
ತುಮಕೂರು : ದೀಪಾವಳಿ ಹಬ್ಬದ ಬಳಿಕ ಬಂದಿರುವ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಡಗರದಲ್ಲಿ ಆಚರಿಸಲು ಕ್ಷಣಗಣನೆ ಆರಂಭವಾಗಿದೆ. ಕಳೆದ ಎರಡು ವರ್ಷಗಳಿಂದ ಇದ್ದ ಕೊರೋನಾ ಭೀತಿ ಈಗ ಇಲ್ಲದೇ ಇರುವುದರಿಂದ ಹಬ್ಬಕ್ಕೆ ದೊಡ್ಡ ಮಟ್ಟದಲ್ಲಿ ಜನ ಸಜ್ಜಾಗಿದ್ದಾರೆ.
ಊರ ಹೊರವಲಯದಲ್ಲಿ ಮಾರುಕಟ್ಟೆಗೆ ಕೆಲವು ಮಂದಿ ಹೋಗಿ ವಸ್ತುಗಳನ್ನು ಖರೀದಿಸಿದರೆ ತುಮಕೂರಿನ ಪ್ರತಿ ಬಡಾವಣೆಯಲ್ಲೂ ಮಿನಿ ಮಾರುಕಟ್ಟೆಯೇ ಸೃಷ್ಟಿಯಾಗಿದೆ. ಹೀಗಾಗಿ ಭಾನುವಾರದ ಸಂಕ್ರಾಂತಿ ಹಬ್ಬಕ್ಕೆ ಶನಿವಾರದಿಂದಲೇ ರಂಗು ಪಡೆದುಕೊಂಡಿದೆ. ಜನ ಅವರೇಕಾಯಿ, ಕಬ್ಬು, ಗೆಣಸು, ಹೂವು, ತರಕಾರಿ, ಎಳ್ಳು, ಬೆಲ್ಲ ಖರೀದಿಸುವುದರಲ್ಲಿ ಮಗ್ನರಾಗಿದ್ದಾರೆ. ಮಾರುಕಟ್ಟೆಯಲ್ಲಿ ಅವರೇಕಾಯಿ, ಗೆಣಸು, ತರಕಾರಿ, ಹೂವಿನ ಜೊತೆಗೆ ಎಳ್ಳು ಬೆಲ್ಲ ಕೂಡ ಸಿಗುತ್ತಿದೆ. ಜೊತೆಗೆ ಸಕ್ಕರೆ ಅಚ್ಚು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ತುಮಕೂರಿನ ಸೋಮೇಶ್ವರಪುರಂ, ಗೋಕುಲ ಬಡಾವಣೆ, ಎಸ್‌ಐಟಿ, ಗಾಂಧಿನಗರ ಹೀಗೆ ಎಲ್ಲಾ ಬಡಾವಣೆಗಳಲ್ಲೂ ಕೂಡ ರಸ್ತೆಯ ಬದಿಯಲ್ಲಿ ಮಿನಿ ಮಾರುಕಟ್ಟೆಸೃಷ್ಟಿಯಾಗಿದೆ. ಇನ್ನು ತುಮಕೂರು ಹೊರವಲಯದಲ್ಲಿರುವ ಮಾರುಕಟ್ಟೆಯಲ್ಲೂ ಕೂಡ ಜನವೋ ಜನ. ಕೇವಲ ತರಕಾರಿ, ಹೂವು, ಎಳ್ಳು ಬೆಲ್ಲವಷ್ಟೆಅಲ್ಲ, ಬಟ್ಟೆಅಂಗಡಿಗಳಿಗೂ ಕೂಡ ಜನ ಎಡತಾಕುತ್ತಿದ್ದಾರೆ. ಹೊಸ ಬಟ್ಟೆಖರೀದಿಸುವತ್ತ ಮಗ್ನರಾಗಿದ್ದಾರೆ.ಹಬ್ಬಕ್ಕೆ ವಸ್ತುಗಳನ್ನು ಖರೀದಿಸಲು ಬರುವವರೂ ಹೊಟೇಲ್‌ಗೂ ದಾಂಗುಡಿ ಇಡುತ್ತಿರುವುದರಿಂದ ತುಮಕೂರಿನ ಎಲ್ಲಾ ಹೊಟೇಲ್‌ಗಳಲ್ಲೂ ಜನಸಂದಣಿ ಹೆಚ್ಚಾಗಿದೆ. ರಸ್ತೆ ಬದಿಯ ಪುಟ್‌ಪಾತ್‌ನಲ್ಲಿ ಹಬ್ಬದ ವಸ್ತುಗಳನ್ನು ಇಟ್ಟುಕೊಂಡು ಮಾರುತ್ತಿರುವುದರಿಂದ ವಾಹನಗಳನ್ನು ನಿಲ್ಲಿಸಲು ಆಗುತ್ತಿಲ್ಲ. ಹೀಗಾಗಿ ಸವಾರರು ಅನತಿ ದೂರದಲ್ಲಿ ಪಾರ್ಕಿಂಗ್ ಮಾಡಿ ಹಬ್ಬದ ಖರೀದಿಯಲ್ಲಿ ನಿರತರಾಗಿದ್ದಾರೆ.
