ಬಿಜೆಪಿ ಬಾವುಟ ತೆರವುಗೊಳಿಸಿದ ಕಲಬುರಗಿ ಮಹಾನಗರ ಪಾಲಿಕೆ

By Kannadaprabha NewsFirst Published Jan 30, 2024, 11:00 PM IST
Highlights

ಬಿಜೆಪಿ ಸಮಾರಂಭ ಇನ್ನೂ ಮುಗಿಯೋ ಮೊದಲೇ ಪಾಲಿಕೆ ಏಕಾಕಿ ಎಚ್ಚೆತ್ತವರಂತೆ ರಸ್ತೆಗೆ ಬಿಗಿಯಲಾಗಿದ್ದ ಬಾವುಟಗಳನ್ನೆಲ್ಲ ತೆಗೆದು ಕಸದ ವಾಹನಗಳಲ್ಲಿ ಹಾಕುವ ಮೂಲಕ ಇಡೀ ನಗರವನ್ನ ಸ್ವಚ್ಚ ಮಾಡಿತು.

ಕಲಬುರಗಿ(ಜ.30):  ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸುತ್ತಿರುವ ಬಿವೈ ವಿಜಯೇಂದ್ರ ಅವರಿಗೆ ಭವ್ಯ ಸ್ವಾಗತ ಕೋರಲು ಹಾಗೂ ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಚಂದು ಪಾಟೀಲ ಮತ್ತು ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಪದಗ್ರಹಣ ಸಮಾರಂಭದ ಹಿನ್ನೆಲೆ ನಗರದ ಮುಖ್ಯ ರಸ್ತೆಗಳ ಬದಿ, ಡಿವೈಡರ್‌ಗಳಲ್ಲಿ ಕಬ್ಬಿಣದ ಗ್ರಿಲ್‌ಗಳಿಗೆ ಕಟ್ಟಲಾಗಿದ್ದ ಬಿಜೆಪಿ ಕಮಲ ಚಿಹ್ನೆಯ ಸಾವಿರಾರು ಬಾವುಟಗಳನ್ನು ಪಾಲಿಕೆ ಸಿಬ್ಬಂದಿ ಸಮಾರಂಭ ನಡೆಯುವ ಮುನ್ನವೇ ತೆರವು ಮಾಡಿದ್ದಾರೆ.

ಜ.29ರ ಸೋಮವಾರ ಸಂಜೆ ಎನ್‌ವಿ ಮೈದಾನದಲ್ಲಿ ಬಿಜೆಪಿ ಅಧ್ಯಕ್ಷರುಗಳ ಪದಗ್ರಹಣ ಸಮಾರಂಭ ಹಾಗೂ ರಾಜ್ಯಾಧ್ಯಕ್ಷರಾಗಿ ಚೊಚ್ಚಿಲ ಭೇಟಿ ನೀಡುತ್ತಿರುವ ಬಿವೈ ವಿಜಯೇಂದ್ರ ಅವರಿಗೆ ಅದ್ಧೂರಿ ಅಭಿನಂದನೆ ಸಮಾರಂಭ ಇತ್ತು.
ಈ ಸಮಾರಂಭದ ಹಿನ್ನೆಲೆ ಕೇಸರಿ ಪಡೆ ನಗರದ ಜಗತ್‌- ಪಟೇಲ್‌ ವೃತ್ತ, ಮೋಹನ್ ಲಾಡ್ಜ್, ರಾಮ ಮಂದಿರ ವೃತ್ತ, ಹೀರಾಪುರ ವೃತ್ತ, ಏರ್ಪೋರ್ಟ್‌ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಕಮಲದ ಚಿಹ್ನೆ ಇರುವ ಬಾವುಟ ಹಾಕಿ ಇಡೀ ನಗರ ಸಿಂಗರಿಸಿತ್ತು. ಆದರೆ ಬಿಜೆಪಿ ಸಮಾರಂಭ ಇನ್ನೂ ಮುಗಿಯೋ ಮೊದಲೇ ಪಾಲಿಕೆ ಏಕಾಕಿ ಎಚ್ಚೆತ್ತವರಂತೆ ರಸ್ತೆಗೆ ಬಿಗಿಯಲಾಗಿದ್ದ ಬಾವುಟಗಳನ್ನೆಲ್ಲ ತೆಗೆದು ಕಸದ ವಾಹನಗಳಲ್ಲಿ ಹಾಕುವ ಮೂಲಕ ಇಡೀ ನಗರವನ್ನ ಸ್ವಚ್ಚ ಮಾಡಿತು.

18 ವರ್ಷದೊಳಿಗಿನ ಹುಡುಗಿ ಮದುವೆಯಾಗಿದ್ದಕ್ಕೆ 20 ವರ್ಷ ಜೈಲು ಶಿಕ್ಷೆ

ಏತನ್ಮಧ್ಯೆ ಪಾಲಿಕೆ ಸಿಬ್ಬಂದಿಯ ಈ ಕೆಲಸ ಬಿಜೆಪಿಗರನ್ನು ಕೆರಳಿಸಿದೆ. ನಗರದಲ್ಲಿ ನಿತ್ಯ ಅನೇಕರು ನೂರಾರು ಬಾವುಟ ಕಟ್ಟಿದರು ಅವುಗಳನ್ನು ಹಾಗೇ ಬಿಡುವ ಪಾಲಿಕೆ ಈ ಬಾರಿ ಕಮಲ ಬಾವುಟ ಕಂಡಾಕ್ಷಣ ಕೋಪಗೊಂಡು ತೆರವಿಗೆ ಮುಂದಾಗಿದೆ. ಈತೆರವಿನ ಹಿಂದೆ ರಾಜಕೀಯವು ಇದೆ ಎಂದು ಲೇವಡಿ ಮಾಡಿದ್ದಾರೆ.

ಸ್ಥಳೀಯ ಶಾಸಕರು ಕಾಂಗ್ರೆಸ್ಸಿಗರು, ಜಿಲ್ಲಾ ಸಚಿವರು ಕಾಂಗ್ರೆಸ್‌ನವರು. ಹೀಗಾಗಿ ಬಿಜೆಪಿಯ ಯಾವುದೇ ಸಭೆ-ಸಮಾರಂಭ ತುಂಬ ಢಾಳವಾಗಿ ನಗರದಲ್ಲಿ ನಡೆಯಬಾರದು, ನಡೆದರೂ ಇಂತಹ ಬಾವುಟ, ಬ್ಯಾನರ್‌ ಮೂಲಕ ಜನಮನ ಸೆಳೆಯಬಾರದೆಂಬ ಉದ್ದೇಶವೇ ಇಂತಹ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

click me!