ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ: ಜನತಾ ಮಹಾ ಅಧಿವೇಶನಕ್ಕೆ ಸಿದ್ಧತೆ

By Kannadaprabha NewsFirst Published Apr 3, 2021, 2:08 PM IST
Highlights

ಕಲಬುರಗಿಯಲ್ಲಿ ‘ಕಲ್ಯಾಣ ಕರ್ನಾಟಕ ಜನತಾ ಮಹಾ ಅಧಿವೇಶನ’ ನಡೆಸಲು ನಿರ್ಧಾರ| ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಈ ಮುಖಾಂತರ ಬಲವಾದ ಎಚ್ಚರಿಕೆ ನೀಡಲು ಮುಂದಾದ ಇಲ್ಲಿನ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ| 

ಕಲಬುರಗಿ(ಏ.03):  ಸತತ ಅನ್ಯಾಯಕ್ಕೊಳಗಾಗುತ್ತಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಗತಿ ಮರೀಚಿಕೆಯಾಗಿದೆ, ಜನನಾಯಕರು ಈ ಬಗ್ಗೆ ಕಿಂಚಿತ್ತೂ ಲಕ್ಷ್ಯ ನೀಡದೆ ತಮ್ಮ ಪಾಡಿಗೆ ತಾವಿದ್ದಾರೆಂದು ಸಿಡಿದೆದ್ದಿರುವ ಇಲ್ಲಿನ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸರಣಿ ಹೋರಾಟ ಸೇರಿದಂತೆ ಉಗ್ರ ಹೋರಾಟಕ್ಕೆ ಇಳಿಯಲು ನಿರ್ಧರಿಸಿದೆ.

ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯ ರಚನೆಗಾಗಿ ಹೋರಾಡಬೇಕೆಂಬುದರ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿ ನಿರ್ಧರಿಸಲು ಬರುವ ದಿನಗಳಲ್ಲಿ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ‘ಕಲ್ಯಾಣ ಕರ್ನಾಟಕ ಜನತಾ ಮಹಾ ಅಧಿವೇಶನ’ ನಡೆಸಲು ನಿರ್ಧರಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮೀತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ಐತಿಹಾಸಿಕ ಕಲ್ಯಾಣ ಕರ್ನಾಟಕ ಮಹಾ ಅಧಿವೇಶನದಲ್ಲಿ ಎಲ್ಲಾ ಧರ್ಮಗುರುಗಳು, ಮಠಾಧೀಶರು, ಹಾಲಿ ಮತ್ತು ಮಾಜಿ ಸಚಿವರು, ಸಂಸದರು, ಶಾಸಕರು, ಎಲ್ಲಾ ಪಕ್ಷಗಳ ಮುಖಂಡರು, ಬುದ್ಧಿ ಜೀವಿಗಳು, ಚಿಂತಕರು, ಆರ್ಥಿಕ ತಜ್ಞರು, ಕಲ್ಯಾಣ ಕರ್ನಟಕ ಪರ ಹೋರಾಟಗಾರರು ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಮುಖಂಡರು, ಸಾಹಿತಿಗಳು ಸೇರಿದಂತೆ ಎಲ್ಲಾ ಕ್ಷೇತ್ರದ ಆಯ್ದ 200ರಿಂದ 500 ಪ್ರತಿನಿಧಿಗಳು ಭಾಗವಹಿಸುವಂತೆ ಆಯಾ ಕ್ಷೇತ್ರದ ಗಣ್ಯರ ಸಮ್ಮತಿ ಪಡೆದು ಮೇ ಮೊದಲ ವಾರದಲ್ಲಿ ‘ಮಹಾ ಅಧಿವೇಶನ’ ಹಮ್ಮಿಕೊಳ್ಳ ಲಾಗುವುದು ಎಂದಿದ್ದಾರೆ.

ಉತ್ತರ ಕರ್ನಾಟಕದಲ್ಲಿ ರಣಬಿಸಿಲು: ನಿಗಿ ನಿಗಿ ಕೆಂಡವಾದ ಕಲಬುರಗಿ..!

ಈ ಅಧಿವೇಶನದಲ್ಲಿ ಕೈಗೊಳ್ಳುವ ನಿರ್ಣಯದಂತೆ ನಮ್ಮ ಹಕ್ಕಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಸಂಘಟಿತ ರಾಜಕಿಯ ಒತ್ತಡ ತರುವುದರ ಬಗ್ಗೆ, ಉಗ್ರ ಸ್ವರೂಪದ ರೀತಿಯಲ್ಲಿ ಧರಣಿ ಸತ್ಯಾಗ್ರಹ, ರಸ್ತೆ ತಡೆ, ಹೆದ್ದಾರಿ ತಡೆ, ರೈಲು ರೋಕೊ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಬಂದ್‌, ಹೀಗೆ ವಿನೂತನ ಮಾದರಿಯ ನಿರಂತರ ಹೋರಾಟಗಳು ನಡೆಸಿ ವಿಧಾನ ಸೌಧ ಮುತ್ತಿಗೆ ಹಾಕಲು ಮಹಾ ಅಧಿವೇಶನದಲ್ಲಿ ಚರ್ಚಿಸಿ, ಪೂಜ್ಯರ, ಎಲ್ಲಾ ಕ್ಷೇತ್ರದ ಗಣ್ಯರ, ಉಪಸ್ಥಿತಿಯಲ್ಲಿ ಸರ್ವಾನುಮತದ ದಿಟ್ಟನಿರ್ಣಯ ಕೈಗೊಳ್ಳಲಾಗುವುದು ಎಂದಿದ್ದಾರೆ.

ನಮ್ಮ ಪ್ರದೇಶದ ಅಸ್ತಿತ್ವದ ಈ ಮಹತ್ವದ ವಿಷಯಕ್ಕೆ ಎಲ್ಲಾ ಕ್ಷೇತ್ರದ ಗಣ್ಯರು ಗಂಭೀರವಾಗಿ ಪರಿಗಣಿಸುವಂತೆ ಸಮಿತಿ ವಿನಂತಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಈ ಮುಖಾಂತರ ಬಲವಾದ ಎಚ್ಚರಿಕೆ ನೀಡುತ್ತದೆ. ಮಹಾ ಅಧಿವೇಷನಕ್ಕೆ ಮುನ್ನುಡಿ ಎಂಬಂತೆ ಎರಡು- ಮೂರು ದಿನಗಳಲ್ಲಿ ಸ್ಥಳೀಯ ಶಾಸಕರು, ಸಂಸದರ ಮನೆಗಲಿಗೆ ಮುತ್ತಿಗೆ ಹಾಕಿ ಹೋರಾಟಕ್ಕೆ ನಾಂದಿ ಹಾಡುವುದಾಗಿಯೂ ಲಕ್ಷ್ಮಣ ದಸ್ತಿ ಹೇಳಿದ್ದಾರೆ.
 

click me!