
ಮಂಗಳೂರು(ಸೆ.29): ದ.ಕ. ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ 2018- 19ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಈ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ದ.ಕ ಜಿಲ್ಲೆಯ ಐದು ತಾಲೂಕಿನ 25 ಗ್ರಾ.ಪಂ.ಗಳ ಪೈಕಿ ಕಲ್ಲಮುಂಡ್ಕೂರು ಗ್ರಾ.ಪಂ ಅತಿ ಹೆಚ್ಚು 143 ಅಂಕಗಳನ್ನು ಪಡೆಯುವ ಮೂಲಕ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ನಗದು ರಹಿತ ಹಣಕಾಸಿನ ವ್ಯವಹಾರ, ಸಾರ್ವಜನಿಕ ಕುಂದುಕೊರತೆ ನಿವಾರಣೆಗೆ ಆನ್‌ಲೈನ್ ವ್ಯವಸ್ಥೆ, ಗ್ರಾ.ಪಂ. ಸಭೆಗಳನ್ನು ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಬಿತ್ತರಿಸಲಾಗುತ್ತಿದೆ. ನಲ್ಲಿ ನೀರು ಸರಬರಾಜು ಸೌಕರ್ಯ ಪಡೆದ ಎಲ್ಲ ಮನೆಗಳಿಗೂ ಮೀಟರ್ ಅಳವಡಿಕೆ, ಸ್ವಂತ ವಿದ್ಯುತ್ ಉತ್ಪಾದನೆಗೆ ಸೋಲಾರ್ ವ್ಯವಸ್ಥೆ, ಸಂಪೂರ್ಣ ಸಾಕ್ಷರ ಪಂಚಾಯತ್, ಪ್ಲಾಸ್ಟಿಕ್ ನಿಷೇಧ ಜಾರಿಗೊಳಿಸಿ ಗಮನ ಸೆಳೆದ ಕಲ್ಲಮುಂಡ್ಕೂರು ಪಂಚಾಯಿತಿ ಜಿಲ್ಲೆಯಲ್ಲೇ ಮಾದರಿಯಾಗಿ ಗಾಂಧಿ ಪುರಸ್ಕಾರ ಪಡೆಯುತ್ತಿರುವುದು ಗಮನಾರ್ಹ. ಇಲ್ಲಿ ಕಾವಲು ಸಮಿತಿ ಸಭೆ ಮೂರು ತಿಂಗಳಿಗೊಮ್ಮೆ ನಡೆಯುತ್ತಿದ್ದು ಯಾವುದೇ ಬಾಲ್ಯವಿವಾಹ ನಡೆದಿಲ್ಲ.
ತ್ಯಾಜ್ಯವಿಲೇವಾರಿ:
ಮೂರನೇ ಶನಿವಾರ ಅಂಗನವಾಡಿ ಕೇಂದ್ರಗಳ ಮೂಲಕ ಒಣಕಸವನ್ನು ಸಂಗ್ರಹಿಸಲಾಗುತ್ತಿದೆ. ಬೀದಿಗಳಿಂದ ಹಸಿ ಕಸದ ನಿರ್ವಹಣೆ ನಡೆಸಲಾಗುತ್ತಿದೆ. 2018- 19ನೇ ಸಾಲಿಗೆ 5 ವರ್ಷಗಳ ದೂರದೃಷ್ಟಿಯೋಜನೆ ತಯಾರಿಸಲಾಗಿದೆ. ಯೋಜನೆಗಳ ಕ್ರಿಯಾಯೋಜನೆಯನ್ನು ಪಂಚತಂತ್ರ ತಂತ್ರಾಂಶದಲ್ಲಿಅಪ್ಲೋಡ್ ಮಾಡಲಾಗಿದೆ.
