ಕಲಬುರಗಿ: ಶರಣಬಸವೇಶ್ವರ ರಥೋತ್ಸವ ವೇಳೆ ದುರಂತ: ಭಕ್ತನ ತೊಡೆ ಮೇಲೆ ಹರಿದ ಚಕ್ರ, ಸ್ಥಳದಲ್ಲೇ ದುರ್ಮರಣ

Published : Apr 08, 2026, 10:55 AM IST
Kalaburagi Devotee dies after hit by chariot

ಸಾರಾಂಶ

ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಡೆದ ಶ್ರೀ ಶರಣಬಸವೇಶ್ವರ ರಥೋತ್ಸವದ ವೇಳೆ ದುರಂತವೊಂದು ಸಂಭವಿಸಿದೆ. ರಥ ಎಳೆಯುವಾಗ ನೂಕುನುಗ್ಗಲಿನಲ್ಲಿ ಆಯತಪ್ಪಿ ಬಿದ್ದ ಭಕ್ತ ವಿನೋದ ರೆಡ್ಡಿ (49) ಅವರ ಮೇಲೆ ರಥದ ಚಕ್ರ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಲಬುರಗಿ (ಏ.8): ರಥದ ಚಕ್ರದಡಿ ಸಿಲುಕಿ ಭಕ್ತನೋರ್ವ ಭೀಕರವಾಗಿ ದುರ್ಮರಣಕ್ಕೀಡಾದ ಘಟನೆ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಡೆದಿದೆ.

ಹಾಗರ ಗುಂಡಗಿಯಲ್ಲಿ ಪ್ರತಿ ವರ್ಷದಂತೆ ಶ್ರೀ ಶರಣಬಸವೇಶ್ವರ ರಥೋತ್ಸವ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಹಬ್ಬದ ಸಂಭ್ರಮ ಮನೆ ಮಾಡಿದ್ದ ಗ್ರಾಮ ಕ್ಷಣಾರ್ಧದಲ್ಲಿ ಸ್ಮಶಾನ ಮೌನವಾಗಿ ಮಾರ್ಪಟ್ಟಿದೆ. ಹಾಗರಗುಂಡಗಿ ಗ್ರಾಮದ ನಿವಾಸಿಯಾಗಿರುವ ವಿನೋದ ರೆಡ್ಡಿ(49) ಶ್ರೀ ಶರಣಬಸವೇಶ್ವರ ದೇವರ ರಥದ ಚಕ್ರದಡಿ ಸಿಲುಕಿ ಮೃತಪಟ್ಟಿರುವ ದುರ್ದೈವಿ.

ನಿನ್ನೆ ಸಂಜೆ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ದೇವರ ರಥೋತ್ಸವವು ಅತ್ಯಂತ ಅದ್ದೂರಿಯಾಗಿ ನಡೆಯುತ್ತಿತ್ತು. ಸಾವಿರಾರು ಭಕ್ತರು ಆಗಮಿಸಿದ್ದರು. ಜಯಘೋಷ ಹಾಕುತ್ತಾ ರಥವನ್ನು ಎಳೆಯುತ್ತಿದ್ದಾಗ ನಡೆದುಹೋಯ್ತು ದುರಂತ.

ರಥ ಎಳೆಯುವ ಸಂದರ್ಭದಲ್ಲಿ ಭಕ್ತರ ನೂಕುನುಗ್ಗಲಿನಲ್ಲಿ ಮೃತ ವಿನೋದ ರೆಡ್ಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದುರದೃಷ್ಟವಶಾತ್ ಚಲಿಸುತ್ತಿದ್ದ ರಥದ ಬೃಹತ್ ಚಕ್ರವು ನೇರವಾಗಿ ವಿನೋದ ರೆಡ್ಡಿ ತೊಡೆಯ ಮೇಲಿಂದ ಹರಿದು ಹೋಗಿದೆ.

ಚಕ್ರದಡಿ ಸಿಲುಕಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ವಿನೋದ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಣ್ಣೆದುರೇ ನಡೆದ ಈ ಭೀಕರ ಅಪಘಾತದಿಂದಾಗಿ ಜಾತ್ರೆಗೆ ಬಂದಿದ್ದ ಭಕ್ತರು ದಿಕ್ಕೆಟ್ಟು ಓಡಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.

ಈ ಕುರಿತು ಮಾಹಿತಿ ಪಡೆದ *ಫರಹತಾಬಾದ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

PREV
Read more Articles on
click me!

Recommended Stories

ಲೋಕಾಯುಕ್ತ ದಾಳಿ: ಬಳ್ಳಾರಿ ಅಧಿಕಾರಿ ಬಳಿ 44 ಎಕರೆ, 14 ಸೈಟ್‌, 3 ಮನೆ!
ನನ್ನ ಅಣ್ಣ ಸಿಎಂ ಆಗಬೇಕೆಂಬ ಆಸೆ ಇದೆ, ಈಗಲೇ ಆಗ್ತಾನೆ ಅಂತಾ ನಾನು ಹೇಳಿಲ್ಲ: ಡಿಕೆ ಸುರೇಶ್