ಶನಿವಾರ ಬೆಳಿಗ್ಗೆಯಿಂದಲೇ ಹಬ್ಬಕ್ಕೆ ವಸ್ತುವಿನ ಖರೀದಿ ಜೋರಾಗಿದ್ದು ತುಮಕೂರಿನ ಹೊರವಲಯದ ಮಾರುಕಟ್ಟೆಯಲ್ಲಿ ಜನಜಾತ್ರೆಯೇ ಸೇರಿದೆ. ಕೆಲವರು ಕಾರಿನಲ್ಲಿ, ಮತ್ತೆ ಕೆಲವರು, ಆಟೋಗಳ ಮೂಲಕ ಮಾರುಕಟ್ಟೆಗೆ ಹೋಗಿ ವಸ್ತುಗಳನ್ನು ಖರೀದಿಸುವತ್ತ ಮಗ್ನರಾಗಿದ್ದಾರೆ. ದೂರದ ಮಾರುಕಟ್ಟೆಗೆ ಹೋಗಲು ಆಗದವರು ತಮ್ಮ ಬಡಾವಣೆಗಳಲ್ಲೇ ಇರುವ ಮಿನಿ ಮಾರುಕಟ್ಟೆಗೆ ಲಗ್ಗೆಯಿಟ್ಟು ಹಬ್ಬಕ್ಕೆ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಕಳೆದೆರೆಡು ವರ್ಷಗಳಿಂದ ಕೊರೋನಾ ಕಾರಣದಿಂದ ಹಬ್ಬಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಕಳೆದ ವರ್ಷದಿಂದ ಎಲ್ಲಾ ಹಬ್ಬಗಳೂ ಸಾಂಗೋಪಾಂಗವಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಬಂದಿರುವ ಸಂಕ್ರಾಂತಿ ಹಬ್ಬಕ್ಕೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.
ಎರಡನೇ ಶನಿವಾರ ರಜೆ ಇದ್ದುದ್ದರಿಂದ ಶನಿವಾರ ಬೆಳಿಗ್ಗೆಯಿಂದಲೇ ಮಾರುಕಟ್ಟೆಗೆ ಜನ ಲಗ್ಗೆ ಇಟ್ಟಿದ್ದಾರೆ. ಹಬ್ಬಕ್ಕೆ ಬೇಕಾದ ಥರೇವಾರಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ದುಬಾರಿಯಾದರೂ ಖರೀದಿ ಜೋರು:
ಒಂದು ಮಾರಿನ ಹೂವಿನ ಬೆಲೆ ಊರುದ್ದ ರೇಟು ಇದ್ದರೂ ಜನ ಖರೀದಿ ಮಾಡುವಲ್ಲಿ ಹಿಂದೇ ಬಿದ್ದಿಲ್ಲ. ಒಂದು ಮಾರು 100 ರು.ಗೆ ಬಿಕರಿಯಾಗುತ್ತಿದೆ. ಹಾಗೆಯೇ ಅವರೇ ಕಾಯಿ ತೂಕ 100 ರಿಂದ 150 ರವರೆಗೂ ದುಬಾರಿ ರೇಟಾಗಿದೆ. ಆದರೂ ಕೂಡ ವಸ್ತು ಖರೀದಿ ಮಾಡುವಲ್ಲಿ ಜನ ಹಿಂದೇಟು ಹಾಕುತ್ತಿಲ್ಲ. ತುಮಕೂರಿನ ಸೋಮೇಶ್ವರಪುರಂನ ವ್ಯಾಪಾರಿ ಸುರೇಶಣ್ಣನ ಪ್ರಕಾರ ಹಬ್ಬದ ಖರೀದಿ ಜೋರಾಗಿದೆ. ಒಳ್ಳೆಯ ವ್ಯಾಪಾರವಾಗುತ್ತಿದೆ ಎಂದು ಸಂಭ್ರಮಪಡುತ್ತಾನೆ. ಒಟ್ಟಾರೆಯಾಗಿ ತುಮಕೂರು ಜಿಲ್ಲೆಯಾದ್ಯಂತ ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚುತ್ತಿದ್ದು ವರ್ಷದ ಮೊದಲ ಹಬ್ಬಕ್ಕೆ ತುಮಕೂರು ಜಿಲ್ಲೆ ಸಂಪೂರ್ಣವಾಗಿ ಸಜ್ಜಾಗಿದೆ.