* ಬೆಳಗಾವಿ ಜಿಲ್ಲೆಯ ಕೆರೂರುದ ಕಮಾಂಡೋ ದಸ್ತಗೀರ ಬದುಕುಳಿದ ಕತೆ
* ರಾಯಭಾರಿ ಕಚೇರಿಗೆ ಭದ್ರತಾ ಪಡೆಯ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡಿಗ
* ಜನರು, ವಿದೇಶಿ ಪ್ರಜೆಗಳಿಗೆ ಹಾಗೂ ನೌಕರಸ್ಥರಿಗೆ ದಿಕ್ಕು ತೋಚದಂತಹ ವಾತಾವರಣ
ಜಗದೀಶ ವಿರಕ್ತಮಠ
ಬೆಳಗಾವಿ(ಆ.26): ಕಳೆದ ಎರಡು ತಿಂಗಳುಗಳಿಂದ ಅತ್ಯಂತ ಕಠಿಣ ಪರಿಸ್ಥಿತಿ ನಡೆಯೂ ಕಾರ್ಯನಿರ್ವಹಿಸುತ್ತಿದ್ದೆ. ಆದರೆ ಆ. 15ರ ನಂತರ ಕ್ಷಣಕ್ಷಣವೂ ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಗಿತ್ತು. ಅದೃಷ್ಟವಶಾತ್‌ಬದುಕುಳಿದು ತಾಯ್ನಾಡಿಗೆ ಬಂದಿಳಿದ್ದೇವೆ.
ತಮ್ಮ ಕ್ರೌರ್ಯದ ಮೂಲಕ ಇದೀಗ ಜಗತ್ತಿನ ಜನರ ನಿದ್ದೆಗೆಡೆಸಿದ ಆಫ್ಘಾನಿಸ್ತಾನ ರಾಯಭಾರಿ ಕಚೇರಿಯಲ್ಲಿ ಭದ್ರತಾ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ದಸ್ತಗೀರ ಮುಲ್ಲಾ ಅವರ ಮಾತುಗಳು ಇವು.
ಕಳೆದ ಎರಡು ವರ್ಷಗಳಿಂದ ಆಫ್ಘಾನಿಸ್ತಾನದಲ್ಲಿರುವ ರಾಯಭಾರಿ ಕಚೇರಿಗೆ ಭದ್ರತಾ ಪಡೆಯ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ತಮ್ಮ ಕ್ರೌರ್ಯವನ್ನು ಆರಂಭಿಸಿದ್ದರು. ಆದರೆ ಅದು ಅಷ್ಟೊಂದು ಆತಂಕವನ್ನು ಸೃಷ್ಟಿಸಿರಲಿಲ್ಲ. ಆದರೆ ಕಳೆದ ಆ.15ರಂದು ಏಕಾಏಕಿ ತಮ್ಮ ಕ್ರೌರ್ಯತ್ವವನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಇದರಿಂದಾಗಿ ಕೇವಲ ಆಫ್ಘಾನಿಸ್ತಾನ ಅಷ್ಟೇ ಅಲ್ಲ ಸುತ್ತಮುಲ್ಲಿನ ರಾಷ್ಟ್ರಗಳು ಆತಂಕ ಎದುರಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ತಾಲಿಬಾನ್ ಉಗ್ರರ ಭೀತಿ : ಸುಂದರ ಸ್ತ್ರೀಯರ ಫೋಟೋಗಳಿಗೆ ಮಸಿ!
