ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡ ನಂತರ ಇದೀಗ ಜಿಲ್ಲಾ ಪಂಚಾಯತು ಮಟ್ಟದಲ್ಲಿಯೂ ಜೆಡಿಎಸ್- ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ರಾಜ್ಯದಲ್ಲಿ ಮೈತ್ರಿ ಮುರಿದುಬಿದ್ದಿರುವುದು ಜಿಲ್ಲಾಮಟ್ಟದಲ್ಲಿಯೂ ಪರಿಣಾಮ ಬೀರುವುದು ಬಹುತೇಕ ಖಚಿತವಾಗಿದೆ.
ಶಿವಮೊಗ್ಗ(ಆ.27): ಅತ್ತ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮುರಿದು ಬೀಳುವುದು ಖಚಿತವಾಗುತ್ತಿದ್ದಂತೆ ಜಿಲ್ಲೆಯಲ್ಲಿಯೂ ಇದರ ಬಿಸಿ ತಾಗಿದೆ. ಮೊದಲಿಗೆ ಇಲ್ಲಿನ ಜಿ.ಪಂ. ವ್ಯವಸ್ಥೆಯ ಮೇಲೆ ಇದರ ಮೊದಲ ಪರಿಣಾಮ ಕಾಣಿಸುವುದು ಖಚಿತವಾಗಿದೆ.
ಜಿ.ಪಂ.ನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದಲ್ಲಿದ್ದು, ಮೂರು ವರ್ಷ ಕಳೆದಿದೆ. ಆದರೆ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಯ ಬೆನ್ನಲ್ಲೇ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರು ಜಿಲ್ಲೆಯಲ್ಲಿಯೂ ನಾವು ಕಾಂಗ್ರೆಸ್‌ನೊಡನೆ ಯಾವುದೇ ರೀತಿಯ ಮೈತ್ರಿ ಮಾಡಿಕೊಳ್ಳುವುದಾಗಲೀ, ಇರುವ ಮೈತ್ರಿಯನ್ನು ಮುಂದುವರಿಸುವುದಾಗಲಿ ಮಾಡುವುದಿಲ್ಲ. ನಮಗೂ ಸಾಕಾಗಿ ಹೋಗಿದೆ ಎಂದು ಹೇಳಿರುವುದು ಹೊಸ ಬದಲಾವಣೆಗೆ ನಾಂದಿ ಹಾಡಿದಂತಾಗಿದೆ.
ಅಧಿಕೃತವಾಗಿ ಕಾಂಗ್ರೆಸ್‌ಗೆ ಯಾವ ಸ್ಥಾನವೂ ಇರಲಿಲ್ಲ:
ಶಿವಮೊಗ್ಗ ಜಿ.ಪಂ.ನ ಒಟ್ಟು 31 ಸ್ಥಾನಗಳಲ್ಲಿ ಬಿಜೆಪಿ 15, ಜೆಡಿಎಸ್ 8, ಕಾಂಗ್ರೆಸ್ 7 ಮತ್ತು ಪಕ್ಷೇತರರು ಒಂದು ಸ್ಥಾನವನ್ನು ಪಡೆದಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ, ಉಪಾಧ್ಯಕ್ಷ ಸ್ಥಾನವು ಬಿಸಿಎಂ ‘ಎ’ ವರ್ಗಕ್ಕೂ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಪಡೆದಿದ್ದರೆ, ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದ ಪಕ್ಷೇತರ ಅಭ್ಯರ್ಥಿಗೆ ಬಿಟ್ಟುಕೊಡಲಾಗಿತ್ತು. ಮೈತ್ರಿ ಮಾಡಿಕೊಂಡಿದ್ದರೂ ಅಧಿಕೃತವಾಗಿ ಕಾಂಗ್ರೆಸ್‌ಗೆ ಯಾವುದೇ ಸ್ಥಾನಮಾನ ಸಿಕ್ಕಿರಲಿಲ್ಲ.
ಬಿಜೆಪಿಗೆ ಅವಕಾಶ..?
ಬಿಜೆಪಿ ತಾನು ಅಧಿಕಾರ ಪಡೆಯಲು ಬೇರೆ ಬೇರಿ ರೀತಿಯ ಪ್ರಯತ್ನ ನಡೆಸಿದರೂ ಸಂಖ್ಯಾಬಲವನ್ನು ಹೊಂದಿಸಿಕೊಳ್ಳಲಾಗದೆ ಸುಮ್ಮನಾಗಿತ್ತು. ಆದರೆ ಇದೀಗ ಎದುರಾಗಿರುವ ಎರಡು ಬೆಳವಣಿಗೆಗಳು ಜಿ.ಪಂ.ನ ಮೈತ್ರಿಕೂಟದ ಅಧಿಕಾರವನ್ನು ಪಲ್ಲಟಗೊಳಿಸುವ ಸಾಧ್ಯತೆಯನ್ನು ಹುಟ್ಟು ಹಾಕಿದೆ.
ಶಿವಮೊಗ್ಗ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟವನ್ನು ಮುರಿದುಕೊಳ್ಳುವುದಾಗಿ ರಾಜ್ಯ ನಾಯಕರ ಘೋಷಣೆ ಬೆನ್ನಲ್ಲೇ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಹಿಂಬಾಲಿಸಿದ್ದರಿಂದ ಇಲ್ಲಿನ ಹೊಸ ಲೆಕ್ಕಾಚಾರ ಕಾಣಿಸಿದೆ. ಅಧಿಕಾರ ಇರಲಿ, ಇಲ್ಲದಿರಲಿ ಕಾಂಗ್ರೆಸ್ ಜೊತೆಗಿನ ಅಧಿಕಾರ ಹಂಚಿಕೆ ಬೇಡವೇ ಬೇಡ ಎನ್ನುವುದು ಜೆಡಿಎಸ್ ನಾಯಕರ ಸ್ಪಷ್ಟಅನಿಸಿಕೆಗಳಾಗಿವೆ.
