
ಧಾರವಾಡ(ಸೆ.29): ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ವತಿಯಿಂದ ಈ ಬಾರಿ ಸೆ. 29ರಿಂದ ಅಕ್ಟೋಬರ್ 8ರ ವರೆಗೆ ನಗರದ ವಿವಿಧೆಡೆ ದಸರಾ ಉತ್ಸವದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಲಾಭವನ ಮೈದಾನದಲ್ಲಿ ದಸರಾ ನಿಮಿತ್ತ ವಸ್ತು ಪ್ರದರ್ಶನ ನಡೆಯುತ್ತಿದೆ. ಸೆ. 29ರಂದು ದುರ್ಗಾದೇವಿ ಮೂರ್ತಿ ಮೆರವಣಿಗೆ ಹಾಗೂ ಪ್ರತಿಷ್ಠಾಪನೆ, ಪೂಜಾ ಕಾರ್ಯಕ್ರಮಗಳ ಮೂಲಕ ಅಧಿಕೃತ ದಸರಾ ಹಬ್ಬಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ನಿತ್ಯ ಬೆಳಗ್ಗೆ ಭಕ್ತರಿಂದ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸೆ. 30ರಿಂದ ಅ. 8ರ ವರೆಗೂ ವಿವಿಧ ಮಹಿಳಾ ಮಂಡಳ ಮತ್ತು ಭಜನಾ ಮಂಡಳಿಗಳಿಂದ ಭಜನೆ, 101 ಕುಮಾರಿಯರಿಗೆ ಉಡಿ ತುಂಬುವುದು, ಕುಂಕುಮಾರ್ಜನೆ, ಭಕ್ತಿಗೀತೆಗಳು ನಡೆಯಲಿವೆ. ಪ್ರತಿನಿತ್ಯ ಭಕ್ತರು ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಸೆ. 29ರಿಂದ ಅ. 8ರ ವರೆಗೆ ನಿತ್ಯ ಸಂಜೆ ನವರಾತ್ರಿ ಅಂಗವಾಗಿ ದುರ್ಗಾದೇವಿ ಸಾನ್ನಿಧ್ಯದಲ್ಲಿ ದೇವಿ ಮಹಾತ್ಮೆ ಹಾಗೂ ವೆಂಕಟೇಶ್ವರ ಪುರಾಣವನ್ನು ಗರಗ ಮಡಿವಾಳೇಶ್ವರದ ವೀರೇಶ್ವರ ಸ್ವಾಮಿಗಳು ನಡೆಸಿಕೊಡಲಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೆ. 3ರಿಂದ ಅಕ್ಟೋಬರ್ 6ರ ವರೆಗೆ ನಿತ್ಯ ಮಧ್ಯಾಹ್ನ 3ರಿಂದ ಮಹಿಳಾ ಮತ್ತು ಮಕ್ಕಳ ದಸರಾ ಉತ್ಸವ ನಡೆಯಲಿದೆ. ಅ. 3ರಂದು ಎಲ್ಕೆಜಿ, ಯುಕೆಜಿ ಮಕ್ಕಳಿಂದ ನೃತ್ಯ ಸ್ಪರ್ಧೆ, ಮಹಿಳೆಯರಿಗಾಗಿ ದೇವಿ ಕುರಿತು ನೃತ್ಯ ಸ್ಪರ್ಧೆ ನಡೆಯಲಿದ್ದು ರಮ್ಯಾ ನಾಯಕ (8722766967) ಸಂಪರ್ಕಿಸಬಹುದು. ಅದೇ ದಿನ ಪನಿತ ಚೇತನ ನೃತ್ಯಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಸಂಜೆ ನಡೆಯಲಿದೆ. ಅ. 4ರಂದು ಅಡುಗೆ ಸ್ಪರ್ಧೆ, ಮಹಿಳೆಯರಿಗಾಗಿ ಸಮೂಹಗಾನ, ಮಹಿಳೆಯರ ಫ್ಯಾಶನ್ ಷೋ, ಅಭಿವ್ಯಕ್ತ ಕಲಾತಂಡದಿಂದ ಕಲಾ ಉತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು.
