
ಕೃಷಿಯಲ್ಲಿ ಲಾಭ ಗಳಿಸಬೇಕು ಎಂದರೆ ಯಾವಾಗಲೂ ಹೆಚ್ಚು ಖರ್ಚು ಮಾಡಿ ಹೆಚ್ಚು ಬೆಳೆ ಬೆಳೆಯಬೇಕು ಎಂದೇನಿಲ್ಲ. ಸರಿಯಾದ ಬೆಳೆ ಆಯ್ಕೆ, ಕೃಷಿ ಮಾಡುವ ವಿಧಾನ ಮತ್ತು ನೀರಿನ ನಿರ್ವಹಣೆ ಗೊತ್ತಿದ್ದರೆ ಕಡಿಮೆ ಕಷ್ಟದಲ್ಲೂ ಉತ್ತಮ ಆದಾಯ ಗಳಿಸಬಹುದು. ಇದಕ್ಕೆ ಸಾಕ್ಷಿಯಾಗಿದ್ದಾರೆ ಈ ರೈತರು. ಬರೋಬ್ಬರಿ 18 ಎಕರೆ ಜಮೀನಿನಲ್ಲಿ 1,800 ನಿಂಬೆ ಗಿಡಗಳನ್ನು ಬೆಳೆಸುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ವಿಶೇಷವಾಗಿ ಜಿಐ (GI) ಟ್ಯಾಗ್ ಪಡೆದಿರುವ ಇಂಡಿ ಕಾಗ್ಜಿ ನಿಂಬೆ ಕೃಷಿ ಇವರ ಪ್ರಮುಖ ಆದಾಯದ ಮೂಲವಾಗಿದೆ.
ರೈತರು ತಮ್ಮ ಜಮೀನಿನಲ್ಲಿ ಸುಮಾರು 18 ಎಕರೆ ಪ್ರದೇಶದಲ್ಲಿ ನಿಂಬೆ ಕೃಷಿ ಮಾಡುತ್ತಿದ್ದಾರೆ. ಇಲ್ಲಿ ಒಟ್ಟು 1,800 ನಿಂಬೆ ಗಿಡಗಳಿವೆ. ಸುಮಾರು ಒಂಬತ್ತು ವರ್ಷಗಳ ಹಿಂದೆ ನೆಟ್ಟಿರುವ ಗಿಡಗಳು ಈಗ ಉತ್ತಮ ಪ್ರಮಾಣದಲ್ಲಿ ಫಸಲು ನೀಡುತ್ತಿವೆ. ಒಂದು ನಿಂಬೆ ಗಿಡವು ಸುಮಾರು 40ರಿಂದ 45 ವರ್ಷಗಳವರೆಗೆ ಫಸಲು ನೀಡುವ ಸಾಮರ್ಥ್ಯ ಹೊಂದಿದೆ ಎಂದು ರೈತರು ವಿವರಿಸಿದ್ದಾರೆ. ಇಂಡಿ ಕಾಗ್ಜಿ ನಿಂಬೆಗೆ ಭೌಗೋಳಿಕ ಗುರುತಿನ (GI Tag) ಮಾನ್ಯತೆಯೂ ದೊರೆತಿದೆ. ಈ ನಿಂಬೆ ಬೆಳೆಗೆ ಸುಮಾರು 40 ವರ್ಷಗಳ ಇತಿಹಾಸವಿದೆ ಎಂದು ರೈತರು ತಿಳಿಸಿದ್ದಾರೆ. ನಿಂಬೆ ಗಿಡದಲ್ಲಿ ಹೂವು, ಸಣ್ಣ ಮಿಡಿ, ನಂತರ ದೊಡ್ಡ ಕಾಯಿ ಹೀಗೆ ನಿರಂತರವಾಗಿ ಫಸಲು ಬಿಡುವ ಪ್ರಕ್ರಿಯೆ ನಡೆಯುತ್ತದೆ. ಹೀಗಾಗಿ ವರ್ಷವಿಡೀ ವಿವಿಧ ಹಂತಗಳಲ್ಲಿ ಫಸಲು ಸಿಗುತ್ತದೆ.
