ಕಲ್ಲೊಡ್ಡುಹಳ್ಳ-ಹೊಸಕೆರೆ ಯೋಜನೆ ವಿರೋಧಿಸಿ ಸೋಮವಾರ ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣ ವಿರೋಧಿ ಸಮಿತಿ ಮತ್ತು ಬರೂರು ಗ್ರಾಪಂ ವ್ಯಾಪ್ತಿ ಜನರು ಬೃಹತ್ ಪ್ರತಿಭಟನೆ ನಡೆಸಿದರು. ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲು ಹಿಡಿದು ಕೇಳಿ ಕೊಳ್ಳುತ್ತೇನೆ. ನಮ್ಮ ತಾಲೂಕಿನ ಜನರನ್ನು ಮುಳುಗಿಸುವ ಯೋಜನೆ ಕೈಬಿಡಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಶಿವಮೊಗ್ಗ(ಆ.27): ಸಾಗರ ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿ ಕುಂದೂರು ಬಳಿ ನಿರ್ಮಿಸಲು ಉದ್ದೇಶಿಸಿರುವ ಕಲ್ಲೊಡ್ಡುಹಳ್ಳ-ಹೊಸಕೆರೆ ಯೋಜನೆ ವಿರೋಧಿಸಿ ಸೋಮವಾರ ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣ ವಿರೋಧಿ ಸಮಿತಿ ಮತ್ತು ಬರೂರು ಗ್ರಾಪಂ ವ್ಯಾಪ್ತಿ ಜನರು ಬೃಹತ್ ಪ್ರತಿಭಟನೆ ನಡೆಸಿದರು.
ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗದಲ್ಲಿಯೂ ಶುರುವಾಯ್ತು ಉದ್ಯೋಗ ಕಡಿತ
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಇದು ಸಾಗರ ತಾಲೂಕಿನ ಜನರು ಸಮುದ್ರಕ್ಕೆ ಹಾರುವ ಮತ್ತೊಂದು ಯೋಜನೆಯಾಗಿದೆ. ಈಗಾಗಲೆ ತಾಲೂಕಿನಲ್ಲಿ ಮಡೆನೂರು, ಲಿಂಗನಮಕ್ಕಿ, ಅಂಬ್ಲಿಗೊಳ ಜಲಾಶಯ ನಿರ್ಮಾಣದಿಂದ ಮೂರು ಬಾರಿ ಮುಳುಗಡೆ ನಡೆದಿದೆ. ಈಗ ಮತ್ತೊಂದು ಮುಳುಗಡೆಗೆ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.
ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲು ಹಿಡಿದು ಕೇಳಿ ಕೊಳ್ಳುತ್ತೇನೆ. ನಮ್ಮ ತಾಲೂಕಿನ ಜನರನ್ನು ಮುಳುಗಿಸುವ ಯೋಜನೆ ಕೈಬಿಡಿ. ಯೋಜನೆ ಕಾರ್ಯಗತವಾದರೆ ನಮಗೆ ಸಾವೆ ಗತಿ. ಜನರಿಗೆ ಯೋಜನೆಯಿಂದ ಪುನರ್ ವಸತಿ ಸಿಗುತ್ತದೆ ಎನ್ನುವ ವಿಶ್ವಾಸ ಇಲ್ಲ. ಸ್ಥಳೀಯ ಶಾಸಕ ಹಾಲಪ್ಪನವರು ಯಡಿಯೂರಪ್ಪ ಅವರಿಗೆ ಹತ್ತಿರದಲ್ಲಿದ್ದು ಯೋಜನೆ ಕೈಬಿಡುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸಿಎಂ ಬಳಿಗೆ ನಿಯೋಗ:
ಶಾಸಕ ಎಚ್.ಹಾಲಪ್ಪ ಮಾತನಾಡಿ, ಈ ಹೋರಾಟದಲ್ಲಿ ನಿಮ್ಮ ಜೊತೆ ನಾನು ಇರುತ್ತೇನೆ. ಮುಳುಗಡೆ ಎನ್ನುವುದು ಶಾಪವಿದ್ದಂತೆ. ನಾವೂ ಸಹ ಮುಳುಗಡೆಯಾಗಿ ಬಂದವರು. ಯಾವುದೇ ಕಾರಣಕ್ಕೂ ಮತ್ತೊಂದು ಮುಳುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಭರವಸೆ ನೀಡಿದರು.
ಮುಂದಿನ 15ದಿನದೊಳಗೆ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಲು ನಾನು ಭೂಮಿಕೆ ಸಿದ್ಧಪಡಿಸುತ್ತೇನೆ. ಕಳೆದ ಐವತ್ತು ವರ್ಷಗಳಿಂದ ಕಲ್ಲೊಡ್ಡು ಹಳ್ಳ ಯೋಜನೆ ಪ್ರಸ್ತಾಪವಾಗುತ್ತಿದೆ. ಹಿಂದಿನ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಿ ತಪ್ಪು ಮಾಡಿದೆ. ಈಗಿನ ಸರ್ಕಾರ ಅದೇ ತಪ್ಪನ್ನು ಮುಂದುವರಿಸಿಕೊಂಡು ಬಂದಿದೆ. ಮುಖ್ಯಮಂತ್ರಿ ಅವರಿಗೆ ಯೋಜನೆಯಿಂದ ಆಗುವ ಅನಾಹುತದ ಬಗ್ಗೆ ಮನವರಿಕೆ ಮಾಡಿಕೊಡಲು ಎಲ್ಲರೂ ಸೇರಿ ಪ್ರಯತ್ನ ನಡೆಸೋಣ ಎಂದು ಹೇಳಿದರು.
