ಸಿಎಎ, ಸಮಾನ ನಾಗರಿಕ ಸಂಹಿತೆ ಜಾರಿ ಆಗೋದು ಗ್ಯಾರಂಟಿ: ಪ್ರಮೋದ ಮುತಾಲಿಕ್

By Kannadaprabha NewsFirst Published Jan 30, 2024, 8:59 PM IST
Highlights

2024ರ ಚುನಾವಣೆಯಲ್ಲಿ ಮೋದಿ ಅವರು ನೂರಕ್ಕೆ ನೂರು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತಾರೆ. ನಮ್ಮ ಉಳಿವಿಗಾಗಿ ಮೋದಿ ಅವಶ್ಯಕತೆ ಇದೆ ಅನ್ನೋದು ತಳಮಟ್ಟದ ಸಾಮಾನ್ಯ ನಾಗರಿಕರಿಗೂ ಗೊತ್ತಾಗಿದೆ ಎಂದು ಅಭಿಪ್ರಾಯಪಟ್ಟ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ 

ಬಾಗಲಕೋಟೆ(ಜ.30): ಸಿಎಎ ಜಾರಿ ಆಗಲೇಬೇಕು, ಆಗ ವಿರೋಧ ಉಂಟಾಗಿ ಆಗಿರಲಿಲ್ಲ. ಈಗ ಕೇಂದ್ರ ಸರ್ಕಾರ ಮಾಡೇ ಮಾಡುತ್ತದೆ. ಈಗ ಆಗದಿದ್ದರೂ ಮುಂದಿನ ಚುನಾವಣೆಗಾದರೂ ಜಾರಿ ಮಾಡೇ ಮಾಡುತ್ತಾರೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ಜೊತೆಗೆ ಸಮಾನ ನಾಗರಿಕ ಸಂಹಿತೆ, ಜನಸಂಖ್ಯೆ ನಿಯಂತ್ರಣ ಕಾನೂನು ಕೂಡ ಜಾರಿಯಾಗಿ, ಹಿಂದು ರಾಷ್ಟ್ರ ಘೋಷಣೆ ಕೂಡ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2024ರ ಚುನಾವಣೆಯಲ್ಲಿ ಮೋದಿ ಅವರು ನೂರಕ್ಕೆ ನೂರು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತಾರೆ. ನಮ್ಮ ಉಳಿವಿಗಾಗಿ ಮೋದಿ ಅವಶ್ಯಕತೆ ಇದೆ ಅನ್ನೋದು ತಳಮಟ್ಟದ ಸಾಮಾನ್ಯ ನಾಗರಿಕರಿಗೂ ಗೊತ್ತಾಗಿದೆ ಎಂದು ಅಭಿಪ್ರಾಯಪಟ್ಟರು.

ಬಾಗಲಕೋಟೆ: ಶಾಲಾ ವಾಹನ ಭೀಕರ ಅಪಘಾತ ನಾಲ್ವರು ಮಕ್ಕಳು ದುರ್ಮರಣ!

ಮಾಜಿ ಸಿಎಂ ಶೆಟ್ಟರ್ ಘರ್‌ ವಾಪ್ಸಿ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ್, ಜಗದೀಶ ಶೆಟ್ಟರ್ ಅವರದು ರಾಜಕೀಯ. ನಾನೇನು ಅದರ ಬಗ್ಗೆ ಕಮೆಂಟ್ ಮಾಡಲ್ಲ ಎಂದರು. ಮುತಾಲಿಕ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ನಾನು ರಾಜಕೀಯದ ಬಾಗಿಲು ಮುಚ್ಚಿದ್ದೇನೆ. ಸ್ಪರ್ಧೆ ಮಾಡಲ್ಲ. ಆದರೆ, ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಆರಂಭ ಮಾಡಿದ್ದೇವೆ. ಈಗಾಗಲೆ ಅಭಿಯಾನಕ್ಕೆ ಚಿಕ್ಕೋಡಿಯಲ್ಲಿ ಚಾಲನೆ ನೀಡಲಾಗಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಈಶ್ವರಪ್ಪನವರು ಬಂದಿದ್ದರು. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಸಲು ಯೋಜನೆ ಮಾಡಿದ್ದೇವೆ. ನಾವು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ. ದೇಶಕ್ಕೆ ಮೋದಿ ಬೇಕು ಅನ್ನೋದು ನಮ್ಮ ಆಶಯವಾಗಿದೆ ಎಂದರು.

