ಮಲೆಯಾಳಿಗಳು, ತಮಿಳರಂತೆ ಭಾಷಾಪ್ರೇಮ ಅನುಸರಿಸೋಣ: ಬಳಿಗಾರ

Kannadaprabha News   | Asianet News
Published : Feb 06, 2020, 08:07 AM IST
ಮಲೆಯಾಳಿಗಳು, ತಮಿಳರಂತೆ ಭಾಷಾಪ್ರೇಮ ಅನುಸರಿಸೋಣ: ಬಳಿಗಾರ

ಸಾರಾಂಶ

ಕನ್ನಡದ ಪುನರುತ್ಥಾನಕ್ಕೆ ಆಂಗ್ಲ ಭಾಷೆ ಮೇಲಿನ ವ್ಯಾಮೋಹ ಕುಗ್ಗಲಿ| ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ ಅಭಿಮತ| ಆಂತರಿಕ ಮುನಿಸು ಕನ್ನಡ ಹೋರಾಟದ ದಿಕ್ಕು ತಪ್ಪಿಸುತ್ತಿವೆ|   

ಕಲಬುರಗಿ(ಫೆ.06): ಕನ್ನಡದ ಪುನರುತ್ಥಾನಕ್ಕೆ ಆಂಗ್ಲ ಭಾಷೆ ಮೇಲಿನ ವ್ಯಾಮೋಹ ಕುಗ್ಗಲಿ. ತಮಿಳರು, ಮಲಯಾಳಿಗಳಂತೆ ಒಗ್ಗೂಡುವ ಮನೋಭಾವ ಕನ್ನಡಿಗರಲ್ಲಿ ಬೆಳೆಯಲಿ ಎಂದು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಆಶಯ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಸಾಹಿತ್ಯ ಸಮ್ಮೇಳನದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅವರು ಕಲಬುರಗಿಯ ಗುಲಬರ್ಗಾ ವಿಶ್ವ ವಿದ್ಯಾಲಯದ ಆವರಣದಲ್ಲಿ ಬುಧವಾರ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಶಯ ನುಡಿಗಳನ್ನು ಹೇಳಿ, ಕನ್ನಡ ಭಾಷಾ ಬೆಳವಣಿಗೆಯಷ್ಟೇ ಅಲ್ಲ ಅದನ್ನು ಉಳಿಸುವುದೂ ಇಂದಿನ ಅಗತ್ಯ. ಕನ್ನಡದ ವಿಷಯ ಬಂದಾಗ ಸಾಹಿತಿಗಳ, ಕಲಾವಿದರ, ರಾಜಕಾರಣಿಗಳ ಆಂತರಿಕ ಮುನಿಸುಗಳು ಹೋರಾಟದ ದಿಕ್ಕು ತಪ್ಪಿಸುತ್ತಿವೆ ಎಂಬುವುದನ್ನು ಸೂಕ್ಷ್ಮವಾಗಿ ಹೇಳುವ ಮೂಲಕ ಭಾಷಾ ಪ್ರೇಮದ ಕುರಿತು ಪರ ರಾಜ್ಯದವರನ್ನು ಅನುಸರಿಸುವದು ಅನಿವಾರ್ಯವಾಗಿ ಎಂದರು.

ಆಂಗ್ಲಭಾಷೆಯ ಮೇಲೆ ಅತಿಯಾದ ವ್ಯಾಮೋಹ ಕನ್ನಡ ಭಾಷೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಸಣ್ಣ ಪುಟ್ಟವಿಷಯಗಳನ್ನು ದೊಡ್ಡದಾಗಿ ಮಾಡಿ ಬಿರುಕು ಮೂಡಿಸುವದನ್ನು ಬಿಟ್ಟು ಒಗ್ಗೂಡುವಂಥ ಮನೋಸ್ಥಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನ: ತಾಯಿ ಭುವನೇಶ್ವರಿಗೆ ಪದಾರತಿ ಎತ್ತಿದ ಎಚ್‌ಎಸ್‌ವಿ!

ತತ್ವಸಿದ್ಧಾಂತಗಳು ಏನೇ ಇರಲಿ. ಭಿನ್ನಾಭಿಪಾಯಗಳು ಎಷ್ಟೇ ಇರಲಿ ಕನ್ನಡದ ವಿಷಯ ಬಂದಾಗ ಸಾಹಿತಿಗಳು, ಕಲಾವಿದರು ರಾಜಕಾರಣಿಗಳು ಒಂದಾಗಿ ಹೋರಾಡಬೇಕಿದೆ. ತತ್ವ ಸಿದ್ಧಾಂತಗಳು ಬೇರೇ ಬೇರೆಯಾಗಿದ್ದರೂ ಡಾ.ಎಸ್‌.ಎಲ್‌.ಭೈರಪ್ಪ ಅವರು ಚಂದ್ರಶೇಖರ ಕಂಬಾರ ಅವರು ಒಂದಾಗಿ ಶ್ರಮಿಸುತ್ತಿರುವಂತೆ ಎಲ್ಲರೂ ಮುಂದಾಗಬೇಕು ಎಂದು ಮನು ಬಳಿಗಾರ ಕರೆ ನೀಡಿದರು.

