
ರಾಮನಗರ (ಫೆ.18): ಆಧುನಿಕ ಜಗತ್ತಿನಲ್ಲಿ ಮೊಬೈಲ್ ಎಂಬ ಮಾಯಾವಿ ಯುವಜನತೆಯ ಜೀವನವನ್ನೇ ಬಲಿಪಡೆಯುತ್ತಿದೆ. ಮೊಬೈಲ್ ಗೀಳು ಬಿಟ್ಟು ವಿದ್ಯಾಭ್ಯಾಸದ ಕಡೆ ಗಮನಹರಿಸುವಂತೆ ಪೋಷಕರು ಮತ್ತು ಪ್ರಾಂಶುಪಾಲರು ಹೇಳಿದ ಬುದ್ಧಿಮಾತಿಗೆ ಮನನೊಂದ ವಿದ್ಯಾರ್ಥಿಯೊಬ್ಬ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಸಂಭವಿಸಿದೆ.
ಮೃತ ವಿದ್ಯಾರ್ಥಿಯನ್ನು ಕೋಡಿಹಳ್ಳಿ ಗ್ರಾಮದ ಪ್ರಭು ಎಂಬುವವರ ಪುತ್ರ ಶ್ರೀನಿವಾಸ್ (18) ಎಂದು ಗುರುತಿಸಲಾಗಿದೆ. ಈತ ಕನಕಪುರದ ಆದಿತ್ಯ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಶ್ರೀನಿವಾಸ್ ಸದಾ ಮೊಬೈಲ್‌ನಲ್ಲಿ ಮಗ್ನನಾಗಿರುತ್ತಿದ್ದರಿಂದ ಓದಿನ ಕಡೆಗೆ ಗಮನ ಕಡಿಮೆಯಾಗಿತ್ತು. ಇದರಿಂದ ಆತಂಕಗೊಂಡ ಪೋಷಕರು ಮಗನಿಗೆ ಮೊಬೈಲ್ ಗೀಳು ಬಿಟ್ಟು ಪರೀಕ್ಷೆಯ ಕಡೆ ಗಮನಹರಿಸುವಂತೆ ಹಲವು ಬಾರಿ ಬುದ್ಧಿವಾದ ಹೇಳಿದ್ದರು. ಅಷ್ಟೇ ಅಲ್ಲದೆ, ಕಾಲೇಜಿನ ಪ್ರಾಂಶುಪಾಲರಿಗೂ ವಿಷಯ ತಿಳಿಸಿ, ಮಗನಿಗೆ ಸರಿಯಾಗಿ ತಿಳಿಹೇಳುವಂತೆ ವಿನಂತಿಸಿದ್ದರು. ಪೋಷಕರ ಮನವಿಯಂತೆ ಕಾಲೇಜಿನಲ್ಲೂ ಶಿಕ್ಷಕರು ಶ್ರೀನಿವಾಸ್‌ಗೆ ಬುದ್ಧಿ ಹೇಳಿದ್ದರು ಎನ್ನಲಾಗಿದೆ.
ಪೋಷಕರು ಮತ್ತು ಶಿಕ್ಷಕರು ಹೇಳಿದ ಮಾತನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಬದಲಿಗೆ, ಶ್ರೀನಿವಾಸ್ ತೀವ್ರವಾಗಿ ಮನನೊಂದಿದ್ದನು. ನಿನ್ನೆ ಸಂಜೆ ಕಾಲೇಜು ಅವಧಿಯ ನಂತರ ಆದಿತ್ಯ ಪಿಯು ಕಾಲೇಜಿನ ಕಟ್ಟಡದ ಮೇಲಿಂದ ಹಾರಿ ಆತ್ಮ*ಹತ್ಯೆಗೆ ಯತ್ನಿಸಿದ್ದನು. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ತಕ್ಷಣವೇ ಕಾಲೇಜು ಸಿಬ್ಬಂದಿ ಮತ್ತು ಸ್ಥಳೀಯರು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ದುರದೃಷ್ಟವಶಾತ್, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಶ್ರೀನಿವಾಸ್ ಸ್ಥಿತಿ ಚಿಂತಾಜನಕವಾಗಿತ್ತು. ವೈದ್ಯರು ಸತತ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಶ್ರೀನಿವಾಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮಗನ ಉಜ್ವಲ ಭವಿಷ್ಯದ ಕನಸು ಕಂಡಿದ್ದ ಪೋಷಕರು ಈಗ ಮಗನ ಶವ ನೋಡಿ ಕಣ್ಣೀರು ಹಾಕುತ್ತಿರುವುದು ಎಂತಹವರ ಕರಳನ್ನೂ ಚುರುಕ್ ಎನ್ನುವಂತೆ ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವಜನತೆ ಸಣ್ಣಪುಟ್ಟ ವಿಷಯಗಳಿಗೂ ದೃತಿಗೆಟ್ಟು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸಮಾಜಕ್ಕೆ ಆತಂಕದ ವಿಷಯವಾಗಿದೆ.