
ಶೇಷಮೂರ್ತಿ ಅವಧಾನಿ
ಕಲಬುರಗಿ: ಇಂದಿಗೂ ವರದಕ್ಷಿಣೆ ಸಾಮಾಜಿಕ ಪಿಡುಗಾಗಿ, ಅನಿಷ್ಠ ಪದ್ಧತಿಯಾಗಿ ಕಾಡುತ್ತಿರುವಾಗ ಇದಕ್ಕೆ ಕಡಿವಾಣ ಹಾಕಲು ಜಿಲ್ಲೆಯ ಆಳಂದ ತಾಲೂಕಿನ ಲಂಬಾಣಿ ತಾಂಡಾಗಳಲ್ಲಿ ಸದ್ದಿಲ್ಲದಂತೆ ಹೊಸ ಕ್ರಾಂತಿಯೇ ಶುರುವಾಗಿದೆ. ಬಂಜಾರಾ ಕ್ರಾಂತಿದಳ, ಸೇವಾಲಾಲ ಜಯಂತಿ ಸಮಿತಿ ಜಂಟಿಯಾಗಿ ಲಂಬಾಣಿ ಸಮಾಜದ ಹಿರಿಯರು, ಯುವಕರು ಒಂದಾಗಿ ವರದಕ್ಷಿಣೆ ಕೊಡುಕೊಳ್ಳುವುದನ್ನು ತಾಂಡಾಗಳಲ್ಲಿ ನಿಷೇಧಿಸುವ ಮೂಲಕ ಸರಳ, ವರದಕ್ಷಿಣೆ ರಹಿತ ವಿವಾಹಗಳಿಗೆ ಆದ್ಯತೆ ನೀಡುವಂತಹ ಐತಿಹಾಸಿಕ ನಿರ್ಧಾರ ಕೈಗೊಂಡು ಸಾಮಾಜಿಕ ಬದ್ಧತೆ ತೋರಿದ್ದಾರೆ.
ವರದಕ್ಷಿಣೆ ಮುಕ್ತ ಸರಳ ವಿವಾಹ ಜಾಗೃತಿ ಅಭಿಯಾನ ಶುರುಮಾಡಿರುವ ಬಂಜಾರಾ ಯುವಪಡೆ ಹಾಗೂ ಆ ಸಮುದಾಯದ ಹಿರಿಯರು, ಕಿರಿಯರು ವರದಕ್ಷಿಣೆ ರಹಿತ ವಿವಾಹ, ಆಚರಣೆಗಳಿಗೇ ಆದ್ಯತೆ, ಆಡಂಬರಗಳಿಗೆ ಗುಡ್‌ಬೈ ಹೇಳುವಂತಹ ವಿನೂತನ ಪರಿಕಲ್ಪನೆಗಳೊಂದಿಗೆ ಹೊಸ ಹೆಜ್ಜೆ ಇಡುತ್ತಿದ್ದಾರೆ.
ತಾಲೂಕಿನ ಸೀಡ್ಸ್ ಫಾರ್ಮ್ ತಾಂಡಾ, ನೆಹರು ನಗರ ತಾಂಡಾ, ಹೆಬಳ್ಳಿ ತಾಂಡಾ, ಪಿ.ಎನ್.ತಾಂಡಾ, ಮೋರಿಸಾಬ್ ತಾಂಡಾಗಳು ಸೇರಿದಂತೆ 52ಕ್ಕೂ ಅಧಿಕ ತಾಂಡಾಗಳಲ್ಲಿ ವರದಕ್ಷಿಣೆ ವಿರುದ್ಧ ಜಾಗೃತಿ ಅಭಿಯಾನ ಕೈಗೆತ್ತಿಕೊಂಡಿರುವ ಬಂಜಾರಾ ಕ್ರಾಂತಿದಳ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ಸಂಕಲ್ಪಿಸಿದೆ.