ಅ. 5ರಂದು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಮಹಿಳೆಯರ ಆಟಗಳು, ಹೊಗೆ ಕಲಾ ಚಿತ್ರಗಳ ಪ್ರದರ್ಶನ, ಮಹಿಳೆಯರಿಗೆ ಕಿರುನಾಟಕ ಸ್ಪರ್ಧೆ ಹಾಗೂ ಅನಿಲ ಮೈತ್ರಿ ತಂಡದಿಂದ ಜಾನಪದ, ಭಾವಗೀತೆ ಹಾಗೂ ಹಾಸ್ಯ ನಡೆಯಲಿದೆ. ಅ. 6ರಂದು ಮಕ್ಕಳ ಚಿತ್ರಕಲೆ, ಗುಂಪು ನೃತ್ಯ, ಕರೋಕೆ, ಭಕ್ತಿ ಹಾಗೂ ಭಾವ ಗೀತೆಗಳು ನಡೆಯಲಿವೆ. ಅ. 7ರಂದು ಮಧ್ಯಾಹ್ನ 2.30ಕ್ಕೆ ಗಾಂಧಿನಗರ ಈಶ್ವರ ದೇವಸ್ಥಾನದಿಂದ ಬೃಹತ್ ಜಂಬೂ ಸವಾರಿ ಮೆರವಣಿಗೆ ಹೊರಡಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಮೆರವಣಿಗೆ ಕಡಪಾ ಮೈದಾನದ ವರೆಗೂ ಸಾಗಲಿದೆ. ಅ. 8ರಂದು ಸಂಜೆ 6.30ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮ, ಸಂಜೆ 7ಕ್ಕೆ ದಾಂಡಿಯಾ ನೃತ್ಯ ಹಾಗೂ ರಾತ್ರಿ 9ಕ್ಕೆ ದೇವಿ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ತಿಳಿಸಿದರು.
ಪ್ರತ್ಯೇಕ ಉಕ ಆಗಬೇಕು
ದಸರಾ ನಿಮಿತ್ತ ವಸ್ತು ಪ್ರದರ್ಶನಕ್ಕಾಗಿ ಕಲಾಭವನ ಮೈದಾನ ಕೇಳಿದರೆ ಬರೋಬ್ಬರಿ 13 ಲಕ್ಷ ಕೇಳಿದ್ದಾರೆ. ಈ ಹಬ್ಬದ ಆಚರಣೆಗೆ ಸರ್ಕಾರದಿಂದ 1 ಅನುದಾನ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉದ್ದೇಶಪೂರ್ವಕವಾಗಿ ಈ ಬಾರಿ ಅಧಿಕ ಪ್ರಮಾಣದಲ್ಲಿ ಬಾಡಿಗೆ ಕೇಳುತ್ತಿದೆ. ರಾಜ್ಯ ಸರ್ಕಾರ ಬೆಂಗಳೂರು, ಮೈಸೂರು ಭಾಗದಲ್ಲಿ ಕೋಟಿಗಟ್ಟಲೇ ಅನುದಾನ ಒದಗಿಸುತ್ತಿದ್ದು ಈ ಭಾಗಕ್ಕೆ ಪುಡಿಗಾಸು ನೀಡುತ್ತದೆ. ಇದನ್ನು ಖಂಡಿಸಲೇಬೇಕು.
ನಮ್ಮ ಜನಪ್ರತಿನಿಧಿಗಳಿಂದಾಗಿಯೇ ನಾವು ಹಿಂದೆ ಉಳಿಯುತ್ತಿದ್ದೇವೆ. ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಇಂತಹ ಘಟನೆಗಳಿಂದ ಏಳುತ್ತಿವೆ. ದಸರಾ ಮಾಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ಮಾಡುತ್ತಿದ್ದರೆ, ಈ ದಸರಾ ನಿಲ್ಲಿಸಲು ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಮನಸ್ಸಿಗೆ ಬೇಸರ ಮೂಡಿಸಿದೆ. ಆದ್ದರಿಂದ ಈ ಬಾರಿ ಸರಳವಾಗಿ ದಸರಾ ಆಚರಿಸಲಾಗುತ್ತಿದೆ ಎಂದು ಗುರುರಾಜ ಹುಣಸಿಮರದ ಹೇಳಿದರು.