ಮಂಡ್ಯ ಜಿಲ್ಲೆಯ ಕೆರಗೋಡ ಗ್ರಾಮದಲ್ಲಿ ಹನುಮ ಧ್ವಜ ಹಾಕಿದ್ದನ್ನು ಸರ್ಕಾರ ಬೇಜವಾಬ್ದಾರಿಯಿಂದ ತೆಗೆದು ಹಾಕಿದೆ ಎಂದು ಆರೋಪಿಸಿದ ಮುತಾಲಿಕ್, ಆ ವಿಚಾರವಾಗಿ ಯಾರೂ ದೂರು ಕೊಟ್ಟಿಲ್ಲ. ಅದರಿಂದ ಯಾರಿಗೂ ತೊಂದರೇನೂ ಆಗಿಲ್ಲ. ಅಲ್ಲೇನು ಗಲಭೆಯೂ ಆಗಿರಲಿಲ್ಲ, ಏಕಾಏಕಿ ತೆಗೆದುಹಾಕಿದ್ದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

ಕಾಂಗ್ರೆಸ್ ಹಿಂದು ವಿರೋಧಿಯೆಂದು ಮತ್ತೊಮ್ಮೆ ಸಾಬೀತು ಮಾಡಿದೆ. ಹನುಮ ಧ್ವಜ, ಕೇಸರಿ ಧ್ವಜ ಯಾವುದೋ ಪಕ್ಷ, ಜಾತಿ, ವ್ಯಕ್ತಿಯದ್ದಲ್ಲ, ಹನುಮ ಧ್ವಜ ಧರ್ಮ ಧ್ವಜ. ಸಾವಿರಾರು ವರ್ಷಗಳಿಂದ ಈ ನೆಲದ ಮೇಲೆ ಗುಡಿ-ಗುಂಡಾರಗಳ ಮೆಲೆ ಹಾರಾಡುತ್ತಿರುವ ಕೇಸರಿ ಧ್ವಜ. ಸರ್ಕಾರಕ್ಕೇನು ತೊಂದರೆ ಮಾಡಿತ್ತೋ ಗೊತ್ತಿಲ್ಲ. 108 ಅಡಿ ಎತ್ತರದ ಕಂಬದ ಮೇಲೆ ಧ್ವಜ ಹಾಕಬೇಕಾದರೆ ಅಲ್ಲಿಯ ಯುವಕರ ಉತ್ಸಾಹ, ಆನಂದ ಎಂತಹದ್ದು. ಏಕಾಏಕಿ ಅದನ್ನು ತೆಗೆದುಹಾಕಿ ರಾಷ್ಟ್ರಧ್ವಜ ಹಾಕುತ್ತೀರಿ ಅಂದ್ರೆ, ರಾಷ್ಟ್ರ ಧ್ವಜ ಹಾಕೋದಕ್ಕೂ ಒಂದು ನಿಯಮವಿದೆ. ಅದನ್ನು ಉಲ್ಲಂಘನೆ ಮಾಡಿದ್ದೀರಿ. ಅಲ್ಲಿ ಇನ್ನೊಮ್ಮೆ ಕೇಸರಿ ಧ್ವಜ ಹಾಕಬಾರದು ಅನ್ನೋ ಏಕೈಕ ದೃಷ್ಟಿಯಿಂದ ರಾಷ್ಟ್ರಧ್ವಜ ಹಾಕಿದ್ದೀರಿ ಎಂದು ದೂರಿದರು.

ರಾಷ್ಟ್ರಧ್ವಜ ಯಾವಾಗ ಹಾಕಬೇಕು ಅನ್ನೋ ಪ್ರಜ್ಞೆಯೂ ಇಲ್ವಾ ನಿಮಗೆ? ನಾಚಿಕೆ ಆಗಲ್ವಾ, ನೀವು ದೇಶ ದ್ರೋಹದ ಕೆಲಸ ಮಾಡಿದ್ದೀರಿ. ಇದು ಅಕ್ಷಮ್ಯ ಅಪರಾಧ. ಅದೇ ಸ್ಥಳದಲ್ಲಿ ಕೇಸರಿ ಧ್ವಜ ಹಾಕಬೇಕು ಎಂದು ನಾನು ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ. ಇಲ್ಲಾಂದ್ರೆ ಈಗಾಗಲೆ ರಾಜ್ಯಾದ್ಯಂತ ಹೋರಾಟ ಪ್ರಾರಂಭ ಮಾಡಿದ್ದಾರೆ. ನಾವು ಇನ್ನೂ ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜಗದೀಶ ಶೆಟ್ಟರ್‌ಗೆ ಯಾವುದೋ ಭಯ ಇರಬೇಕು: ಸಚಿವ ತಿಮ್ಮಾಪುರ

