500 ಜಂಕ್ಷನ್‌ಗಳಲ್ಲಿ ಗಾಳಿ ಶುದ್ಧೀಕರಣ ಯಂತ್ರ

By Web Desk  |  First Published Aug 24, 2019, 8:09 AM IST

ಬೆಂಗಳೂರಿನಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯ ಪ್ರಮಾಣ ತಡೆಯಲು ಬಿಬಿಎಂಪಿ ವ್ಯಾಪ್ತಿಯ 500 ಜಂಕ್ಷನ್‌ಗಳಲ್ಲಿ ಗಾಳಿ ಶುದ್ಧೀಕರಿಸುವ ಯಂತ್ರಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. 


ಬೆಂಗಳೂರು [ಆ.24]:  ಬೆಂಗಳೂರಿನಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯ ಪ್ರಮಾಣ ತಡೆಯಲು ಬಿಬಿಎಂಪಿ ವ್ಯಾಪ್ತಿಯ 500 ಜಂಕ್ಷನ್‌ಗಳಲ್ಲಿ ಗಾಳಿ ಶುದ್ಧೀಕರಿಸುವ ಯಂತ್ರಗಳನ್ನು ಎಟೆಕ್‌ ಟ್ರಾನ್‌ ಸಂಸ್ಥೆ ಅಳವಡಿಸಲು ಮುಂದೆ ಬಂದಿದೆ.

ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೇಯರ್‌ ಗಂಗಾಂಬಿಕೆ, ನಗರದಲ್ಲಿ ವಾಹನಗಳ ಸಂಖ್ಯೆ 80 ಲಕ್ಷ ಮೀರಿದೆ. ಅವುಗಳಿಂದ ಬರುವ ಹೊಗೆಯಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಪರಿಣಾಮ ಇಲ್ಲಿನ ಜನರಿಗೆ ಶುದ್ಧ ಗಾಳಿಯ ಕೊರತೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾಳಿ ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲು ಎಟೆಕ್‌ ಟ್ರಾನ್‌ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಹಡ್ಸನ್‌ ವೃತ್ತದಲ್ಲಿ ಪ್ರಾಯೋಗಿಕವಾಗಿ ಒಂದು ಯಂತ್ರ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಇನ್ನೂ 500 ಜಂಕ್ಷನ್‌ಗಳಲ್ಲಿ ಗಾಳಿ ಶುದ್ಧೀಕರಿಸುವ ಯಂತ್ರಗಳನ್ನು ಅಳವಡಿಸಲಾಗುವುದು. ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅನುದಾನದ ಅಡಿಯಲ್ಲಿ ಎಟೆಕ್‌ ಟ್ರಾನ್‌ ಸಂಸ್ಥೆಯೇ ಯಂತ್ರಗಳನ್ನು ಅಳವಡಿಸಲಿದೆ. ಎ ಟೆಕ್‌ ಟ್ರೋನ್‌ ಸಂಸ್ಥೆ ಸಂಚಾರಿ ಪೊಲೀಸರ ಅಭಿಪ್ರಾಯ ಪಡೆದು, ಹೆಚ್ಚು ವಾಹನ ದಟ್ಟಣೆ ಯಿರುವ ಜಂಕ್ಷನ್‌ಗಳಲ್ಲಿ ಮೊದಲು ಯಂತ್ರಗಳನ್ನು ಅಳವಡಿಸಲಿದೆ. ಬಿಬಿಎಂಪಿ ಯಾವುದೇ ಹಣ ನೀಡುವುದಿಲ್ಲ ಎಂದು ಹೇಳಿದರು.

