Belagavi Assembly Session: ತೌಡು ಕುಟ್ಟುತ್ತಿದ್ದಾರೆ ಕಲಬುರಗಿ ಜನನಾಯಕರು..!

By Kannadaprabha News  |  First Published Dec 22, 2021, 11:26 AM IST

*  ಸಮಸ್ಯೆಗಳ ಬಗ್ಗೆ ಸದನ ಕಲಾಪದಲ್ಲಿ ಗಮನ ಸೆಳೆಯೋರಿಲ್ಲ
*  ಅತಿವೃಷ್ಟಿಗೆ ಬೆಳೆಹಾನಿ- ರೈತ ಕಂಗಾಲು
*  ಮೂಲ ಸೌಕರ್ಯ ಹರಿದು ಹೋಗಿ ಜನತೆ ಕಂಗಾಲಾದರೂ ಕೇಳೋರಿಲ್ಲ
 


ಶೇಷಮೂರ್ತಿ ಅವಧಾನಿ

ಕಲಬುರಗಿ(ಡಿ.22):  ಬೆಳಗಾವಿ(Belagavi) ಸುವರ್ಣ ಸೌಧದಲ್ಲಿ ಶುರುವಾಗಿರುವ ಚಳಿಗಾಲದ ಅಧಿವೇಶನದಲ್ಲಿ(Winter Session) ಜಿಲ್ಲೆಯ ಶಾಸಕರು ನಗರ, ಜಿಲ್ಲೆಯ ಸರ್ವಸ್ಪರ್ಶಿ- ಸರ್ವದರ್ಶಿ ಪ್ರಗತಿ ವಿಚಾರಗಳನ್ನು ಪ್ರಸ್ತಾಪಿಸಿ ಸರಕಾರದ ಮೈಚಳಿ ಬಿಡಿಸುವ ಬದಲು ತಮ್ಮ ಮೂಗಿನ ನೇರಕ್ಕೆ ‘ಚುಕ್ಕೆ ಗುರುತಿಲ್ಲದ’ ಪ್ರಶ್ನೋತ್ತರದಲ್ಲೇ ಮುಳುಗಿರೋದು ಜಿಲ್ಲೆಯ ಜನ ಬೇಸರಕ್ಕೆ ಕಾರಣವಾಗಿದೆ. ಕಲಬುರಗಿಯ(Kalaburagi) ಹದಗೆಟ್ಟರಸ್ತೆಗಳ ವಿಚಾರ, ತೊಗರಿ ರೈತರ(Farmers) ಸಮಸ್ಯೆ, ಪ್ರೋತ್ಸಾಹ ಧನ ಸಂಗತಿ, ಕಬ್ಬು, ಹತ್ತಿ ರೈತರ ಬವಣೆ, ಇದ್ದೂ ಇಲ್ಲದಂತಿರುವ ಕೆಕೆಆರ್‌ಡಿಬಿ(KKRDB) ಅಪಸವ್ಯಗಳು, ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ನೀರಾವರಿ ಯೋಜನೆಗಳು(Irrigation Projects) ಸೇರಿದಂತೆ ರೈತರು, ಶ್ರೀ ಸಾಮಾನ್ಯರ ಬದುಕನ್ನೇ ನರಕವಾಗಿಸುತ್ತಿರುವ ಸಂಗತಿಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶಗಳಿದ್ದರೂ ಶಾಸಕರು ಬಳಸಿಕೊಳ್ಳುತ್ತಿಲ್ಲ!

Tap to resize

Latest Videos

ತಮಗೆ ಅಗತ್ಯ ಇರಲಿ, ಬಿಡಲಿ ಮಾಹಿತಿ ಸಂಗ್ರಹಕ್ಕೋ, ಹೆಚ್ಚಿನ ಪ್ರಶ್ನೆ ಕೇಳಿ ದಾಖಲಿಸುವುದಕ್ಕೋಸ್ಕರವೋ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಪ್ರಶ್ನೆಗಳನ್ನು ಕೇಳುತ್ತ, ಅವುಗಳನ್ನೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ‘ನಾವೂ ಸದನ ಕಲಾಪದಲ್ಲಿ ಪಾಲ್ಗೊಂಡೆವು’ ಎಂದು ಸಮಾಧಾನ ಪಡುತ್ತಿರುವ ಜಿಲ್ಲೆಯ ಆಡಳಿತ- ವಿರೋಧ ಪಕ್ಷಗಳ ಶಾಸಕರ ಧೋರಣೆ ಪ್ರಗತಿಗೆ ಮಾರಕ ಎಂಬುದರಲ್ಲಿ ದೂಸ್ರಾ ಮಾತಿಲ್ಲ.

