಮೇ.02):
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್ ಈಗ ಮತ್ತೆ ತನ್ನ ಬಾಲ ಬಿಚ್ಚುತ್ತಿದೆ. ಬೆಳಗಾವಿಯ ಸುವರ್ಣವಿಧಾನ ಸೌಧದಲ್ಲಿ ಅಧಿವೇಶನ ನಡೆಯುತ್ತಿರುವ ವೇಳೆ ಹಿಂಸಾಚಾರ ಮಾಡಿ ಜೈಲು ಪಾಲಾಗಿ ಜಾಮೀನು ಮೇಲೆ ಹೊರಬಂದ ಎಂಇಎಸ್ ಮುಖಂಡ ಶುಭಂ ಶೆಳಕೆ ಮತ್ತೆ ಪುಂಡಾಟ ಪ್ರದರ್ಶಿಸಿದ್ದಾನೆ.

ಹೌದು... ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸೇರಿ ಮರಾಠಿ ಭಾಷಿಕ ಪ್ರದೇಶವನ್ನು ಮಹಾರಾಷ್ಟ್ರ ರಾಜ್ಯದ ನಕಾಶೆಗೆ ಸೇರಿಸಿ ಗ್ರಾಫಿಕ್ಸ್‌ ಮಾಡಿ ವಿವಾದಿತ ನಕ್ಷೆ ಪೋಸ್ಟ್ ಮಾಡಿದ್ದಾ‌ನೆ. ಅಷ್ಟೇ ಅಲ್ಲದೇ ಆ ವಿವಾದಿತ ನಕಾಶೆಗೆ ಆಡಿಯೋ ಸೇರಿಸಿ ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರದ್ದು ಎಂಬ ಆಡಿಯೋ ಸೇರಿಸಿ ಸಂಪೂರ್ಣ ಸಂಯುಕ್ತ ಮಹಾರಾಷ್ಟ್ರ ಎಂಬ ತಲೆಬರಹದಡಿ ಫೇಸ್‌ಬುಕ್‌ ‌ನಲ್ಲಿ ಪೋಸ್ಟ್ ಮಾಡಿದ್ದಾನೆ. 

Tap to resize

Latest Videos

ನಿನ್ನೆ(ಭಾನುವಾರ) ಮಹಾರಾಷ್ಟ್ರ ರಾಜ್ಯ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಪೋಸ್ಟ್ ಮಾಡಿರುವ ಈತ ಮಹಾರಾಷ್ಟ್ರ ದಿನ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, 'ಕಟ್ಟರ್ ಮಹಾರಾಷ್ಟ್ರವಾದಿಗೆ ಮಹಾರಾಷ್ಟ್ರ ಸಂಸ್ಥಾಪನಾ ದಿನಕ್ಕೆ ಮನಃಪೂರ್ವಕವಾಗಿ ಶುಭಕೋರಲು ಆಗುತ್ತಿಲ್ಲ. ಸಂಯುಕ್ತ ಮಹಾರಾಷ್ಟ್ರಕ್ಕಾಗಿ ಬೆಳಗಾವಿ ರಕ್ತದ ಹೋರಾಟಕ್ಕೆ ಮುನ್ನುಡಿ ಬರೆದಿದೆ. ಇಂದು(ಸೋಮವಾರ) 66 ವರ್ಷಗಳು ಕಳೆದರೂ ಬೆಳಗಾವಿ ಗಡಿಭಾಗದ ಜನರು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ, ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು' ಎಂದು ಕರೆದುಕೊಂಡು ಪೋಸ್ಟ್ ಮಾಡಿ ಪುಂಡಾಟಿಕೆ ಮೆರೆದಿದ್ದಾನೆ. ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Belagavi: MES ಪುಂಡರ ವಿರುದ್ಧ ದೇಶದ್ರೋಹದ ಕೇಸ್ ಇಲ್ಲ, ಮೃದು ಧೋರಣೆ ತಾಳ್ತಿದ್ದಾರೆ ಪೊಲೀಸರು.?

