ಡಿಕೆ ಸಹೋದರರ ಕ್ಷೇತ್ರಕ್ಕೆ ಇದೀಗ ಕೇಂದ್ರದಿಂದ ಬಂಪರ್ ಕೊಡುಗೆ ಸಿಕ್ಕಿದೆ. ಇದೀಗ ಕನಕಪುರವು ಮಾದರಿ ಎನಿಸಿಕೊಂಡಿದೆ.
ರಾಮನಗರ [ಡಿ.15]: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಲ್ಲಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಗುಣಮಟ್ಟದಿಂದ ಅನುಷ್ಠಾನಗೊಳಿಸಿದ್ದಕ್ಕಾಗಿ ಕನಕಪುರ ತಾಲೂಕಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕಳೆದ ವರ್ಷ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ರಾಮನಗರ ಜಿಲ್ಲೆಗೆ ‘ನರೇಗಾ ಅನುಷ್ಠಾನದ ಜಿಲ್ಲೆ - 2017‘ ರಾಷ್ಟ್ರೀಯ ಪ್ರಶಸ್ತಿ ಹಾಗೂ ಬನ್ನಿಕುಪ್ಪೆ (ಬಿ)ಗೆ ‘ನರೇಗಾ ಅನುಷ್ಠಾನದ ಗ್ರಾಮ ಪಂಚಾಯಿತಿ - 2017‘ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಇದೀಗ ನರೇಗಾ ಕಾಮಗಾರಿಗಳನ್ನು ಪೂರ್ಣಗೊಳಿಸುವಿಕೆ ವಿಭಾಗದಲ್ಲಿ ಕನಕಪುರ ತಾಲೂಕು ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿದೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ನರೇಗಾ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಒತ್ತು ನೀಡಿದ್ದರು. ಅದರಂತೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದರು. ಇದರ ಫಲವಾಗಿ ಡಿಕೆ ಸಹೋದರರ ಸ್ವ ಕ್ಷೇತ್ರ ಕನಕಪುರ ತಾಲೂಕು ನರೇಗಾ ಕಾಮಗಾರಿಗಳನ್ನು ಪೂರ್ಣಗೊಳಿಸುವುದರಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿದೆ.
ನರೇಗಾ ಆನ್ ಲೈನ್ ನ ಪ್ರೋಗ್ರಾಮ್ ನಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವ ಕುರಿತು ಅಪ್ ಡೇಟ್ ಆಗುತ್ತಲೇ ಇರುತ್ತದೆ. ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಶೇಕಡವಾರು ಆಧಾರದ ಮೇಳೆ ದೇಶದಲ್ಲಿಯೇ ಕನಕಪುರ ತಾಲೂಕು ಮೊದಲ ಸ್ಥಾನದಲ್ಲಿದ್ದ ಕಾರಣ ಪ್ರಶಸ್ತಿ ದೊರಕಿದೆ.
ಕಳೆದ 2008-09 ರಿಂದ 2018-19ರವರೆಗೆ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ 97,363 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, 85,675 ಕಾಮಗಾರಿಗಳು ಪೂರ್ಣಗೊಂಡಿವೆ. ಇದರಲ್ಲಿ 79,558 ವೈಯಕ್ತಿಕ ಕಾಮಗಾರಿಗಳು ಹಾಗೂ 6087 ಸಮುದಾಯ ಆಧಾರಿತ ಕಾಮಗಾರಿಗಳು ಸೇರಿವೆ.
ರಾಮನಗರದಲ್ಲಿ ಡಿ.17ಕ್ಕೆ ಎಲೆಕ್ಷನ್ ಫಿಕ್ಸ್ : ಡಿಕೆ ಸಹೋದರರ ನಡೆ ಎತ್ತ?..
ತಾಲೂಕಿನಲ್ಲಿ 1965 ಚೆಕ್ ಡ್ಯಾಂಗಳು, (ಕೆರೆ ಅಭಿವೃದ್ಧಿ , ಹೂಳು ತೆಗೆಯುವುದು, ತೂಬು ಸರಿಪಡಿಸುವುದು)227 ಕೆರೆಗಳು ,18,858 ಕೃಷಿ ಹೊಂಡ, 28,342 ಧನದ ಕೊಟ್ಟಿಗೆ ಸೇರಿದಂತೆ ರಸ್ತೆ, ಚರಂಡಿ ಕಾಮಗಾರಿಗಳು ನಡೆದು ಪೂರ್ಣಗೊಂಡಿವೆ.