ಲಂಬಾಣಿ ಸಮುದಾಯದಲ್ಲಿ ವರದಕ್ಷಿಣೆ ರಹಿತ ವಿವಾಹಗಳಾಗಬೇಕು, ಹಣ, ದುಬಾರಿ ಉಡುಗೊರೆ, ಆಮಿಷ ಇನ್ಯಾವುದೇ ರೂಪದಲ್ಲಿ ವರದಕ್ಷಿಣೆ ಭೂತ ಕಾಡಬಾರದು. ಶಿಕ್ಷಣ, ಸರ್ಕಾರಿ ಸೌಲಭ್ಯಗಳ ಹಕ್ಕುಗಳ ಅರಿವು ಉಂಟಾಗಿ ಎಲ್ಲರೂ ಶಿಕ್ಷಿತರಾಬೇಕು, ಸಂಘಟಿತರಾಗುವ ಮೂಲಕ ಸಮಾಜದ ಒಗ್ಗಟ್ಟಿಗೆ, ಆರ್ಥಿಕ ಬಲಗೊಳ್ಳುವಿಕಿಗೆ ಕಾರಣರಾಗಬೇಕೆಂಬ ಸಂಕಲ್ಪ ಇಟ್ಟುಕೊಂಡು ಜಾಗೃತಿ ಅಭಿಯಾನ ಸದ್ದಿಲ್ಲದೆ ತಾಂಡಾಗಳಲ್ಲಿ ಶುರುವಾಗಿದೆ.
ಆಳಂದ ತಾಲೂಕಿನ 52 ತಾಂಡಾಗಳಲ್ಲಿ ವರದಕ್ಷಿಣೆ ರಹಿತ, ಆಚರಣೆ ಸಹಿತ ಮದುವೆಗಳಿಗೆ ಆದ್ಯತೆ ನೀಡುವ ಸತ್ಸಂಕಲ್ಪದೊಂದಿಗೆ ಬಂಜಾರಾ ಕ್ರಾಂತಿ ದಳ ಕೆಲವು ಸೂಚನೆಗಳನ್ನು ಸಮುದಾಯದಲ್ಲಿ ರವಾನಿಸಿದೆ. ತಾಂಡಾಗಳಲ್ಲಿನ ಮದುವೆಗಳಲ್ಲಿ ವರದಕ್ಷಿಣೆ ರೂಪದಲ್ಲಿ ಹಣ, ವಾಹನ, ದುಬಾರಿ ಉಡುಗೊರೆ ನಿಷೇಧ. ಈ ನಿಯಮವನ್ನು ಉಲ್ಲಂಘಿಸಿದರೆ 1 ಲಕ್ಷ ರು.ದಂಡ. ವರದಕ್ಷಿಣೆ ಪಡೆಯುವವರ ಮಾಹಿತಿ ನೀಡುವವರಿಗೆ 15 ಸಾವಿರ ರು. ಬಹುಮಾನ. ಮದುವೆಗಳಲ್ಲಿ ಡಿಜೆ, ಮೈಕ್ ಬಳಕೆ, ಮದ್ಯಪಾನ ನಿಷೇಧ. ಸಮುದಾಯದ ಸಾಂಪ್ರದಾಯಿಕ ಆಚರಣೆಗಳಿಗೆ ಪ್ರಥಮ ಆದ್ಯತೆ ಎಂಬ ಸೂಚನೆಗಳನ್ನು ನೀಡಿದೆ.