ಇನ್ನು ನಿನ್ನೆ ಮಹಾರಾಷ್ಟ್ರ ಸಂಸ್ಥಾಪನಾ ದಿನ ಹಿನ್ನೆಲೆ ಪುಣೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸಹ ವಿವಾದಿತ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಾಡದ್ರೋಹಿಗಳಿಗೆ ಮಹಾ ಡಿಸಿಎಂ ಬೆಂಬಲ
ಇನ್ನು ಪದೇಪದೇ ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆಯುತ್ತಾ ಭಾಷಾ ವೈಷಮ್ಯ ಬೀಜ ಬಿತ್ತಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಯತ್ನಿಸಿತ್ತಿರುವ ಎಂಇಎಸ್ ಸೇರಿ ಇತರ ನಾಡದ್ರೋಹಿಗಳ ಬೆಂಬಲಕ್ಕೆ ಮಹಾರಾಷ್ಟ್ರ ಡಿಸಿಎಂ ನಿಂತಿದ್ದಾರೆ. ನಿನ್ನೆ ಪುಣೆಯಲ್ಲಿ ಮಹಾರಾಷ್ಟ್ರ ಸಂಸ್ಥಾಪನಾ ದಿನ ಅಂಗವಾಗಿ ಸಮಾರಂಭದಲ್ಲಿ ವಿವಾದಿತ ಹೇಳಿಕೆ ನೀಡಿ ಮತ್ತೆ ಗಡಿವಿವಾದ ಕಿಚ್ಚು ಹೊತ್ತಿಸಿದ್ದಾರೆ. ಸಮಾರಂಭದಲ್ಲಿ ಮಾತನಾಡಿರುವ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್, 'ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಇದಕ್ಕೆ ನಡೆಯುತ್ತಿರುವ ಹೋರಾಟ ಬೆಂಬಲಿಸುತ್ತೇವೆ. 1960ರ ಮೇ 1ರಂದು ಮಹಾರಾಷ್ಟ್ರ ರಾಜ್ಯ ರಚನೆಯಾಯಿತು. ಮಹಾರಾಷ್ಟ್ರ ರಾಜ್ಯ ರಚನೆಯಾಗಿ 62 ವರ್ಷಗಳು ಕಳೆದಿವೆ. ಆದರೆ ಬೀದರ್, ಭಾಲ್ಕಿ, ಕಾರವಾರ, ನಿಪ್ಪಾಣಿ ಸೇರಿ ಇತರ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿಸಲಾಗಿಲ್ಲ. ಇದಕ್ಕಾಗಿ ನಾವು ವಿಷಾದಿಸುತ್ತೇವೆ. ಈ ಹಳ್ಳಿಗಳು ಮಹಾರಾಷ್ಟ್ರದ ಭಾಗವಾಗುವವರೆಗೂ ಹೋರಾಟಕ್ಕೆ ಬೆಂಬಲಿಸುತ್ತೇವೆ' ಎಂದು ವಿವಾದಿತ ಹೇಳಿಕೆ ನೀಡಿ ನಾಡದ್ರೋಹಿಗಳ ಬೆಂಬಲಕ್ಕೆ ನಿಂತಿದ್ದಾರೆ.

ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳದಿದ್ರೆ ಸಿಎಂ ಮನೆ ಎದುರು ಪ್ರತಿಭಟನೆ
ಎಂಇಎಸ್ ಮುಖಂಡನ ಉದ್ಧಟತನ ಹಾಗೂ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿವಾದಿತ ಹೇಳಿಕೆಗೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಕನ್ನಡ ಕ್ರಿಯಾ ಸಮಿತಿ ಒಕ್ಕೂಟದ ಅಧ್ಯಕ್ಷ ಅಶೋಕ ಚಂದರಗಿ, 'ನಿನ್ನೆ ಮಹಾರಾಷ್ಟ್ರ ಡಿಸಿಎಂ ಅಜೀತ್ ಪವಾರ ಗಡಿ ಭಾಗದ ಹೋರಾಟಕ್ಕೆ ಬೆಂಬಲ ಕೊಡುತ್ತೇವೆ ಅಂದಿದ್ದಾರೆ‌‌. 