Covid Compensation: ಕೊರೋನಾಗೆ ಬಲಿಯಾದ ಕುಟುಂಬಕ್ಕೆ ಪರಿಹಾರ

ಶಾಸಕರಾದವರು ಇವೆಲ್ಲ ಮಾಡಬಹುದು:

ಶಾಸಕರಾದವರು ಸದನದಲ್ಲಿ ಪ್ರತಿದಿನದ ಮೊದಲ ಅವಧಿಯ 1 ಗಂಟೆ ಪ್ರಶ್ನೋತ್ತರ ಕಲಾಪದಲ್ಲಿ ಆಡಳಿತಕ್ಕೆ ಸಂಬಂಧಪಟ್ಟಂತಹ, ತಮ್ಮ ಕ್ಷೇತ್ರ ವ್ಯಾಪ್ತಿಯ ಯಾವುದೇ ವಿಷಯಗಳನ್ನು ಮಂಡಿಸುತ್ತ ಸರಕಾರದ ಗಮನ ಸೆಳೆಯಬಹುದು, ಚುಕ್ಕೆ ಗುರುತಿನ ಹಾಗೂ ಚುಕ್ಕೆ ಗುರುತಿಲ್ಲದಂತಹ ಎರಡು ಬಗೆಯಲ್ಲಿ ಪ್ರಶ್ನೆಗಳನ್ನೂ ಕೇಳಬಹುದು.

ಚುಕ್ಕೆ ಗುರುತಿನ (ಸ್ಟಾರ್ಡ್‌) ಪ್ರಶ್ನೆಗಳಿಗೆ ಸಂಬಂಧಿತ ಸಚಿವರೇ ಸದನ ಕಲಾಪದಲ್ಲಿ ಹಾಜರಿದ್ದು ಉತ್ತರ ನೀಡುತ್ತಾರೆ, ಶಾಸಕರಾದವರು ಆ ಸಮಯದಲ್ಲಿ ಹಾಜರಿದ್ದು ಸಭಾಧ್ಯಕ್ಷರ(Speaker) ಅನುಮತಿ ಮೇರೆಗೆ ಪೂರಕ ಪ್ರಶ್ನೆ್ನಗಳನ್ನೂ ಕೇಳಬಹುದು. ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಸಚಿವರು ಲಿಖಿತ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಇಂತಹ ಪ್ರಶ್ನೆಗಳಿಗೆ ಶಾಸಕರಾದವರು ಯಾವುದೇ ಪೂರಕ ಪ್ರಶ್ನೆ ಕೇಳಿ ಉತ್ತರ ಪಡೆಯುವಂತಹ ಅವಕಾಶಗಳೂ ಇಲ್ಲ.
ಬೆಳಗಾವಿಯಲ್ಲಿ ಸದನ ಆರಂಭವಾಗಿ 1 ವಾರ ಉರುಳಿದರೂ ಇಂದಿಗೂ ಸದನದಲ್ಲಿ ಜಿಲ್ಲೆಯ ಶಾಸಕರಿಂದ ಪ್ರಶ್ನೋತ್ತರ ಕಲಾಪದ ಸದ್ಬಳಕೆಯಾಗಿಲ್ಲ, ಇವರದ್ದು ಚುಕ್ಕೆ ಗುರುತು ಪ್ರಶ್ನೆಯಾಗಿ ಸದನದಲ್ಲಿ ಪ್ರತಿಧ್ವನಿಸಿದ್ದು ಅಷ್ಟಕ್ಕಷ್ಟೆ!

ಕಲಬುರಗಿ ಶಾಸಕರ ಪ್ರಶ್ನೆಗಳು ಹೀಗಿವೆ ನೋಡಿ!