ಬೃಹತ್ ಪ್ರತಿಭಟನೆ ಎಚ್ಚರಿಕೆ:
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ನಾನು ಎರಡು ಬಾರಿ ಶಾಸಕನಾಗಿದ್ದಾಗ ಕಲ್ಲೊಡ್ಡು ಹಳ್ಳ ಹೊಸಕೆರೆ ಯೋಜನೆ ಅನುಷ್ಠಾನಕ್ಕೆ ತರದಂತೆ ತಡೆದಿದ್ದೇನೆ. ಈಗಿನ ಶಾಸಕರು ಯಡಿಯೂರಪ್ಪನವರಿಗೆ ಹತ್ತಿರ ಇರುವುದರಿಂದ ಯೋಜನೆ ಶಾಶ್ವತವಾಗಿ ಕೈಬಿಡುವಂತೆ ಮಾಡುವುದು ಅವರ ಹೊಣೆ ಎಂದು ಹೇಳಿದರು.
ಶಿವಮೊಗ್ಗ: ಜಿಪಂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲೂ ಬಿರುಕು
ಉದ್ದೇಶಿತ ಯೋಜನೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಮುಳುಗಡೆ ಸಂತ್ರಸ್ತ ಕುಟುಂಬಗಳಿವೆ. ಹಿಂದೆ ಮುಳುಗಡೆಯಾದವರಿಗೆ ಇನ್ನೂ ಸೌಲಭ್ಯ ನೀಡಿಲ್ಲ. ಒಂದೊಮ್ಮೆ ಜನವಿರೋಧದ ನಡುವೆಯೂ ಯೋಜನೆಯ ಗುದ್ದಲಿಪೂಜೆಗೆ ಮುಂದಾದರೆ ಸುಮಾರು 25ಸಾವಿರ ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಗುಂಡು ಹೊಡೆದರೆ ನಾನು ಮೊದಲು ಎದೆ ಕೊಡಲು ಸಿದ್ಧ. ರಕ್ತವನ್ನಾದರೂ ಕೊಡುತ್ತೇವೆ. ಯಾವುದೆ ಕಾರಣಕ್ಕೂ ಜನರನ್ನು ಮುಳುಗಿಸುವ ಈ ಯೋಜನೆ ಕೈಗೆತ್ತಿಕೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮತ್ತೊಂದು ತಾಲೂಕು ಮುಳುಗಲು ಬಿಡುವುದಿಲ್ಲ:
ಸಾಹಿತಿ ಡಾ.ನಾ.ಡಿಸೋಜ ಮಾತನಾಡಿ, ಶರಾವತಿ ನದಿಗೆ ಹಿರೇಭಾಸ್ಕರ, ಲಿಂಗನಮಕ್ಕಿ ಆಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಆಗಿರುವ ಅನಾಹುತ ನಮ್ಮ ಕಣ್ಣ ಮುಂದೆ ಇದೆ. ಮತ್ತೊಂದು ಮುಳುಗಡೆಗೆ ತಾಲೂಕಿನ ಯಾರೂ ಅವಕಾಶ ಕೊಡುವುದಿಲ್ಲ. ಕಲ್ಲೊಡ್ಡು ಹಳ್ಳ ಯೋಜನೆ ಜಾರಿಗೆ ಬಂದರೆ ಸ್ಥಳೀಯರು ನಿರ್ವಸಿತಗರಾಗುತ್ತಾರೆ. ಸಂತ್ರಸ್ತರಿಗೆ ಪುನರ್ ವಸತಿ ಸೌಲಭ್ಯ ಸಿಗುವುದಿಲ್ಲ. ಸ್ಥಳೀಯ ಶಾಸಕರು ಆಗುವ ಅನಾಹುತ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸಮಿತಿ ಗೌರವಾಧ್ಯಕ್ಷ ವಿರೇಶ್ ಬರೂರು ಇನ್ನಿತರರು ಮಾತನಾಡಿದರು. ಸಮಿತಿ ಅಧ್ಯಕ್ಷ ಡಾಕಪ್ಪ, ಸಂಚಾಲಕರಾದ ಪರಶುರಾಮಪ್ಪ ಎಂ.ಸಿ., ಕೆ.ವಿ.ಸುರೇಶ್, ತಿಮ್ಮಪ್ಪ, ಪ್ರಮುಖರಾದ ವಾಮದೇವ ಗೌಡ, ಅನಿತಾ ಕುಮಾರಿ, ಕಲಗೋಡು ರತ್ನಾಕರ, ಬಿ.ಆರ್.ಜಯಂತ್, ಪ್ರಸನ್ನ ಕೆರೆಕೈ, ಟಿ.ಡಿ.ಮೇಘರಾಜ್, ಅಖಿಲೇಶ್ ಚಿಪ್ಪಳಿ, ಎಚ್.ಬಿ.ರಾಘವೇಂದ್ರ, ಕುಂಟುಗೋಡು ಸೀತಾರಾಮ್, ರಾಜಶೇಖರ ಗಾಳಿಪುರ ಹಾಜರಿದ್ದರು.