
ಬೆಂಗಳೂರು (ಸೆ.07): ಬೆಂಗಳೂರಿನ ನೈಸ್ (NICE) ರಸ್ತೆಯ ಟೋಲ್ ಪ್ಲಾಜಾಗಳಲ್ಲಿ ಸಾರ್ವಜನಿಕರು ಮತ್ತು ಸಿಬ್ಬಂದಿ ನಡುವಿನ ವಾಗ್ವಾದಗಳು ಹೊಸದೇನಲ್ಲ. ಆದರೆ ಇಲ್ಲೊಬ್ಬಳು ಯುವತಿ, ನೈಸ್ ರಸ್ತೆ ನಿಯಮಗಳು, ಒಪ್ಪಂದಗಳು ಹಾಗೂ ರಾಜಕಾರಣಿಗಳಿಗೆ ನೀಡಲಾಗುವ ವಿಐಪಿ ಸವಲತ್ತುಗಳನ್ನು ಉಲ್ಲೇಖಿಸಿ ಟೋಲ್ ಸಿಬ್ಬಂದಿಗೆ ನೇರಾನೇರವಾಗಿ ಬೆಂಡೆತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಬೈಕ್‌ನಲ್ಲಿ ಬಂದಿದ್ದ ಯುವಕ ಮತ್ತು ಯುವತಿಯನ್ನು ಟೋಲ್ ಶುಲ್ಕಕ್ಕಾಗಿ ಸಿಬ್ಬಂದಿ ತಡೆದಾಗ ಈ ಘಟನೆ ನಡೆದಿದೆ. ಸಿಬ್ಬಂದಿಯ ಪ್ರಶ್ನೆಗೆ ಅಂಜದೇ, ಕಾನೂನು ಮತ್ತು ಒಪ್ಪಂದದ ಅಂಶಗಳನ್ನು ಮುಂದಿಟ್ಟು ಆಕೆ ಕೇಳಿದ ಒಂದೊಂದು ಪ್ರಶ್ನೆಗಳಿಗೂ ಉತ್ತರಿಸಲಾಗದೆ ನೈಸ್ ಸಿಬ್ಬಂದಿ ಮೂಕವಿಸ್ಮಿತರಾಗಿ ನಿಂತ ಪ್ರಸಂಗ ನಡೆದಿದೆ.
ಟೋಲ್ ವಸೂಲಿ ಬಗ್ಗೆ ಸಿಬ್ಬಂದಿಯನ್ನು ನೇರವಾಗಿ ಪ್ರಶ್ನಿಸಿದ ಯುವತಿ, 'ಇದು ನ್ಯಾಷನಲ್ ಹೈವೇ ಅಲ್ಲ, ನೈಸ್ ರೋಡ್ ಒಂದು ಪ್ರೈವೇಟ್ ರೋಡ್. 30 ವರ್ಷಗಳ ಅಗ್ರಿಮೆಂಟ್ ಪ್ರಕಾರ 1250 ಕಿಲೋಮೀಟರ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಮೇಲಷ್ಟೇ ನೀವು ಟೋಲ್ ಸಂಗ್ರಹಿಸಬೇಕು. ರಸ್ತೆಯನ್ನೇ ಪೂರ್ತಿ ಮಾಡದೇ ಟೋಲ್ ವಸೂಲಿ ಮಾಡಲು ಹೇಗೆ ಸಾಧ್ಯ? ನಿಮ್ಮ ಓನರ್ ಎಲ್ಲಿದ್ದಾರೆ ಕರೆಯಿರಿ' ಎಂದು ತರಾಟೆಗೆ ತೆಗೆದುಕೊಂಡಿದ್ದಾಳೆ.
ಇದಕ್ಕೆ ಉತ್ತರಿಸಿದ ಸಿಬ್ಬಂದಿ, 'ನಾವು ಕೇವಲ ಕೆಲಸಗಾರರು, ನೀವೇನಿದ್ದರೂ ಸರ್ಕಾರವನ್ನು ಕೇಳಿ' ಎಂದಾಗ, ಯುವತಿ ಮತ್ತಷ್ಟು ಕೆರಳಿ, 'ಹಾಗಾದರೆ ನೀವು ದುಡ್ಡನ್ನೂ ಸರ್ಕಾರದ ಹತ್ತಿರವೇ ಹೋಗಿ ಕೇಳಿ, ಜನಸಾಮಾನ್ಯರಿಂದ ಏಕೆ ವಸೂಲಿ ಮಾಡುತ್ತಿದ್ದೀರಿ?' ಎಂದು ಖಡಕ್ ತಿರುಗೇಟು ನೀಡಿದ್ದಾಳೆ.
ವಿಐಪಿ ಸಂಸ್ಕೃತಿ ಮತ್ತು ಸಾಮಾನ್ಯರ ಮೇಲಿನ ದಬ್ಬಾಳಿಕೆಯನ್ನು ಕಟುವಾಗಿ ಟೀಕಿಸಿದ ಯುವತಿ, 'ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬಂದಾಗ ಗೇಟ್ ತೆಗೆದು ಯಾಕೆ ಬಿಟ್ರಿ? ಅವರ ಹತ್ತಿರ ಯಾಕೆ ಹಣ ಕಲೆಕ್ಟ್ ಮಾಡಲಿಲ್ಲ? ಸರಿ, ಅವರು ಕೇಂದ್ರ ಸಚಿವರು ಅಂತ ಅವರ ಕಾರು ಮಾತ್ರ ಬಿಟ್ಟಿದ್ದರೆ ನಾವು ಒಪ್ಪಿಕೊಳ್ಳಬಹುದಿತ್ತು. ಆದರೆ, ಅವರು ಬರುತ್ತಾರೆ ಎಂಬ ಕಾರಣಕ್ಕೆ ನೀವು ಇಡೀ ದಿನ ಟೋಲ್ ಗೇಟ್ ಓಪನ್ ಇಟ್ಟುಕೊಂಡು ಕುಳಿತಿದ್ದಿರಲ್ಲವೇ? ಅಂದು ಇಡೀ ದಿನ ಯಾರ ಬಳಿಯೂ ಟೋಲ್ ಕಲೆಕ್ಟ್ ಮಾಡಿಲ್ಲ. ಜನಸಾಮಾನ್ಯರು ಬಂದರೆ ಮಾತ್ರ ನೀವು ರೌಡಿಸಂ ಮಾಡಿ ಹಣ ಕೇಳ್ತೀರಾ?' ಎಂದು ಸಿಬ್ಬಂದಿಯ ಜುಟ್ಟು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾಳೆ.
ಯುವತಿಯ ಈ ದಿಟ್ಟ ಮತ್ತು ಕಾನೂನುಬದ್ಧ ಪ್ರಶ್ನೆಗಳಿಗೆ ಟೋಲ್ ಸಿಬ್ಬಂದಿ ಬಳಿ ಯಾವುದೇ ಉತ್ತರವಿರಲಿಲ್ಲ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, 'ಜನಸಾಮಾನ್ಯರ ಪರವಾಗಿ ಪ್ರತಿಯೊಬ್ಬರೂ ಹೀಗೆಯೇ ಪ್ರಶ್ನಿಸಬೇಕು' ಎಂದು ನೆಟ್ಟಿಗರು ಯುವತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.