ಹೊಸದಾಗಿ ನಿಂಬೆ ಕೃಷಿ ಆರಂಭಿಸುವವರು ಗಿಡದಿಂದ ಗಿಡಕ್ಕೆ 20 ಅಡಿ ಹಾಗೂ ಸಾಲಿನಿಂದ ಸಾಲಿಗೆ 20 ಅಡಿ ಅಂತರದಲ್ಲಿ ಸಸಿಗಳನ್ನು ನೆಡಬೇಕು ಎಂದು ರೈತರು ಸಲಹೆ ನೀಡಿದ್ದಾರೆ. ಗಿಡಗಳು ಬೆಳೆದಂತೆ ಅವುಗಳ ಕೊಂಬೆಗಳು ನೆಲದ ಕಡೆಗೆ ಬಾಗುತ್ತವೆ. ಹೀಗೆ ಬಾಗಿದ ಕೊಂಬೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಬಿಡುತ್ತದೆ. ಹೀಗಾಗಿ ಗಿಡವನ್ನು ಅನಗತ್ಯವಾಗಿ ಕತ್ತರಿಸುವುದರಿಂದ ಫಸಲಿನ ಪ್ರಮಾಣ ಕಡಿಮೆಯಾಗಬಹುದು ಎಂಬುದು ಅವರ ಅನುಭವ. ವಿಶೇಷವಾಗಿ ಗಿಡದ ಬುಡದ ಪ್ರಮುಖ ಕೊಂಬೆಗಳನ್ನು ಕತ್ತರಿಸಬಾರದು. ಗಿಡದ ಸ್ವಾಭಾವಿಕ ಬೆಳವಣಿಗೆಗೆ ಅವಕಾಶ ನೀಡಬೇಕು. ಹೆಚ್ಚುವರಿ ಕೊಂಬೆಗಳನ್ನು ಕತ್ತರಿಸುವಾಗಲೂ ಸರಿಯಾದ ತಿಳಿವಳಿಕೆ ಇರಬೇಕು ಎಂದು ಅವರು ಹೇಳಿದ್ದಾರೆ.
ಈ ತೋಟದ ಮತ್ತೊಂದು ವಿಶೇಷವೆಂದರೆ ನಿಂಬೆ ಕಾಯಿ ಕೀಳುವ ವಿಧಾನ. ಗಿಡಗಳು ದೊಡ್ಡದಾಗಿ ಬೆಳೆದರೂ ಕಾಯಿ ಕೀಳಲು ಹೆಚ್ಚು ಕಷ್ಟವಾಗುವುದಿಲ್ಲ. ಉದ್ದವಾದ ಕೋಲಿನ ಸಹಾಯದಿಂದ ಕೊಂಬೆಯನ್ನು ನಿಧಾನವಾಗಿ ಎತ್ತಿದರೆ ಕಾಯಿಗಳು ಕೈಗೆಟುಕುವಂತೆ ಬರುತ್ತವೆ.
ನಿಂಬೆ ಕೃಷಿಯಲ್ಲಿ ನೀರಿನ ನಿರ್ವಹಣೆ ಅತ್ಯಂತ ಮುಖ್ಯ ಎಂದು ರೈತರು ಹೇಳಿದ್ದಾರೆ. ಜಮೀನಿನಲ್ಲಿ ಪೈಪ್ಲೈನ್ ಮತ್ತು ಡ್ರಿಪ್ ವ್ಯವಸ್ಥೆ ಅಳವಡಿಸಿದ್ದಾರೆ. ಸುಮಾರು 64 ಗಿಡಗಳಿಗೆ ಒಟ್ಟಿಗೆ ನೀರು ಹರಿಸುವ ರೀತಿಯಲ್ಲಿ ವಾಲ್ವ್ಗಳನ್ನು ವ್ಯವಸ್ಥೆ ಮಾಡಿದ್ದಾರೆ. ಒಂದು ಗಂಟೆಯಿಂದ ಒಂದೂವರೆ ಗಂಟೆಯವರೆಗೆ ನೀರು ಹರಿಸುವ ಮೂಲಕ ಗಿಡಗಳಿಗೆ ಅಗತ್ಯವಿರುವ ನೀರನ್ನು ಒದಗಿಸುತ್ತಾರೆ. ವಿದ್ಯುತ್ ಪೂರೈಕೆ ದಿನಕ್ಕೆ ನಾಲ್ಕೈದು ಗಂಟೆಗಳಷ್ಟೇ ಸಿಗುವುದರಿಂದ ಲಭ್ಯವಿರುವ ಸಮಯದಲ್ಲೇ ನೀರಾವರಿ ನಿರ್ವಹಣೆ ಮಾಡುತ್ತಾರೆ.