ಅದರ ಬೆನ್ನಲ್ಲೇ ಬೆಳಗಾವಿಯಲ್ಲಿ ಶುಭಂ ಶೆಳಕೆ ವಿವಾದಿತ ಪೋಸ್ಟ್ ಹಾಕಿದ್ದಾನೆ. ಎಂಇಎಸ್ ನವರು ಗಡಿ ಭಾಗವನ್ನ ಕೇಳಿ ಸುಪ್ರೀಂ‌ಕೋರ್ಟ್‌ಗೆ ಹೋಗಿದ್ದಾರೆ. ಅದು 18 ವರ್ಷದಿಂದ ಬಾಕಿ ಇದೆ. ಮಹಾರಾಷ್ಟ್ರದವರು ಏನು ಮಾಡುತ್ತಿದ್ದಾರೆ ಎನ್ನುವುದಕ್ಕಿಂತ ಕರ್ನಾಟಕದವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡಬೇಕಿದೆ. ಅನೇಕ ಸರಿ ನಾವೂ ಹೇಳಿದ್ದೇವೆ ಅವರು ನಮ್ಮ ವೈರಿಗಳು ಗಡಿಭಾಗ ಕಬಳಿಸಲು ನಿಂತವರು‌. ನೀವು ಗಡಿಭಾಗದ ರಕ್ಷಣೆಗೆ ನಿಂತವರು ಏನು ಮಾಡ್ತಿದ್ದೀರಾ ಎಂದು ಪ್ರಶ್ನಿಸಿದರು.

‌ಮೂರು ವರ್ಷದಿಂದ  ಕರ್ನಾಟಕ ಸರ್ಕಾರದಲ್ಲಿ ಗಡಿ ಉಸ್ತುವಾರಿ ಮಂತ್ರಿ ನೇಮಕವಾಗಿಲ್ಲ. ಮಹಾರಾಷ್ಟ್ರ ಸರ್ಕಾರ ಇಲ್ಲಿನ ಹೋರಾಟಗಾರಿಗೆ ಬೆಂಬಲ ಕೊಡುತ್ತಿದ್ದಾರೆ. ಆದರೆ ಅವರಿಗೆ ಅಧಿಕೃತವಾಗಿ ಪ್ರತಿಕ್ರಿಯೆ ಕೊಡೋವವರು ಇಲ್ಲ‌.ಇಡೀ ಸರ್ಕಾರ ಬೆಳಗಾವಿಯಲ್ಲಿ ಇದ್ದರೂ ಅಧಿವೇಶನ ವೇಳೆ ಎಂಇಎಸ್ ನವರು ಸಾಕಷ್ಟು ಗಲಾಟೆ ಮಾಡಿದರು‌. ಸರ್ಕಾರದ ಮೇಲೆ ದಾಳಿ ಮಾಡಿದ್ದರು, ಸರ್ಕಾರದ ಆಸ್ತಿಪಾಸ್ತಿಗಳನ್ನ ಹಾನಿ ಮಾಡಿದ್ದರು.‌ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದರು. ಈ ವೇಳೆ ಸಿಎಂ ಎಂಇಎಸ್ ವಿರುದ್ದ ದೇಶದ್ರೋಹ ಕೇಸ್ ಹಾಕ್ತೇವಿ ಅಂತಾ ಹೇಳಿದ್ದರು. ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿತ್ತು. 