ಇನ್ನು ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ ಒಟ್ಟಾರೆ 1,93,153 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, 1,68,879 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಉಳಿಕೆ 24,277 ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರಲ್ಲಿ 1,33,414 ವೈಯಕ್ತಿಕ ಕಾಮಗಾರಿಗಳು ಮತ್ತು 35,465 ಸಮುದಾಯ ಆಧಾರಿದ ಕಾಮಗಾರಿಗಳು ಸೇರ್ಪಡೆಯಾಗಿವೆ. ಜಿಲ್ಲೆಯಲ್ಲಿ 2002 ಚೆಕ್ ಡ್ಯಾಂಗಳು , 527 ಕೆರೆಗಳು, 19,883 ಕೃಷಿ ಹೊಂಡಗಳು ಹಾಗೂ 53,714 ದನದ ಕೊಟ್ಟಿಗೆಗಳು ನಿರ್ಮಾಣ ಆಗಿವೆ.
ಸಾಮಾನ್ಯವಾಗಿ ಬೇರೆ ಬೇರೆ ತಾಲೂಕುಗಳು 2015-16ನೇ ಸಾಲಿನವರೆಗೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ, ಈ ಸಾಲಿನಲ್ಲಿ ಕನಕಪುರ ತಾಲೂಕು ಕಾಮಗಾರಿಗಳನ್ನು ಗುಣಮಟ್ಟಕಾಪಾಡಿಕೊಂಡು ಪರಿಪೂರ್ಣಗೊಳಿಸಿದೆ ಎನ್ನುತ್ತಾರೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು.
ನರೇಗಾ ಕಾಮಗಾರಿ ಪೂರ್ಣಗೊಳಿಸುವಿಕೆ ವಿಭಾಗದಲ್ಲಿ ಕನಕಪುರ ತಾಲೂಕಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಂದಿರುವುದು ಖುಷಿಯ ಸಂಗತಿ. ಇದು ಸಂಘಟನಾತ್ಮಕ ಕೆಲಸಕ್ಕೆ ಸಿಕ್ಕ ಮನ್ನಣೆ. ಒಳ್ಳೆಯ ಕೆಲಸ ಮಾಡಿದರೆ ಅದನ್ನು ಗುರುತಿಸುತ್ತಾರೆ ಎನ್ನುವುದಕ್ಕೆ ಇದೊಂದು ನಿದರ್ಶನ. ಜನಪ್ರತಿನಿಧಿಗಳು, ಗ್ರಾಮೀಣರು ಹಾಗೂ ಪಂಚಾಯಿತಿ ಸಿಬ್ಬಂದಿಗಳ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ.
- ಮಹಮದ್ ಇಕ್ರಮುಲ್ಲ ಷರೀಫ್, ಸಿಇಒ, ರಾಮನಗರ ಜಿಪಂ
ಜನಪ್ರತಿನಿಧಿಗಳು, ಗ್ರಾಮೀಣ ಜನರು ಹಾಗೂ ಪಂಚಾಯಿತಿ ಸಿಬ್ಬಂದಿಗಳ ಸಂಘಟಿತ ಸಹಕಾರದಿಂದ ನರೇಗಾ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ನರೇಗಾದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಇದು ಪ್ರೇರಣೆಯಾಗಿದೆ. ನವದೆಹಲಿಯಲ್ಲಿ ಡಿಸೆಂಬರ್ ತಿಂಗಳಲ್ಲಿಯೇ ಪ್ರಶಸ್ತಿ ಪ್ರದಾನ ನಡೆಯಲಿದೆ.
- ಟಿ.ಎಸ್. ಶಿವರಾಮು, ಇಒ, ಕನಕಪುರ ತಾಲೂಕು ಪಂಚಾಯಿತಿ.
ಡಿಸೆಂಬರ್ 15ರ ಟಾಪ್ 10 ಸುದ್ದಾಗಾಗಿ ಇಲ್ಲಿ ಕ್ಲಿಕ್ ಮಾಡಿ: