ಕಲಬುರಗಿ: ನಡುರಸ್ತೆಯಲ್ಲಿ ಕುಡುಗೋಲಿನಿಂದ ಪತ್ನಿಯ ಕತ್ತು ಕತ್ತರಿಸಿ, ಹೆಣದ ಮೇಲೆ ಕಾರು ಹರಿಸಿ ಪತಿಯ ಅಟ್ಟಹಾಸ!

Published : Mar 26, 2026, 04:24 PM IST
Kalaburagi murder case

ಸಾರಾಂಶ

ಕಲಬುರಗಿಯ ಅಫಜಲಪುರ ತಾಲೂಕಿನ ಬಳಿ ಪತಿಯೊಬ್ಬ ತನ್ನ ಪತ್ನಿಯನ್ನು ಕುಡುಗೋಲಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಕಾರ್ ಹತ್ತಿಸಿ ವಿಕೃತಿ ಮೆರೆದಿದ್ದು, ಈ ಘಟನೆಗೆ ಸಾರ್ವಜನಿಕರು ಮೂಕಪ್ರೇಕ್ಷಕರಾಗಿದ್ದರು. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಕಲಬುರಗಿಯಲ್ಲಿ ಇಂದು ಹಾಡುಹಗಲೇ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಅಫಜಲಪುರ ತಾಲೂಕಿನ ಬಳುರಗಿ ಬಳಿ ರಕ್ಕಸ ಪತಿಯೊಬ್ಬ ತನ್ನ ಪತ್ನಿಯನ್ನೇ ಅತ್ಯಂತ ಕ್ರೂರವಾಗಿ ದಾರಿ ಮಧ್ಯೆ ಕೊಲೆ ಮಾಡಿದ್ದಾನೆ. ಕುರಿ ಕತ್ತರಿಸುವಂತೆ ಪತ್ನಿಯ ಕತ್ತು ಸೀಳಿದ್ದಲ್ಲದೇ, ಆಕೆಯ ಮೇಲೆ ಇನೋವಾ ಕಾರ್ ಹತ್ತಿಸಿ ವಿಕೃತಿ ಮೆರೆದಿದ್ದಾನೆ. ರಸ್ತೆಯಲ್ಲಿ ಹೋಗುವವರೆಲ್ಲಾ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರೂ, ಆ ರಾಕ್ಷಸ ಮಾತ್ರ ತನ್ನ ಅಟ್ಟಹಾಸ ಮೆರೆದಿದ್ದಾನೆ. ನೋಡುಗರು ಮೊಬೈಲ್ ನಲ್ಲಿ ಈ ಕೃತ್ಯ ಚಿತ್ರಿಕರಿಸಿಕೊಂಡಿದ್ದಾರೆಯೇ ಹೊರತು ಯಾರೊಬ್ಬರೂ ಮಹಿಳೆಯ ರಕ್ಷಣೆಗೆ ಧಾವಿಸಿಲ್ಲ.

ಕುಡುಗೋಲಿನಿಂದ ಕತ್ತು ಕತ್ತರಿಸಿದ ಗಂಡ!

ಪತ್ನಿಯ ತಲೆಗೂದಲು ಹಿಡಿದು ಕುಡುಗೋಲಿನಿಂದ ಆಕೆಯ ಕತ್ತನ್ನು ಕತ್ತರಿಸುತ್ತಿದ್ದಾನೆ. ನೆಲಕ್ಕೆ ಬಿದ್ದು ಆತನಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿರುವ ಮಹಿಳೆ, ಹತ್ತಾರು ಜನರ ಎದುರುಗಡೆಯೇ ಪ್ರಾಣ ಬಿಟ್ಟಿದ್ದಾಳೆ. ಈ ಭೀಭತ್ಸ ಘಟನೆ ನಡೆದಿದ್ದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳುರಗಿ ಗ್ರಾಮದ ಬಳಿ ಮಾರ್ಚ್ 26ರ ಮಧ್ಯಾಹ್ನ ಸುಮಾರು 11:30 ರ ಸುಮಾರಿಗೆ ನಡೆದಿದೆ. ಇಷ್ಟಕ್ಕೂ ಸುಮ್ಮನಾಗದ ಈ ಕಿರಾತಕ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಮೇಲೆ ತನ್ನ ಕಾರ್ ಹತ್ತಿಸಿ ವಿಕೃತಿ ಮೆರೆದಿದ್ದಾನೆ. ಈ ಘಟನೆ ಹತ್ತಾರು ಜನರ ಸಮ್ಮುಖದಲ್ಲಿಯೇ ನಡೆದಿದ್ದು, ಹಲವರು ಮೊಬೈಲ್ ನಲ್ಲಿ ಈ ದೃಷ್ಯ ಸೆರೆ ಹಿಡಿದಿದ್ದಾರೆ. ಆದರೆ ಯಾರೊಬ್ಬರೂ ಮಹಿಳೆಯ ನೆರವಿಗೆ ಧಾವಿಸದಿರುವುದು ಮಾತ್ರ ದುರ್ದೈವ.