ತಾಲಿಬಾನಿಗಳ ಕ್ರೌರ್ಯತ್ವದ ಅಟ್ಟಹಾಸ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಾ ಸಾಗಿತ್ತು. ಮಹಿಳೆ, ಮಕ್ಕಳು, ವೃದ್ಧರು ಎನ್ನದೆ ತಾವು ನಡೆದದ್ದೆ ದಾರಿ ಎನ್ನುವಂತೆ ದಾಳಿ ನಡೆಸಲಾರಂಭಿಸಿದರು. ಅದೆಷ್ಟೋ ಹೆಣಗಳನ್ನು ಉರುಳಿಸಿದ ತಾಲಿಬಾನಿಗಳು, ದಿನದಿಂದ ದಿನಕ್ಕೆ ತಮ್ಮ ವ್ಯಾಪ್ತಿ ವಿಸ್ತರಿಸುತ್ತಾ ಸಾಗಿದರು. ಇದರಿಂದಾಗಿ ಅಲ್ಲಿನ ಜನರಿಗೆ ವಿದೇಶಿ ಪ್ರಜೆಗಳಿಗೆ ಹಾಗೂ ನೌಕರಸ್ಥರಿಗೆ ದಿಕ್ಕು ತೋಚದಂತಹ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಸೇರಿದಂತೆ ಇನ್ನಿತರರನ್ನು ವಿಮಾನದ ಮೂಲಕ ತಾಯ್ನಾಡಿಗೆ ಕರೆತರಲಾಯಿತು. ಆ. 16ರಂದು ಬೆಳಗ್ಗೆ ಕಾಬೂಲದಿಂದ ವಿಮಾನದ ಮೂಲಕ ಪ್ರಯಾಣ ಬೆಳೆಸಿ ರಾತ್ರಿ ಹೊತ್ತಿಗೆ ದೆಹಲಿಗೆ ಬಂದಿಳಿದ್ದೇವೆ. ಅಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಪಾರಾಗಿ ಬಂದಿದ್ದೇವೆ ಎಂದರು. ಅಲ್ಲದೇ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಕಮಾಂಡೋ ದಸ್ತಗೀರ ಇದೆ ವೇಳೆ ತಿಳಿಸಿದ್ದಾರೆ.
ಆ. 12ರಂದು ಕುಟುಂಬಸ್ಥರ ಜೊತೆ ಮಾತನಾಡಿದ ಕಮಾಂಡೋ ದಸ್ತಗೀರ ಮುಲ್ಲಾ ಅವರು, ನನ್ನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ನಂತರ ಸಂಪರ್ಕಕ್ಕೆ ಸಿಗದೇ ಇದ್ದಾಗ ಮನೆಯವರು ಆತಂಕಕ್ಕೆ ಒಳಗಾಗಿದ್ದರು. ಆ.15ರಂದು ಕರೆ ಮಾಡಿ ಭಾರತಕ್ಕೆ ಸುರಕ್ಷಿತವಾಗಿ ಮರಳಿರುವ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇದರಿಂದ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಯೋಧನ ಪತ್ನಿ ಜುಬೇದ್ ಮುಲ್ಲಾ ತುಂಬು ಗರ್ಭಿಣಿಯಾಗಿದ್ದಾಳೆ. ಯೋಧನಿಗೆ ವೃದ್ಧ ತಂದೆ, ತಾಯಿ ಇದ್ದಾರೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹಿಂಸಾಚಾರಕ್ಕೆ ನಾನು ಆತಂತಕ್ಕೆ ಒಳಗಾಗಿದ್ದೆ. ನನ್ನ ಪತಿ ಕಾಬುಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪತಿಗೆ ಕರೆ ಮಾಡಿದಾಗ ತೊಂದರೆಯಲ್ಲಿ ಇದ್ದೇನೆಂದು ತಿಳಿಸಿದ್ದರು. ಆದರೆ ಆ. 16ರಂದು ಭಾರತಕ್ಕೆ ವಾಪಸ್ಸಾಗಿರುವುದಾಗಿ ತಿಳಿಸಿದರು. ಈ ವಿಷಯ ನನಗೆ ಬಹಳಷ್ಟು ಸಂತೋಷ ತಂದಿದೆ ಎಂದು ಯೋಧನ ಪತ್ನಿ ಜುಬೇದ್‌ಮುಲ್ಲಾ ತಿಳಿಸಿದ್ದಾರೆ.