ಸಿಎಂ ಸಿದ್ದರಾಮಯ್ಯ ಜೈ ಶ್ರೀರಾಮ್ ಘೋಷಣೆ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ, ಕಾಂಗ್ರೆಸ್‌ನದ್ದು ಹಿಂದು ವಿರೋಧಿ ನೀತಿಯಾಗಿದೆ. ಇವರು ಹೋರಾಟದ ವೇಳೆ ರಾಮನ ಬೆಂಬಲಿಸಲಿಲ್ಲ. ಬಾಬರ್‌ನ ಬೆಂಬಲಿಸಿದರು. ರಾಮ ಕಾಲ್ಪನಿಕ ವ್ಯಕ್ತಿ, ರಾಮ ಅಸ್ತಿತ್ವದಲ್ಲಿಲ್ಲ. ರಾಮಾಯಣ ಇಲ್ಲ ಎಂದು ವಾದಿಸಿದರು. ಸಿದ್ದರಾಮಯ್ಯ ಅವರಿಗೆ ಈಗ ರಾಮನ ನೆನಪಾಗಿದೆ. ನಿಮ್ಮ ಬೂಟಾಟಿಕೆ, ನಾಟಕ, ಢೋಂಗಿತನ ಗೊತ್ತಾಗಿದೆ. ನೀವು ಎಷ್ಟೇ ಬಾರಿ ಜೈ ಶ್ರೀರಾಮ್ ಎಂದು ಹೇಳಿದರೂ ಯಾರೂ ಒಪ್ಪಲ್ಲ. ನೀವು ಹಿಂದುತ್ವ ಒಪ್ಪಲ್ಲ ಅಂದವರು ಗಾಂಧಿ ರಾಮ ಒಪ್ಪುತ್ತೀವಿ ಅಂತಿದ್ದೀರಿ. ಗಾಂಧಿ ರಾಮ, ಬಿಜೆಪಿ ರಾಮ, ಆರ್‌ಎಸ್ಎಸ್ ರಾಮ ಅಂತೇನಿಲ್ಲ. ರಾಮ ಇರೋದು ಒಬ್ಬನೆ, ಮರ್ಯಾದೆ ಪುರುಷೋತ್ತಮ ರಾಮ. ಗಾಂಧಿ ರಾಮನ ಒಪ್ಪುವುದಾದರೆ, ಗಾಂಧಿ ಸರಳತೆ, ಮದ್ಯಪಾನ ನಿಷೇಧ, ಗಾಂಧಿಯ ಮತಾಂತರ ನಿಷೇಧ ಆಚರಣೆ ಮಾಡಿ. ವೋಟಿಗಾಗಿ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದು, ಮಾತನಾಡಬಹುದು ಅನ್ನೋದು ಸರಿಯಲ್ಲ ಎಂದರು.

ಚಿತ್ರದುರ್ಗ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರಿಗೆ ಏಕವಚನದಲ್ಲಿ ಮಾತನಾಡುತ್ತೀರಿ. ನಿಮ್ಮನ್ನು ನೀವು ಏನಂತ ತಿಳಿದುಕೊಂಡಿದ್ದೀರಿ? ಸಿಎಂ ಸ್ಥಾನ ಅಂದ್ರೆ ಏನು ಬೇಕಾದರೂ ಮಾತನಾಡಬಹುದಾ? ನೀತಿ, ನಿಯಮ, ಮರ್ಯಾದೆ ಅನ್ನೋದು ಇಲ್ವಾ ನಿಮಗೆ? ಬುಡಕಟ್ಟು ಜನಾಂಗದ ಮಹಿಳೆಗೆ ಅವಮಾನ ಮಾಡಿದರೆ ನಿಮ್ಮ ನಿಯತ್ತು ಗೊತ್ತಾಗುತ್ತೆ. ನಿಮಗೆ ರಾಜಕೀಯ ಬೇಕೇ ವಿನಃ ಹಿಂದುಳಿದ ವರ್ಗಗಳ ಏಳ್ಗೆ ಎಳ್ಳಷ್ಟು ಬೇಕಾಗಿಲ್ಲ ಎಂದ ಅವರು, ವಿಷಾದ ಕೇಳೋದಲ್ಲ, ಕ್ಷಮೆ ಕೇಳಿ ಎಂದು ಮುತಾಲಿಕ್ ಆಗ್ರಹಿಸಿದರು.

click me!