ನಿಂಬೆ ಕೃಷಿಯನ್ನು ವಿವಿಧ ಬಗೆಯ ಮಣ್ಣಿನಲ್ಲಿ ಮಾಡಬಹುದು ಎಂದು ರೈತರು ತಿಳಿಸಿದ್ದಾರೆ. ಕಪ್ಪು ಮಣ್ಣು, ಕೆಂಪು ಮಣ್ಣು ಸೇರಿದಂತೆ ಹಲವು ಮಣ್ಣಿನ ವಿಧಗಳಲ್ಲಿ ಬೆಳೆಯಬಹುದು. ಆದರೆ ಜಮೀನಿನಲ್ಲಿ ನೀರು ನಿಲ್ಲಬಾರದು. ಉಪ್ಪು ಅಥವಾ ಕ್ಷಾರೀಯ ಗುಣ ಹೆಚ್ಚಿರುವ ನೀರು ಮತ್ತು ಮಣ್ಣು ನಿಂಬೆ ಗಿಡದ ಬೆಳವಣಿಗೆಗೆ ಸೂಕ್ತವಲ್ಲ ಎಂದು ಅವರು ವಿವರಿಸಿದ್ದಾರೆ.
ನಿಂಬೆ ಕೃಷಿಯ ಪ್ರಮುಖ ಅನುಕೂಲವೆಂದರೆ ಪ್ರತಿದಿನವೂ ಫಸಲು ಕಟಾವು ಮಾಡಿ ಮಾರಾಟ ಮಾಡುವ ಅವಕಾಶವಿರುವುದು. ರೈತರು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ನಿಂಬೆ ಹಣ್ಣುಗಳನ್ನು ಕಿತ್ತು ಮಾರಾಟ ಮಾಡುತ್ತಾರೆ. ಇಂದು ಕಿತ್ತ ನಿಂಬೆಯನ್ನು ಮರುದಿನ ಮಾರುಕಟ್ಟೆಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಹಿಂದೆ ಮಹಾರಾಷ್ಟ್ರದ ಸೋಲಾಪುರ ಮಾರುಕಟ್ಟೆಗೆ ನಿಂಬೆ ಕಳುಹಿಸುತ್ತಿದ್ದ ರೈತರು, ಈಗ ಬೆಂಗಳೂರಿನ ಮಾರುಕಟ್ಟೆಗೂ ಕಳುಹಿಸುತ್ತಿದ್ದಾರೆ.
ನಿಂಬೆ ಕೃಷಿಯ ಜೊತೆಗೆ ರೈತರು ಸುಮಾರು ಏಳು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆ ಕೂಡ ಬೆಳೆದಿದ್ದಾರೆ. ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ದೊಡ್ಡ ಮಟ್ಟದ ಆದಾಯ ಗಳಿಸಬಹುದು. ಆದರೆ ಪ್ರತಿವರ್ಷವೂ ಒಂದೇ ರೀತಿಯ ಬೆಲೆ ಸಿಗುವುದಿಲ್ಲ ಎಂಬುದು ರೈತರ ಅನುಭವ.ಒಂದು ಸಂದರ್ಭದಲ್ಲಿ 30 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದಾಗ ಕ್ವಿಂಟಾಲ್ಗೆ 5,000 ರೂಪಾಯಿ ಬೆಲೆ ಸಿಕ್ಕಿತ್ತು. ಆಗ ಒಟ್ಟು 76 ಲಕ್ಷ ರೂಪಾಯಿ ಆದಾಯ ಬಂದಿತ್ತು ಎಂದು ರೈತರು ನೆನಪಿಸಿಕೊಂಡಿದ್ದಾರೆ.