Tap to resize

Latest Videos

ನಗರದಲ್ಲಿ ಪ್ರತಿ ವರ್ಷ ಶೇ.10 ಪ್ರಮಾಣದಲ್ಲಿ ವಾಹನಗಳು ಹೆಚ್ಚಾಗುತ್ತಿದ್ದು, ಅದರಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ಪರಿಸರಕ್ಕೆ ಮಾರಕವಾಗಿ ಹೊಗೆ ಉಗುಳುವ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬಿಬಿಎಂಪಿಯಿಂದ ಪತ್ರ ಬರೆಯಲಾಗಿದೆ ಎಂದು ಇದೆ ವೇಳೆ ಮೇಯರ್‌ ತಿಳಿಸಿದರು.

ಎಟೆಕ್‌ ಟ್ರಾನ್‌ ಸಂಸ್ಥೆಯ ಸಂಸ್ಥಾಪಕ ರಾಜೇಶ್‌ ಕೃಷ್ಣ ಮಾತನಾಡಿ, ಮೊದಲಿಗೆ ನಗರದ ಹೆಚ್ಚು ವಾಯು ಮಾಲಿನ್ಯ ಕಂಡುರುವ 200 ಸ್ಥಳಗಳಲ್ಲಿ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಆರಂಭದಲ್ಲಿ ಮಿನರ್ವ ವೃತ್ತ, ಸೌತ್‌ಎಂಡ್‌, ಸಿಲ್ಕ್ ಬೋರ್ಡ್‌, ಬೆಳ್ಳಂದೂರು, ಕೆ.ಆರ್‌. ಪುರ, ಎಚ್‌ಎಸ್‌ಆರ್‌ ಲೇಔಟ್‌ ಸೇರಿ ಹೊರವರ್ತುಲ ರಸ್ತೆಯ ಅನೇಕ ಕಡೆಗಳಲ್ಲಿ ಅಳವಡಿಸಲಾಗುತ್ತದೆ. ನಂತರ ಮಾಲಿನ್ಯದ ಪ್ರಯಾಣ ಅಳೆದು ಮಿಕ್ಕ ಕಡೆಗಳಲ್ಲಿ ಅಳವಡಿಸಲಾಗುತ್ತದೆ ಎಂದು ವಿವರಿಸಿದರು.

ಪ್ರಸ್ತುತ ಹಡ್ಸನ್‌ ಸರ್ಕಲ್‌ನಲ್ಲಿ ಹೆಚ್ಚು ಮಾಲಿನ್ಯ ಕಂಡುಬಂದಿದೆ. ಸೀಸ, ಕಬ್ಬಿಣ, ಕೊಬಾಲ್ಟ್‌ನಂತಹ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುವ ಅಂಶಗಳು ಹೆಚ್ಚಾಗಿ ಗಾಳಿಯಲ್ಲಿ ಕಂಡುಬಂದಿವೆ. ಆ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಆ ವೃತ್ತದಲ್ಲಿ ಗಾಳಿ ಶುದ್ಧೀಕರಣ ಘಟಕ ಅಳವಡಿಸಲಾಗಿದೆ ಎಂದರು.

ವಾಯುಮಾಲಿನ್ಯದ ಪರಿಣಾಮ ಪಾಶ್ರ್ವವಾಯು, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್‌, ದೃಷ್ಟಿದೋಷ, ಅಸ್ತಮಾದಂತಹ ಕಾಯಿಲೆಗಳು ಬರಲಿವೆ. ದಕ್ಷಿಣ ಏಷ್ಯಾದಲ್ಲಿ ವಾಯುಮಾಲಿನ್ಯದಲ್ಲಿ ಮೃತಪಡುವವರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ಶೇ. 50 ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ. ವಿಶ್ವದ 10 ಮಾಲಿನ್ಯಕಾರಕ ನಗರಗಳ ಪೈಕಿ ಭಾರತದ 7 ನಗರಗಳು ಸ್ಥಾನಪಡೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಾಯು ಶುದ್ಧೀಕರಣ ಘಟಕಗಳು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್, ವಿಶೇಷ ಆಯುಕ್ತ ರಂದೀಪ್‌ ಇದ್ದರು.

click me!