ಕೆಕೆಆರ್‌ಡಿಬಿಗೆ ಕಳೆದ 5 ವರ್ಷದಲ್ಲಿ ಬಿಡುಗಡೆಯಾದ ಅನುದಾನವೆಷ್ಟು?(Grants) ವೆಚ್ಚ ಮಾಡಿದ್ದೆಷ್ಟು? ಪಾಲಿಕೆಗೆ ಬಿಡುಗಡೆಯಾದ ಅನುದಾನ/ ವೆಚ್ಚ ಎಷ್ಟು? ಜಿಲ್ಲೆಯಲ್ಲಿ ದಾಖಲೆ ಸಹಿತ, ರಹಿತ ಕಂದಾಯ ಗ್ರಾಮಗಳೆಷ್ಟು? ಜಿಲ್ಲೆಯಲ್ಲಿರುವ ಹಾಸ್ಟೆಲ್‌ಗಳೆಷ್ಟು? ಇದರಲ್ಲಿ ಸ್ವಂತ ಕಟ್ಟಡಗಳಿರುವ, ಬಾಡಿಗೆ ಕಟ್ಟದಲ್ಲಿರುವ ಹಾಸ್ಟೆಲ್‌ಗಳೆಷ್ಟು? ಯುವಜನ ಸಬಲೀಕರಣ- ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿನ ಯೋಜನೆಗಳ್ಯಾವುವು? ರೈತರಿಗೆ ಅಲ್ಪಾವಧಿ ಸಾಲ ನೀಡಲಾಗಿದೆಯೆ? ರಸ್ತೆಗಳು ಹದಗೆಟ್ಟಿದ್ದು ಸರಕಾರದ ಗಮನಕ್ಕೆ ಬಂದಿದೆಯೆ? ಎಂಬಿತ್ಯಾದಿ ಶಾಸಕರ ಚುಕ್ಕಿ ಗುರುತಿಲ್ಲದ ಪ್ರಶ್ನೆಗಳು ಲಿಖಿತ ಉತ್ತರಕ್ಕಷ್ಟೇ ಸೀಮಿತವಾಗಿವೆ!

ಜಿಲ್ಲೆ, ಪ್ರದೇಶವಾರು ಕಚೇರಿಗಳಿಂದಲೇ ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಪಡೆಯಬಹುದಾದರೂ ಇಂತಹ ಪ್ರಶ್ನೆ್ನಗಳನ್ನೇಕೆ ನಮ್ಮ ಶಾಸಕರು ಸದನ ಕಲಾಪದ ಹೊತ್ತಲ್ಲಿ ಹಾಕಿ ಲಿಖಿತ ಉತ್ತರ ಬಯಸುತ್ತಾರೋ? ಎಂಬುದು ಇಂದಿಗೂ ನಿಗೂಢ. ಪ್ರಶ್ನೆಗಳನ್ನು ಕೇಳಿದರೂ ಅದರಲ್ಲಿ ದಮ್‌ ಇರೋದೇ ಇಲ್ಲ, ’ಸರಕಾರದ ಗಮನಕ್ಕೆ ಬಂದಿದೆಯೆ?’ ಎಂದು ಶಾಸಕರು ಕೇಳಿದರೆ ಸಂಬಂಧಪಟ್ಟಸಚಿವರು ’ಗಮನಕ್ಕೆ ಬಂದಿದೆ’ ಎಂದಷ್ಟೆಉತ್ತರಿಸಿ ಕೈ ತೊಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ!

ಸಮಸ್ಯೆಯೊಂದು ಸರಕಾರದ ಗಮನ ಸೆಳೆದಾದ ಮೇಲೆ ಮುಂದೇನು? ಅದರ ಪರಿಹಾರೋಪಾಯಗಳೇನು? ಯಾವ ಕ್ರಮ, ಸಮಸ್ಯೆ ಹುಟ್ಟು ಹಾಕಿದವರಿಗೇನು ಶಿಕ್ಷೆ? ಇಂತಹ ಖಡಕ್‌, ಕಡ್ಡಿ ತುಂಡು ಮಾಡದಂತಹ ಪ್ರಶ್ನೋತ್ತರ ಇರೋದೇ ಇಲ್ಲ, ಅದೇನಿದ್ದರೂ ಹಾವೂ ಸಾಯಬಾರದು, ಕೋಲೂ ಮುರಿಯಬಾರದು... ಹಾಗೆ ನಮ್ಮ ನಾಯಕರ ಪ್ರಶ್ನೋತ್ತರಗಳು ಎಂದು ಜನ ನ (ರೇ) ಗಾಡುವಂತಾಗಿದೆ.

