ರಾಜ್ಯದಲ್ಲಿ ಕನ್ನಡ ಪ್ರಧಾನವಾಗಿರುವುದು ದಾವಣಗೆರೆಯಲ್ಲಿ: ಸಂಸದ ಸಿದ್ದೇಶ್ವರ

By Govindaraj S  |  First Published Dec 19, 2022, 8:05 PM IST

ಚುನಾವಣಾ ರಾಜಕೀಯಕ್ಕಾಗಿಯೇ ಕೆಲವು ರಾಜ್ಯಗಳ ರಾಜಕಾರಣಿಗಳು ಭಾಷೆಯ ವಿಷಯದಲ್ಲಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಜನರನ್ನು ಪ್ರಚೋದಿಸುತ್ತಾರೆ. ಇದು ಸರಿಯಲ್ಲ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು. 


ದಾವಣಗೆರೆ (ಡಿ.19): ಚುನಾವಣಾ ರಾಜಕೀಯಕ್ಕಾಗಿಯೇ ಕೆಲವು ರಾಜ್ಯಗಳ ರಾಜಕಾರಣಿಗಳು ಭಾಷೆಯ ವಿಷಯದಲ್ಲಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಜನರನ್ನು ಪ್ರಚೋದಿಸುತ್ತಾರೆ. ಇದು ಸರಿಯಲ್ಲ ಎಂದು ಸಂಸದ ಡಾ. ಜಿ.ಎಂ.ಸಿದ್ದೇಶ್ವರ ಹೇಳಿದರು. ನಗರದ ಶಿವಯೋಗಾಶ್ರಮದ ಆವರಣದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಡೆದ 67ನೇ ಕರ್ನಾಟಕ ರಾಜ್ಯೋತ್ಸವ, ಹಾಸ್ಯ ಸಂಜೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾಷೆಯ ಹೆಸರಲ್ಲಿ ವಿವಾದಗಳು ನಿಜವಾಗಿ ಇಲ್ಲ. ಆದರೆ ಚುನಾವಣೆ ಬಂದಾಗ ವಿವಾದಗಳು ಉಂಟಾಗುತ್ತವೆ. ಚುನಾವಣೆ ಮುಗಿದಾಗ ತಣ್ಣಗಾಗುತ್ತದೆ ಎಂದರು.

ಬೀದರ್‌ ಕಡೆಗೆ ಉರ್ದು, ಬೆಳಗಾವಿ ಕಡೆಗೆ ಮರಾಠಿ, ರಾಯಚೂರು ಕಡೆಗೆ ತೆಲುಗು, ಬೆಂಗಳೂರು ಭಾಗದಲ್ಲಿ ತಮಿಳು, ಮಂಗಳೂರು ಭಾಗದಲ್ಲಿ ಮಲಯಾಳಂ ಹೀಗೆ ನಾನಾ ಗಡಿಭಾಗಗಳ ಜಿಲ್ಲೆಗಳಲ್ಲಿ ವಿವಿಧ ಭಾಷೆಗಳ ಪ್ರಭಾವ ಹೆಚ್ಚಿದೆ. ಆದರೆ ದಾವಣಗೆರೆಯಲ್ಲಿ ಕನ್ನಡವೇ ಪ್ರಧಾನ ಎಂದ ಅವರು, ಈ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಕನ್ನಡ ನೆಲ, ಜಲ, ಭಾಷೆಗಾಗಿ ನಿರಂತರ ಹೋರಾಡಿಕೊಂಡು ಬಂದವರು. ಈಗಲೂ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವವರು ಎಂದು ಬಣ್ಣಿಸಿದರು.

Tap to resize

Latest Videos

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸತ್ಪ್ರಜೆಗಳಾಗಿಸಿ: ಸಚಿವ ಆರಗ ಜ್ಞಾನೇಂದ್ರ