ವರದಕ್ಷಿಣೆ ವಿರುದ್ದ ಆಳಂದ ತಾಂಡಾಗಳಲ್ಲಿ ಜಾಗೃತಿಗೆ ಮುಂದಾಗಿರುವ ಯುವಕರ ಕಾರ್ಯಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆ ಪಿಡುಗಿನ ವಿರುದ್ಧ ಲಂಬಾಣಿ ಸಮುದಾಯ ಕೈಗೊಂಡ ನಿರ್ಧಾರ ಅತ್ಯಂತ ಪ್ರಶಂಸಾರ್ಹ. ಬಂಜಾರಾ ಸಮುದಾಯದಲ್ಲಿ ಮೊದಲು ಸರಳ ವಿವಾಹಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಕಾಲ ಬದಲಾದಂತೆ ಸಮುದಾಯದ ಜನರು ಕೂಡಾ ವರದಕ್ಷಿಣೆ ಕೊಟ್ಟು ಕೊಳ್ಳುವಿಕೆಗೆ ಒಗ್ಗಿಕೊಳ್ಳಬೇಕಾಯಿತು. ಇದರಿಂದಾಗಿ ಸಮುದಾಯದಲ್ಲಿ ಆರ್ಥಿಕವಾಗಿ ದುರ್ಬಲವಾದವರಿಗೆ ಹೊರೆಯಾಗತೊಡಗಿತು. ಈ ಅನಿಷ್ಟ ಪದ್ಧತಿಯಿಂದ ಸಮುದಾಯದ ಜನರ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡ ಬಂಜಾರಾ ಕ್ರಾಂತಿದಳ ಹಾಗೂ ಸೇವಾಲಾಲ್ ಜಯಂತಿ ಸಮಿತಿಯ ಯುವಕರು ತಾಂಡಾಗಳಲ್ಲಿ ವರದಕ್ಷಿಣೆ ವಿರುದ್ದ ಜನಜಾಗೃತ ಮೂಡಿಸುತ್ತಿರೋದು ಉತ್ತಮ ಕೆಲಸವಾಗಿದೆ ಎಂದಿದ್ದಾರೆ.
ಆಳಂದ ತಾಲೂಕಿನ ಬಂಜಾರಾ ಸಮಾಜದ 52 ತಾಂಡಾಗಳಲ್ಲಿ ವರದಕ್ಷಿಣೆ ಕಡಿವಾಣ ಹಾಕಲು ಬಂಜಾರಾ ಕ್ರಾಂತಿ ದಳ ಮತ್ತು ಸೇವಾಲಾಲ್ ಜಯಂತಿ ಸಮಿತಿ ಜಂಟಿಯಾಗಿ ತಾಂಡಾಗಳಲಿ ಸರಣಿ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಹಿಂದೆಲ್ಲಾ ಲಂಬಾಣಿ ಸಮಾಜದಲ್ಲಿ ವರದಕ್ಷಿಣೆಸ ಡಿಜೆ, ಮೈಕ್, ಮದ್ಯ ಇವೆಲ್ಲ ಇರಲೇ ಇಲ್ಲ. ಅದೇನಿದ್ದರೂ ವಧು- ವರ ಪಕ್ಷದವರಲ್ಲಿ 2 ಅಥವಾ 4 ಎತ್ತುಗಳ ವಿನಿಮಯದೊಂದಿಗೆ ಮದುವೆಯಾಗುತ್ತಿತ್ತು. ಇವತ್ತು ಮದುವೆ ಎಂದರೆ ದುಬಾರಿ 20 ಲಕ್ಷ ರು. ವೆಚ್ಚವಾಗುತ್ತಿದ್ದು ಬಡ, ಮಧ್ಯಮ ಬಂಜಾರಾ ಕುಟುಂಬಗಳ ಪಾಲಿಗೆ ಹಲವು ಸವಾಲುಗಳನ್ನು ತಂದೊಡ್ಡುತ್ತಿದೆ. ಸಮಾಜದ ಬಡವರು ಎದುರಿಸುತ್ತಿರುವ ಇಂತಹ ಸಂಕಷ್ಟಗಳಿಗೆ ಪರಿಹಾರ ರೂಪದಲ್ಲಿ ಜಾಗೃತಿ ಅಭಿಯಾನ ಬಂಜಾರಾ ಕ್ರಾಂತಿದಳ ಹಮ್ಮಿಕೊಂಡಿದೆ.