Karnataka Politics: ಬಿಜೆಪಿ ಸಂಸದ ಜಾಧವ್‌ಗೆ 2 ನಾಲಿಗೆ: ಪ್ರಿಯಾಂಕ್‌ ವಾಗ್ದಾಳಿ

ಜಿಲ್ಲೆಯಲ್ಲಿ ಅತಿವೃಷ್ಟಿಗೆ ರಸ್ತೆ ಸಂಪರ್ಕ ಹರಿದು ಹೋಗಿದ್ದು ಕೇಳೋರಿಲ್ಲದಂತಾಗಿದೆ, ತಾಲೂಕು, ಹೋಬಳಿ ಹಳ್ಳಿ ನಡುವಿನ ಸಂಪರ್ಕ ಕೆಟ್ಟು ಕೆರ ಹಿಡಿದರೂ ಕೇಳೋರಿಲ್ಲ. ಇದಕ್ಕೆಲ್ಲ ಹಣ ಯಾವಾಗ ಕೊಡ್ತೀರೆಂದು ನಮ್ಮವರು ಸದನದ ಗಮನ ಸೆಳೆಯಲೇ ಇಲ್ಲ, ಇಷ್ಟೇ ಅಲ್ಲ, ಜಿಲ್ಲೆಯ ರೈತರ ಬದುಕಾಗಿದ್ದ ತೊಗರಿ ಹಾಳಾಗಿದೆ, ಪರಿಹಾರ ಯಾವಾಗ ಕೊಡುತ್ತೀರೆಂದೂ ಕೇಳಲಿಲ್ಲ. 5 ಲಕ್ಷ ಹೆಕ್ಟರ್‌ ಬಿತ್ತನೆಯಾಗಿದ್ದ ತೊಗರಿಯಲ್ಲಿ 2 ಲಕ್ಷ ಮಳೆಯಿಂದ ಹಾಳಾಯ್ತು. ಅಳಿದುಳಿದ 3 ಲಕ್ಷ ಹೆಕ್ಟರ್‌ನಲ್ಲಿ ಗೊಡ್ಡು ರೋಗ ಬಾಧೆಗೆ ಶೇ. 50 ಷ್ಟು ಫಸಲು ಹಾಳಾಯ್ತು.

ಅಳಿದುಳಿದ ಫಸಲು ರಾಶಿ ಮಾಡಿದರೂ ಮಾರುಕಟ್ಟೆಯಲ್ಲಿ(Market) ಬೆಳೆ ಕುಸಿತದ ಭೀತಿ. ಪ್ರೋತ್ಸಾಹ ಧನ, ಬೆಂಬಲ ಬೆಲೆ, ಖರೀದಿ ವಿಚಾರಗಳನ್ನು ಪ್ರಸ್ತಾಪಿಸಿ ಸರಕಾರದ ಗಮನ ಸೆಳೆಯಲು ಈ ಚಳಿಗಾಲದ ಸದನ ಕಲಾಪ ಸೂಕ್ತವಾಗಿದ್ದರೂ ನಮ್ಮವರು ಒಬ್ಬರೂ ಚಕಾರ ಎತ್ತಲಿಲ್ಲ , ಟೆಕ್ಸಟೈಲ್‌ ಪಾರ್ಕ್(Textile Park), ತೊಗರಿ ಪಾರ್ಕ್, ರೇಲ್ವೆ ವಿಭಾಗೀಯ ಕಚೇರಿ, ಜವಳಿ ಪಾರ್ಕ್, ಸೆಂಟರ್‌ ಆಫ್‌ ಎಕ್ಸಲನ್ಸ್‌ ನಂತಹ ರಾಜ್ಯ, ಕೇಂದ್ರ ಪ್ರಾಯೋಜಿತ ಮಂಜೂರಾದ ಮಹತ್ವದ ಯೋಜನೆಗಳು ಕೈಬಿಟ್ಟು ಹೋದರೂ ಸರಕಾರದ ಗಮನ ಸೆಳೆಯೋರಿಲ್ಲವೆಂದು ಜನತೆ ಬೇಸರದಲ್ಲಿದ್ದಾರೆ.
 

click me!