ಉದ್ಯಾನವನ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಎಂ.ಸೋಮಶೇಖರಪ್ಪ ಉಪನ್ಯಾಸ ನೀಡಿ, ತಾಜ್‌ ಮಹಲ್‌ ಬಿಟ್ಟರೆ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವೆಂದರೆ ಅದು ಮೈಸೂರು ಅರಮನೆ. ರಾಷ್ಟ್ರಕೂಟರು, ಚಾಲುಕ್ಯರಿಂದ ಹಿಡಿದು ಇಲ್ಲಿವರೆಗೆ ಅನೇಕರು ಕನ್ನಡಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ನಿತ್ಯ ಧಾರಾವಾಹಿ ನೋಡುವಂತೆ ನಿತ್ಯ ಒಂದು ಪುಟವಾದರೂ ಕನ್ನಡ ಪುಸ್ತಕ ಓದುವುದನ್ನು ಕನ್ನಡಿಗರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಮಾತನಾಡಿ, ಕರ್ನಾಟಕದಲ್ಲಿ ಇರಬೇಕಿದ್ದರೆ ಕನ್ನಡ ಕಲಿಯುವುದು ಕಡ್ಡಾಯವಾಗಬೇಕು. ಆಗ ಯಾವ ಜಗಳವೂ ಇರುವುದಿಲ್ಲ. ಎಲ್ಲಾದರೂ ಭಾಷೆಗೆ ಸಂಬಂಧಿಸಿದಂತೆ ವಿವಾದವಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಕಡೆಯವರನ್ನು ಕೂರಿಸಿ ಸೌಹಾರ್ದವಾಗಿ ಪರಿಹರಿಸಬೇಕು ಎಂದು ತಿಳಿಸಿದರು. ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ, ಕನ್ನಡ ಪ್ರಭ ಜಿಲ್ಲಾ ಪ್ರಧಾನ ವರದಿಗಾರ ನಾಗರಾಜ ಬಡದಾಳ್‌ ಇತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಾಪೌರರಾದ ಜಯಮ್ಮ ಆರ್‌. ಗೋಪಿನಾಯ್ಕ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಗುರುಕುಲ ಶಾಲೆ ಮುಖ್ಯಸ್ಥ ಆರ್‌.ಅಬ್ದುಲ್‌, ಸಾದಿಕ್‌ ಪೈಲ್ವಾನ್‌, ಸಿರಾಜ್‌ ಅಹ್ಮದ್‌, ಸೈಯದ್‌ ರಿಯಾಜ್‌, ಬಾಷಾ ಪೈಲ್ವಾನ್‌, ಜಿ.ವಿ.ಗಂಗಾಧರ, ಅಂಬಿಕಾ ಚಂದ್ರಶೇಖರ, ಹನುಮಂತಪ್ಪ ಸೋಮ್ಲಾಪುರ, ಎಸ್‌.ಶಾಮ್‌, ಸಮೀರ್‌, ದಿನೇಶ್‌ ಕೆ. ಶೆಟ್ಟಿ, ಪ್ರವೀಣ್‌ ಕುಮಾರ್‌ ನಿಟುವಳ್ಳಿ ಮುಂತಾದವರಿದ್ದರು.

ಗ್ರಾಮ ವಾಸ್ತವ್ಯ ಮೋಜು ಮಸ್ತಿಗಾಗಿ ಮಾಡುತ್ತಿಲ್ಲ: ಶಾಸಕ ರೇಣುಕಾಚಾರ್ಯ

ಯೋಧ ಎಲ್‌.ಎಚ್‌.ರಾಜು, ರೈತ ಹೋರಾಟಗಾರ ಅರುಣ್‌ಕುಮಾರ ಕುರುಡಿ, ಕಲಾವಿದ ಶಾಂತಯ್ಯ ಪರಡಿಮಠ, ಪತ್ರಕರ್ತರಾದ ಎ.ಎನ್‌. ನಿಂಗಪ್ಪ, ಬಾಲಕೃಷ್ಣ ಶಿಬಾರ್ಲ, ಕೆ.ಎನ್‌.ಮಲ್ಲಿಕಾರ್ಜುನ ಮೂರ್ತಿ, ಚನ್ನಬಸವ ಶೀಲವಂತ್‌, ವಾಸುದೇವ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನಿಸಲಾಯಿತು. ಸಂಘಟನಾ ಕಾರ್ಯದರ್ಶಿ ಸಂತೋಷ ದೊಡ್ಡಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಹಾಸ್ಯಕಲಾವಿದರಾದ ಕೋಗಳಿ ಕೊಟ್ರೇಶ, ಮಹಾಂತೇಶ ಹುನ್ನಾಳ ಹಾಸ್ಯ ಕಾರ್ಯಕ್ರಮ ಹಾಗೂ ಬಸವ ಕಲಾಲೋಕದ ಚೇತನ್‌ಕುಮಾರ ಮತ್ತು ತಂಡದವರಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

click me!