ಸುವಿಧಾ ದಸರಾ ಎಕ್ಸ್‌ಪ್ರೆಸ್ ರೈಲು ಕಾರವಾರಕ್ಕೆ ವಿಸ್ತರಣೆ
2018- 19ರಲ್ಲಿ ವಾರ್ಷಿಕ ತೆರಿಗೆ ವಸೂಲಾತಿ ಗರಿಷ್ಠ ಸಾಧನೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ವಸೂಲಾತಿಯಲ್ಲಿ ಹೆಚ್ಚಳ ಕಂಡುಬಂದಿದೆ. ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಗಳ ಪ್ರಕಾರ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. 14ನೇ ಹಣಕಾಸು ಆಯೋಗದ ಅನುದಾನ ಪೂರ್ಣ ಬಳಕೆಯಾಗಿದೆ. ಪ.ಜಾ, ಪಂಗಡದ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ 1.28 ಲಕ್ಷ ರು. ಅನುದಾನ ಪೂರ್ಣ ವಿನಿಯೋಗವಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಅರ್ಹ ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡಲಾಗಿದೆ. ಕೇಂದ್ರ ಸರ್ಕಾರದ ನಿಯಮಾನುಸಾರ ಸಾಮಾಜಿಕ ಪರಿಶೋಧನೆ ನಡೆಸಲಾಗಿದೆ, ಹಿಂದಿನ ಪರಿಶೋಧನೆಯ ಅನುಪಾಲನ ವರದಿ ಸಲ್ಲಿಸಲಾಗಿದೆ.
ಬಾನಂಗಡಿಯಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. 691 ಕುಟುಂಬಗಳಿಗೆ ಕೊಳವೆ ಬಾವಿ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. 303 ಬೀದಿ ದೀಪಗಳನ್ನು ನಿರ್ವಹಿಸಲಾಗುತ್ತಿದೆ.
ವಸತಿ ಯೋಜನೆ:
2015- 16, 16- 17, 17- 18ರಲ್ಲಿ ಬಸವ ವಸತಿ, ಬಸವ ಹೆಚ್ಚುವರಿ ವಸತಿ ನಿರ್ಮಾಣ, 2015- 16ರಲ್ಲಿ ಇಂದಿರಾ ಆವಾಸ್, ಅಂಬೇಡ್ಕರ್ ಗ್ರಾಮೀಣ ನಿವಾಸ್ ಯೋಜನೆಗಳಲ್ಲಿ ನೂರು ಶೇಕಡ ಪ್ರಗತಿ ಸಾಧಿಸಿರುವುದು ವಿಶೇಷ. ಇರುವ 1810 ಅಧಿಕೃತ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದು 2016ರಲ್ಲೇ ಬಹಿರ್ದೆಶೆ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಮುದಾಯ ಶೌಚಾಲಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿದೆ. ಈ ಕಳೆದ ನಾಲ್ಕು ವರ್ಷಗಳಲ್ಲಿ ಚರಂಡಿ ನಿರ್ಮಾಣ, ನಿರ್ವಹಣೆಯಲ್ಲಿ ಶೇ.100 ಸಾಧನೆ ತೋರಲಾಗಿದೆ. ವಾರ್ಡ್, ಗ್ರಾಮಸಭೆ, ಮಹಿಳೆಯರು, ಮಕ್ಕಳಿಗಾಗಿ ವಿಶೇಷ ಗ್ರಾಮಸಭೆ ನಡೆಸಲಾಗಿದೆ.
ಆಡಳಿತ:
ಅಧ್ಯಕ್ಷೆಯಾಗಿ ಪ್ರೇಮಾ, ಉಪಾಧ್ಯಕ್ಷರಾಗಿ ಸುಂದರ, ಸದಸ್ಯರಾಗಿ ಎ. ಸತೀಶ, ವಸಂತ ನಾಯ್‌್ಕ, ಯಶೋದಾ, ಗೀತಾ ಶೆಟ್ಟಿ, ಕೇಶವ ಪೂಜಾರಿ, ಜೆನೆಟ್ ಡಿಸೋಜ, ಸುಖಾನಂದ ಶೆಟ್ಟಿ, ಶರ್ಮಿಳಾ ಸೆರಾವೋ, ಜೋಕಿಂ ಕೊರೆಯ, ಯೋಗಿನಿ, ಸುನೀತಾ, ರಾಮಣ್ಣ ಗೌಡ, ಶ್ಯಾಮು, ಲಾಜರಸ್ ಡಿಕೋಸ್ತ ಸೇವೆ ಸಲ್ಲಿಸುತ್ತಿದ್ದು ಬಿ. ಉಗ್ಗಪ್ಪ ಮೂಲ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.