ಶ್ರೀ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವ|ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು| ರಥೋತ್ಸವ ಕಣ್ತುಂಬಿಕೊಂಡು ಪುನೀತರಾದ ಭಕ್ತರು|
ಬಳ್ಳಾರಿ(ಮಾ.04): ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಮಂಗಳವಾರ ಸಂಜೆ ಶ್ರದ್ಧಾ- ಭಕ್ತಿಯಿಂದ ನೆರವೇರಿತು.
ನಗರ ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ದೇವಿಯ ಸಿಡಿಬಂಡಿ ರಥೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.
ಸಿಡಿಬಂಡಿ ಮುನ್ನ ದಿನವೇ ನಗರದ ದಿಗ್ಗಿ ಮಾಧವಯ್ಯ ಬೀದಿಯಿಂದ ಮೆರವಣಿಗೆ ಮೂಲಕ ಸಿಡಿಬಂಡಿಯನ್ನು ಎಳೆದು ತರಲಾಯಿತು. ಮಂಗಳವಾರ ಬೆಳಗ್ಗೆ ರಥೋತ್ಸವಕ್ಕೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಸಿಡಿಬಂಡಿಗೆ ಚಾಲನೆ ದೊರೆಯಿತು. ಮೂರು ಜೋಡು ಎತ್ತುಗಳು ಹೊತ್ತಿದ್ದ ಸಿಡಿಬಂಡಿ ಶ್ರೀ ಕನಕ ದುರ್ಗಮ್ಮ ದೇವಿಯ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಣೆ ಹಾಕಿತು. ಸಿಡಿಬಂಡಿ ವೀಕ್ಷಿಸಲು ಜಮಾಯಿಸಿದ್ದ ಭಕ್ತರು ಹೂವು- ಹಣ್ಣುಗಳನ್ನು ಸಿಡಿಬಂಡಿಗೆ ತೂರಿ ಭಕ್ತಿ ಸಮರ್ಪಿಸಿದರು.
ಎಲ್‌ಇಡಿ ಪರದೆ:
ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸುವುದರಿಂದ ಸಿಡಿಬಂಡಿ ವೀಕ್ಷಿಸಲು ವೃದ್ಧರು ಹಾಗೂ ಮಕ್ಕಳಿಗೆ ಸಾಧ್ಯವಾಗುವುದಿಲ್ಲ ಎಂದು ಅಲ್ಲಲ್ಲಿ ಎಲ್‌ಇಡಿ ಪರದೆಯನ್ನು ಹಾಕಲಾಗಿತ್ತು. ತಾಳೂರು ರಸ್ತೆ, ಹಳೆಯ ಬಸ್ ನಿಲ್ದಾಣ, ಸಂಗನಕಲ್ಲು ರಸ್ತೆಯಲ್ಲಿ ಎಲ್‌ಇಡಿ ವ್ಯವಸ್ಥೆ ಇದ್ದುದರಿಂದ ಭಕ್ತರು ದೂರದಲ್ಲಿಯೇ ನಿಂತು ಸಿಡಿಬಂಡಿಯನ್ನು ವೀಕ್ಷಣೆ ಮಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗಾಗಿ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಕೇಂದ್ರದಿಂದ 20 ಕಿ.ಮೀ ವ್ಯಾಪ್ತಿಯ ಹಳ್ಳಿಗಳಿಂದ ಬರುವವರಿಗೆ ಬಸ್ ಸೌಕರ್ಯವನ್ನು ಭಕ್ತರು ಮಾಡಿದ್ದರು. ಹೀಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಿಡಿಬಂಡಿ ವೀಕ್ಷಣೆಗೆ ಜನರು ಜಮಾಯಿಸಿದ್ದರು.