ಬಂಜಾರಾ ಕ್ರಾಂತಿದಳ ರಾಜ್ಯ ಉಪಾಧ್ಯಕ್ಷ ಗೋವಿಂದರಾಜ್, ಜಿಲ್ಲಾಧ್ಯಕ್ಷ ಅಮರೇಶ ರಾಠೋಡ್ , ಧಾರ್ಮಿಕ ಮುಖಂಡರು ಹಾಗೂ ತಾಂಡಾದ ಕಾರಭಾರಿಗಳು, ಲಂಬಾಣಿ ತರುಣ ಸಂಘದ ಅಧ್ಯಕ್ಷ ಶಿವಾಜಿ ರಾಠೋಡ, ಸಮಾಜ ಮುಖಂಡ ಠಾಕೂರಸಿಂಗ್ ರಾಠೋಡ, ಲಂಬಾಣಿ ವಸತಿ ನಿಲಯ ಅಧ್ಯಕ್ಷ ಗಂಗಾರಾಮ ಪವಾರ, ಶಿವಾಜಿ ರಾಠೋಡ ಹೋದಲೂರ್ ಮುಂದಾಳತ್ವದಲ್ಲಿ ಸೀಡ್ಸ್ ಫಾರಂ ತಾಂಡಾ, ನೆಹರು ನಗರ ತಾಂಡಾ, ಹೆಬಳ್ಳಿ ತಾಂಡಾ, ಪಿ.ಎನ್.ತಾಂಡಾ, ಮೋರಿಸಾಬ್ ತಾಂಡಾಗಳಲ್ಲಿ ನಿರಂತರ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ.
ವರದಕ್ಷಿಣೆ ರಹಿತ ಸರಳ ವಿವಾಹ, ಶಿಕ್ಷಣ ಸಂಘಟನೆ ಆರ್ಥಿಕ ಸಮಾಜಿಕ ರಾಜಕೀಯವಾಗಿ ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಲಂಬಾಣಿ ಸಮಾಜ ಬಾಂಧವರು ಪರಸ್ಪರ ವಿಶ್ವಾಸ ಮತ್ತು ಸೌಹಾರ್ದ ಬದುಕಿಗೆ ಒಗ್ಗೂಡಬೇಕು. ಸಮುದಾಯದ ತಾಂಡಾಗಳಲ್ಲಿ ಇನ್ನು ಮುಂದೆ ವರದಕ್ಷಿಣೆ ಪಡೆಯುವುದು ಅಥವಾ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆಳಂದದಲ್ಲಿರುವ ಬಂಜಾರಾ ಭವನದಲ್ಲಿ ಅಖಿಲ ಭಾರತ ಬಂಜಾರಾ ಸೇವಾ ಸಂಘ ಹಾಗೂ ಬಂಜಾರಾ ಕ್ರಾಂತಿ ದಳ, ಸೇವಾಲಾಲ ಜಯಂತಿ ಸಮೀತಿ ಸಭೆಯಲ್ಲಿ ಈ ಕ್ರಾಂತಿಕಾರಿ ತೀರ್ಮಾನಕ್ಕೆ ಒಮ್ಮತ ವ್ಯಕ್ತವಾಗಿದೆ ಎಂದು ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ್ ಹೇಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಪದ್ಧತಿಯಿಂದಾಗಿ ಲಂಬಾಣಿ ತಾಂಡಾದ ಬಡ ಕುಟುಂಬಗಳು ಅನುಭವಿಸುತ್ತಿರುವ ಸಂಕಷ್ಟ ಹತ್ತಿರದಿಂದ ನೋಡುತ್ತಿದ್ದೇವೆ. ಜೊತೆಗೇ ಸಂಪ್ರದಾಯ, ಆಚರಣೆಗಳಲ್ಲಿ ಮುಖ್ಯವಾದವು ಮಾಯವಾಗಿ ನೈತಿಕ ಮೌಲ್ಯಗಳ ಕುಸಿತವಾಗುತ್ತಿರೋದನ್ನ ತಡೆಗಟ್ಟಲು ಈ ಜಾಗೃತಿ ಅಭಿಯಾನವನ್ನು ತೀವ್ರಗೊಳಿಸಲಾಗಿದೆ ಎಂದು ಬಂಜಾರಾ ಕ್ರಾಂತಿ ದಳದ ಆಳಂದ ತಾಲೂಕು ಘಟಕ ಅಧ್ಯಕ್ಷ ವೆಂಕಟೇಶ ರಾಠೋಡ್ ಹೇಳಿದ್ದಾರೆ.