ಕಾರಲ್ಲಿ ಸಂಬಂಧಿಕರಿದ್ದರೂ ಸುಮ್ಮನೆ ಕುಳಿತಿದ್ದರು!

ನೆರೆಯ ಮಹಾರಾಷ್ಟ್ರದ ಬಾರಾಮತಿ ಮೂಲದ ಶೈಲಾ (28 ವರ್ಷ) ಎನ್ನುವ ಮಹಿಳೆಯೇ ಕೊಲೆಯಾದ ದುರ್ದೈವಿ. ಈತನ ಪತಿ ಅಕ್ಷಯ್ ಜಾಧವ್ ಎಂಬಾತನೇ ತನ್ನ ಪತ್ನಿಯನ್ನು ಅಕ್ಷರಶಃ ಕುರಿ ಕೊಯ್ದಂತೆ ಕೊಯ್ದ ಕಿರಾತಕ ಹಂತಕ. ಮಹಾರಾಷ್ಟ್ರದ ಬಾರಾಮತಿಯಿಂದ ಇವರು ಕಲಬುರಗಿಯ ಗಾಣಗಾಪೂರಕ್ಕೆ ಬಂದಿದ್ದರು. ದತ್ತನ ದರ್ಶನಕ್ಕೆ ಹೋಗೋಣ ಅಂತ ಕರೆತಂದಿದ್ದನಂತೆ, ಈ ವೇಳೆ ಅಫಜಲಪುರ ಹೊರವಲಯದ ಬಳುರಗಿ ಬಳಿ ಏಕಾಏಕಿ ಕಾರು ನಿಲ್ಲಿಸಿದ ಪತಿ ಅಕ್ಷಯ ಜಾಧವ್, ಪತ್ನಿಯ ಕೂದಲನ್ನು ಹಿಡಿದು ನೆಲಕ್ಕೆ ಬೀಳಿಸಿದ್ದಾನೆ. ಬಳಿಕ ತನ್ನ ಬಳಿಯಿದ್ದ ಕುಡುಗೋಲಿನಿಂದ ಆಕೆಯ ಕತ್ತನ್ನು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 

ಆ ವಾಹನದಲ್ಲಿ ಆತನ ತಂದೆ ತಾಯಿ ಸಂಬಂಧಿಕರು ಸೇರಿ ಐವರು ಇದ್ದರೆನ್ನಲಾಗಿದೆ. ಅವರು ಮೌನವಾಗಿ ಕೂರುವ ಮೂಲಕ ಸೊಸೆಯ ಕೊಲೆಗೆ ಪರೋಕ್ಷವಾಗಿ ಸಹಕರಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿ ಅಕ್ಷಯ ಜಾಧವನನ್ನು ಅಫಜಲಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸದ್ಯ ಕೊಲೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪತ್ನಿಯನ್ನೇ ಕೊಂದು ವಿಕೃತಿ ಮೆರೆದ ಪತಿ ಈಗ ಪೊಲೀಸ್ ಅತಿಥಿಯಾಗಿದ್ದಾನೆ. ಆದರೆ ಹಾಡುಹಗಲೇ ನಡೆದ ಈ ಕೊಲೆ ಕಂಡು ಕಲಬುರ್ಗಿ ಜನತೆ ಅಕ್ಷರಶಃ ಸ್ತಬ್ಧರಾಗಿದ್ದಾರೆ. ಸ್ಥಳಿಯರು ಒಂದಿಷ್ಟು ದೈರ್ಯ ತಗೊಂಡು ಆತನಿಗೆ ತಡೆದಿದ್ದರೆ ಪಾಪ ಒಂದು ಮಹಿಳೆಯ ಜೀವವಾದ್ರೂ ಉಳಿಯುತ್ತಿತ್ತು.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ ಭೀಕರ ಜೋಡಿ ಕೊಲೆ: ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನಿಗೆ ಚಾಕು ಇರಿದು ಕೊಂದ ಬಾಲಕ!
ಸೀಟು ಹಿಡಿಯುವ ರಭಸದಲ್ಲಿ ಮಗುವಿನ ಕಾಲೇ ಹೋಯ್ತು: ಅಮ್ಮನ ಕೈನಿಂದ ಕೆಳಗೆ ಬಿದ್ದ ಮಗುವಿನ ಮೇಲೆ ಹರಿದ ಸರ್ಕಾರಿ ಬಸ್