ಎಂಇಎಸ್ ಪುಂಡರ ಮೇಲೆ ಐಪಿಸಿ ಸೆಕ್ಷನ್ 124(A)ರಡಿ ಕೇಸ್ ಹಾಕೋದಾಗಿ ಹೇಳಿ ಕೈಬಿಟ್ಟಿದ್ದಾರೆ. ಎರಡು ರಾಜ್ಯಗಳಿಗೆ ಜಗಳ ಹಚ್ಚುವ ಕೆಲಸವನ್ನು ಎಂಇಎಸ್ ಮುಖಂಡರು ಮಾಡ್ತಿದ್ದಾರೆ. ನಕಾಶೆ ತಗೆಯುವ ಮೂಲಕ ಪ್ರಚೋದಿಸುವ, ದೇಶದ್ರೋಹ ಕೆಲಸವನ್ನ ಮಾಡಿದ್ದಾರೆ. ಇದು ದೇಶದ್ರೋಹ ಸಮಾನ ಕೆಲಸ. ಒಂದು ಕಡೆ ದೇಶದ್ರೋಹ ಕೇಸ್ ಹಾಕ್ತೇವಿ ಅಂತಾ ಹೇಳೊದು ಮತ್ತೊಂದೆಡೆ ಅಧಿಕಾರಿಗಳು ಆ ಕೇಸ್ ಬಿಟ್ಟು ಹಾಕೊದು ಅವರಿಗೆ ಸಡಿಲಿಕೆ ಸಿಕ್ಕಂತಾಗಿದೆ‌. ಗಡಿಭಾಗದಲ್ಲಿ ಸರ್ಕಾರ ಕೈಗೊಳ್ಳುವ ಗಡಿನೀತಿ ಸ್ಪಷ್ಟವಾಗಿಲ್ಲ. ಹೀಗಾಗಿ ಎಂಇಎಸ್ ನವರು ಮೇಲಿಂದ ಮೇಲೆ ಈ ರೀತಿ ಮಾಡ್ತಿದ್ದಾರೆ. 

ಗಡಿ ಉಸ್ತುವಾರಿ ಮಂತ್ರಿ ಇಲ್ಲ, ಗಡಿಸಂರಕ್ಷಾಣಾ ಆಯೋಗದ ಕಾಲು ಮುರಿದು ಬೆಂಗಳೂರಲ್ಲಿ ಬಿದ್ದಿದೆ‌. ಅದನ್ನೆಲ್ಲ ತಂದು ಏನಾದರೂ ಮಾಡಬೇಕು. ಎಂಇಎಸ್ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ನಾವು ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ಮಾಡೋ ಪ್ರಸಗ ಬರುತ್ತೆ. ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಇದ್ದಾಗ  ಪ್ರಕಣರದ ಬಗ್ಗೆ ಯಾರೂ ಮಾತನಾಡಬಾರದು. ಬಿಜೆಪಿ ಇರಲಿ ಕಾಂಗ್ರೆಸ್ ಇರಲಿ ಮರಾಠಿಗರ ಮತಗಳ ಮೇಲೆ ಕಣ್ಣಿಟ್ಟು ಅವರ ವಿರುದ್ಧ ಮಾತನಾಡುತ್ತಿಲ್ಲ. ಮಹಾರಾಷ್ಟ್ರದ ಸರ್ಕಾರದ ಭಾಗವಾಗಿ ಕಾಂಗ್ರೆಸ್‌ ಪಕ್ಷದವರಿದ್ದಾರೆ. 

ಇವತ್ತು ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಕನ್ನಡಪರ ಧ್ವನಿ ಎತ್ತಲು ಸಾಧ್ಯ. ಇವತ್ತೂ ಕುಮಾರಸ್ವಾಮಿ ಮಾತ್ರ ಮಾತನಾಡಿದ್ದಾರೆ. ಅವರನ್ನ ಬಿಟ್ರೆ ಸಿಎಂ ಮಾತನಾಡೊದಿಲ್ಲ,ಗಡಿಭಾಗದ ಶಾಸಕರು,ಮಂತ್ರಿಗಳು ಮಾತನಾಡಿಲ್ಲ. 2018ರಿಂದ‌ಲ್ಲೂ ಗಡಿಭಾಗದ ಉಸ್ತುವಾರಿ ನೇಮಕವಾಗಿಲ್ಲ. ಈಗಾಲಾದರೂ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳಬೇಕು‌. ಸುಪ್ರೀಂ ಕೋರ್ಟ್ ನಲ್ಲಿ ಮಹಾರಾಷ್ಟ್ರ ಮತ್ತು ಎಂಇಎಸ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿ' ಎಂದು ಅಶೋಕ‌ ಚಂದರಗಿ ಆಗ್ರಹಿಸಿದ್ದಾರೆ.

click me!