ಕಲಬುರಗಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ.
ಬೆಂಗಳೂರು [ಆ.24]: ಕಲಬುರಗಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಆಗಸ್ಟ್ 24ರಂದು ರಾಜ್ಯ ಸರ್ಕಾರ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ಹಸ್ತಾಂತರಿಸಲಿದೆ.
ರಾಜ್ಯ ಸರ್ಕಾರದಿಂದ ಸುಮಾರು 181 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರ ನಡೆಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ವಿಧಾನ ಸೌಧದಲ್ಲಿ ರಾಜ್ಯ ಸರ್ಕಾರ ಸಹಿ ಹಾಕಲಿದೆ.
2007ರಲ್ಲಿ ಕಲಬುರಗಿ ವಿಮಾನ ನಿಲ್ದಾಣ ಅಭಿವೃದ್ಧಿ ಲಿಮಿಟೆಡ್ (ಜಿಎಡಿಎಲ್- ಮೈತಾಸ್ ಇನ್ಫ್ರಾ ಲಿಮಿಟೆಡ್, ಎನ್‌ಸಿಸಿ ಇನ್ಫ್ರಾ ಹೋಲ್ಡಿಂಗ್ಸ್, ವಿಐಎ ಇಂಡಿಯಾ ಒಕ್ಕೂಟ) 25 ಕೋಟಿ ರು. ಬಂಡವಾಳ ಹೂಡಿತ್ತು.
ಆದರೆ, ಕಾರಣಾಂತರಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಬಳಿಕ 742 ಎಕರೆ ಭೂ ಸ್ವಾಧೀನ ಸಂಬಂಧ ವೆಚ್ಚವನ್ನು ಹೊರತುಪಡಿಸಿ ರಾಜ್ಯ ಸರ್ಕಾರ 181 ಕೋಟಿ ರು.ಗಳ ವೆಚ್ಚದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿತ್ತು. ಇದೀಗ ವಿಮಾನ ನಿಲ್ದಾಣವು ವಾಣಿಜ್ಯ ಸಂಚಾರಕ್ಕೆ ಸಿದ್ಧವಾಗಿದ್ದು, ನಾಗರಿಕ ವಿಮಾನಯಾನ ಸಂಸ್ಥೆಗ ಹಸ್ತಾಂತರಿಸಲಾಗುತ್ತಿದೆ.