ಕನ್ನಡ ಭಾಷೆಯು 1 ಮತ್ತು 2ನೇ ಶತಮಾನದಲ್ಲಿ ಸಾಗರೋತ್ತರವಾಗಿ ಬಂದಿದೆ ಎಂದು ವಿದ್ವಾಂಸರಾದ ಗೋವಿಂದ ಪೈ ಅವರು ಪಾಶ್ಚಿಮಾತ್ಯ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಕನ್ನಡ ಕೇವಲ ಸಾಹಿತ್ಯವನ್ನು ನಿರ್ಮಿಸಿದಂಥದ್ದಲ್ಲ ಅದು ಜೀವನ ಮೌಲ್ಯವನ್ನು ತಿಳಿಸಿಕೊಟ್ಟಿದೆ ಅದಕ್ಕೆ ನುಡಿದಂತೆ ನಡೆದ ಹಾಗೂ ನಡೆದಂತೆ ನುಡಿದ ವಚನಕಾರರೇ ಸಾಕ್ಷಿಯಾಗಿದ್ದಾರೆ. ಕನ್ನಡ ಭಾಷೆಯು 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಹರಿಕಾರರಾದ ಬಸವಾದಿ ಶರಣರಿಗೆ ಆತ್ಮಸ್ಥೈರ್ಯ ತುಂಬಿದ ಭಾಷೆಯಾಗಿದೆ. ಇಂಥದ್ದೊಂದು ಭಾಷೆಯನ್ನು ಮತ್ತಷ್ಟುಬೆಳೆಸುವ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡು ಹೋಗುವ ಕೆಲಸವಾಗಬೇಕಿದೆ ನಾವೆಲ್ಲ ಅದಕ್ಕಾಗಿ ಶ್ರಮಿಸೋಣ ಎಂದು ಹೇಳಿದರು.

ಕಲಬುರಗಿ ಸಾಹಿತ್ಯ ಸಮ್ಮೇಳನ: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಬಿಸಿಲ ನಗರಿ

ತತ್ವಪದಕಾರರು, ದಾಸರು, ಸೂಫಿ ಸಂತರು ಈ ಭಾಗದವರೇ ಆಗಿದ್ದರಿಂದ ಕನ್ನಡಕ್ಕೆ ಕಂಟಕ ಬಂದಾಗ ಅವರೆಲ್ಲರ ಶ್ರಮ ಸಾಹಿತ್ಯದಿಂದ ಕನ್ನಡಕ್ಕೆ ಪುನರುತ್ಥಾನ ನೀಡಿದ ಭೂಮಿಯಿದು. ಆಧುನಿಕ ಕನ್ನಡಕ್ಕೆ ಅಥವಾ ಇಂದಿನ ಕನ್ನಡಕ್ಕೆ ಆಂಗ್ಲ ಭಾಷೆಯಿಂದ ಎದುರಾಗಿರುವ ಎಲ್ಲ ಆತಂಕವನ್ನು ನಾವು ಈಗಲೂ ದೂರಮಾಡುವೆವು ಎಂದು ವಿಶ್ವಕ್ಕೆ ಸಾರಬೇಕಿದೆ ಅದಕ್ಕಾಗಿಯೇ ಈ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಎಂದು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಹೇಳಿದರು.

ಕನ್ನಡಕ್ಕೆ ಪೆಟ್ಟಾದ್ರೆ ಉಗ್ರನರಸಿಂಹಾವತಾರ:

ಭಿನ್ನಾಭಿಪ್ರಾಯಗಳು ಇರಬೇಕು. ಆದರೆ ಅದು ಅತಿಯಾಗದೇ ಪರಸ್ಪರ ಗೌರವ ಉಳಿಸಿಕೊಂಡು ಹೋಗುವಂಥದ್ದಾಗಿರಬೇಕು ಎಂದ ಅವರು ಕನ್ನಡಿಗರು ಮೃದುಸ್ವಭಾವದವರಾದರೂ ಕನ್ನಡಕ್ಕೆ ಕಂಟಕ ಬಂದಲ್ಲಿ ವಜ್ರಕ್ಕಿಂತ ಕಠೋರವಾಗಲೂ ಹಿಂಜರಿಯರು ಕನ್ನಡಕ್ಕೆ ಪೆಟ್ಟು ನೀಡುವವರಿಗೆ ಉಗ್ರ ನರಸಿಂಹರಾಗಿ ಸಂಹರಿಸುತ್ತಾರೆ ಎಂದು ಮನು ಬಳಿಗಾರ ಎಚ್ಚರಿಸಿದರು. ಕನ್ನಡ ಭಾಷೆಗೆ ಯಾವ ಯಾವ ಸಮಯದಲ್ಲಿ ಸಂಕಷ್ಟಎದುರಾಗಿದೆಯೋ ಆಗಾಗ್ಗೆ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳು, ಕವಿಗಳಿಂದ ಅದರ ಪುನರುತ್ಥಾನದ ಕಾರ್ಯವಾಗಿದೆ. ಕನ್ನಡಕ್ಕೆ ಪುನರುತ್ಥಾನ ನೀಡಿದ ಭೂಮಿ ಇದಾಗಿದೆ. ಅದರಂತೆ ನಾವಿಂದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತಿರುವ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಹೆಮ್ಮೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಎಚ್‌ಎಸ್‌ ವೆಂಕಟೇಶಮೂರ್ತಿ, ಜ್ಞಾನಪೀಠ ಪುರಸ್ಕೃತಡಾ. ಚಂದ್ರಶೇಖರ ಕಂಬಾರ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!