ಕಲಬುರಗಿ ಉದ್ಯಮಿ ಮನೆಮುಂದೆ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್!

Published : Dec 20, 2025, 12:29 PM IST
Kalaburagi bjp worker Jyoti patil death

ಸಾರಾಂಶ

ಕಲಬುರಗಿಯ ನಂದಿಕೂರದಲ್ಲಿ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್ ಬೆಂಕಿ ಹಚ್ಚಿಕೊಂಡು ಸಾವು. ರಿಯಲ್ ಎಸ್ಟೇಟ್ ಉದ್ಯಮಿ ಮಲ್ಲಿನಾಥ್ ಬಿರಾದಾರ್ ಮನೆ ಬಳಿ ಘಟನೆ ನಡೆದಿದೆ.

ಕಲಬುರಗಿ (ಡಿ.20): ಜಿಲ್ಲೆಯ ನಂದಿಕೂರ ಗ್ರಾಮದ ಬಳಿ ಬಿಜೆಪಿ ಕಾರ್ಯಕರ್ತೆಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ವರದಿಯಾಗಿದೆ. ಮೃತರನ್ನು ಕಲಬುರಗಿಯ ಬ್ರಹ್ಮಪೂರ ಬಡಾವಣೆಯ ನಿವಾಸಿ ಜ್ಯೋತಿ ಪಾಟೀಲ್ (35) ಎಂದು ಗುರುತಿಸಲಾಗಿದೆ. ಆದರೆ, ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಇದು ಆತ್ಮ*ಹತ್ಯೆಯಲ್ಲ ಕೊಲೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯ ಹಿನ್ನೆಲೆ

ಮಾಹಿತಿಯ ಪ್ರಕಾರ, ನಿನ್ನೆ ರಾತ್ರಿ ಜ್ಯೋತಿ ಪಾಟೀಲ್ ಅವರು ನಂದಿಕೂರ ಗ್ರಾಮದ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಮಲ್ಲಿನಾಥ್ ಬಿರಾದಾರ್ ಮನೆಗೆ ತೆರಳಿದ್ದರು. ಮಲ್ಲಿನಾಥ್ ಬಿರಾದಾರ್ ಕೂಡ ಬಿಜೆಪಿ ಕಾರ್ಯಕರ್ತನಾಗಿದ್ದು, ಆತ ಮನೆಯಲ್ಲಿ ಇಲ್ಲದ ಸಮಯದಲ್ಲಿ ಜ್ಯೋತಿ ಮನೆಗೆ ಹೋಗಿ ಬಾಗಿಲು ಬಡಿದಿದ್ದಾರೆ. ಮಲ್ಲಿನಾಥ್ ಪತ್ನಿ ಬಾಗಿಲು ತೆರೆದ ತಕ್ಷಣ, ಜ್ಯೋತಿ ಪಾಟೀಲ್ ಮೊದಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ.

ಕುಟುಂಬದ ಆಕ್ರೋಶ ಮತ್ತು ಶಂಕೆ

ಮೃತ ಜ್ಯೋತಿ ಪಾಟೀಲ್ ಅವರಿಗೆ ವಿವಾಹಿತೆಯಾಗಿದ್ದು, ನಾಲ್ಕು ಮಕ್ಕಳ ತಾಯಿಯಾಗಿದ್ದಾರೆ. ಇತ್ತ ಮಲ್ಲಿನಾಥ್ ಬಿರಾದಾರ್ ಕೂಡ ವಿವಾಹಿತನಾಗಿದ್ದು, ಹೆಂಡತಿ ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಜ್ಯೋತಿ ಪಾಟೀಲ್ ಅವರು ರಾತ್ರಿ ವೇಳೆ ಮಲ್ಲಿನಾಥ್ ಮನೆಗೆ ಏಕೆ ಹೋಗಿದ್ದರು ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ. ಈ ಸಾವಿನ ಹಿಂದೆ ಅಕ್ರಮ ಸಂಬಂಧದ ಶಂಕೆ ವ್ಯಕ್ತವಾಗುತ್ತಿದ್ದು, ಇದು ವ್ಯವಸ್ಥಿತ ಕೊಲೆ ಎಂದು ಜ್ಯೋತಿಯ ಕುಟುಂಬಸ್ಥರು ದೂರಿದ್ದಾರೆ.

ಪೊಲೀಸ್ ತನಿಖೆ

ಈ ಘಟನೆ ಸಂಭವಿಸಿದ ವಿಷಯ ತಿಳಿಯುತ್ತಿದ್ದಂತೆ ಫರಹತಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಲ್ಲಿನಾಥ್ ಬಿರಾದಾರ್ ಮತ್ತು ಆತನ ಕುಟುಂಬದವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ರಾಜಕೀಯ ಕಾರ್ಯಕರ್ತೆಯ ನಿಗೂಢ ಸಾವು ಈಗ ಕಲಬುರಗಿ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

PREV
Read more Articles on
click me!

Recommended Stories

ಚಿಕ್ಕೋಡಿ ಶಿಕ್ಷಕಿಯ ಕಣ್ಣೀರು: ಎಸ್‌ಡಿಎಂಸಿ ಅಕ್ರಮ ತಡೆದಿದ್ದಕ್ಕೆ ಅಮಾನತು ಶಿಕ್ಷೆ? ನ್ಯಾಯಕ್ಕಾಗಿ ಕಣ್ಣೀರಿಟ್ಟ ಟೀಚರ್!
ರೌಡಿಯೊಂದಿಗೆ ಬರ್ತಡೇ ಪಾರ್ಟಿ ಮಾಡಿಕೊಂಡ ಪಿಎಸ್‌ಐ ನಾಗರಾಜ್; ಸಸ್ಪೆಂಡ್ ನೋಟೀಸ್ ಕಳಿಸಿದ ಕಮೀಷನರ್!