ಇನ್ನೊಂದೆಡೆ ಹಾಲಿ ಜಿ.ಪಂ. ಅಧ್ಯಕ್ಷರಾಗಿರುವ ಜೆಡಿಎಸ್‌ನ ಜ್ಯೋತಿ ಎಸ್. ಕುಮಾರ್ ಅವರ ಪತಿ ಭದ್ರಾವತಿಯ ಕುಮಾರ್ ಹಾಗೂ ಮಾಜಿ ಶಾಸಕ ಅಪ್ಪಾಜಿಗೌಡರ ನಡುವಿನ ಸಂಬಂಧ ಹಳಸಿಹೋಗಿದೆ. ಹೀಗಾಗಿ ಜ್ಯೋತಿ ಎಸ್. ಕುಮಾರ್ ಅವರನ್ನು ಅಧಿಕಾರದಿಂದ ಇಳಿಸಬೇಕೆಂದು ಜೆಡಿಎಸ್ ಪಕ್ಷದ ವಲಯದಲ್ಲಿಯೇ ಚರ್ಚೆ ಶುರುವಾಗಿದೆ. ಈ ಎರಡು ಅಂಶಗಳಿಂದಾಗಿ ಶೀಘ್ರದಲ್ಲಿಯೇ ಜಿ.ಪಂ.ಅಧ್ಯಕ್ಷರ ಅಧಿಕಾರ ಪತನಗೊಳ್ಳುವುದು ನಿಶ್ಚಿತ ಎನ್ನಲಾಗುತ್ತಿದೆ.
ಅವಿಶ್ವಾಸ ನಿರ್ಣುಯಕ್ಕೆ ಬಿಜೆಪಿ ಬೆಂಬಲ ಬೇಕೇ ಬೇಕು:
ಅಧ್ಯಕ್ಷರನ್ನು ಇಳಿಸಿ ಬೇರೆ ಒಬ್ಬರನ್ನು ಇದೇ ಮೈತ್ರಿಕೂಟದಲ್ಲಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ. ಏಕೆಂದರೆ ಕೇವಲ ಒಂದೇ ಒಂದು ಮತಗಳ ಸರಳ ಬಹುಮತದಿಂದ ಅಧಿಕಾರ ಬಂದಿರುವುದು. ಅಧ್ಯಕ್ಷರಾಗಿರುವ ಜ್ಯೋತಿ ಎಸ್. ಕುಮಾರ್ ಅವರು ಅಧಿಕಾರದಿಂದ ಇಳಿಯಲು ಒಪ್ಪದೆ ಇದ್ದಲ್ಲಿ ಮೈತ್ರಿಕೂಟಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಬೆಂಬಲ ಬೇಕಾಗುತ್ತದೆ. ಅವಿಶ್ವಾಸ ನಿರ್ಣಯ ಮಂಡಿಸಲು ಒಟ್ಟು ಸ್ಥಾನಗಳ ಪೈಕಿ 11 ಸದಸ್ಯರು ಸಹಿ ಮಾಡಿದ ಪತ್ರ ನೀಡಿದರೂ ಸಾಕು. ಆದರೆ ಸಭೆಯಲ್ಲಿ ನಿರ್ಣಯ ಗೆಲ್ಲಬೇಕಾದರೆ 23 ಮತಗಳು ಬೇಕಾಗುತ್ತದೆ. ಇದಕ್ಕೆ ಬಿಜೆಪಿ ಬೆಂಬಲಿಸಿದರೆ ಮಾತ್ರ ಸಾಧ್ಯ.
ಬಿಜೆಪಿಗೆ ಅನಾಯಾಸವಾಗಿ ಲಾಭ:
ಈ ಎಲ್ಲ ಬೆಳವಣಿಗೆಯಿಂದ ಬಿಜೆಪಿಗೆ ಅನಾಯಾಸವಾಗಿ ಲಾಭವಾಗುವ ಸಾಧ್ಯತೆ ಇದೆ. ತನಗೆ ಅಧಿಕಾರ ಇಲ್ಲದಿದ್ದರೂ ಪರವಾಗಿಲ್ಲ, ಜ್ಯೋತಿ ಎಸ್. ಕುಮಾರ್ ಅವರನ್ನು ಅಧಿಕಾರದಿಂದ ಇಳಿಸಬೇಕೆಂದು ಜೆಡಿಎಸ್ ತೀರ್ಮಾನ ಕೈಗೊಂಡಿದ್ದೇ ಆದರೆ ಬಿಜೆಪಿ ಪಾಲಿಗೆ ಲಾಭ ಖಚಿತ. ಜ್ಯೋತಿ ಅವರನ್ನು ಬೆಂಬಲಿಸಿ ತಾನು ಉಪಾಧ್ಯಕ್ಷ ಸ್ಥಾನ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿ ಹೆಜ್ಜೆ ಇಡಲೂಬಹುದು. ಆಗ ಜ್ಯೋತಿ ಅವರಿಗೆ ಪಕ್ಷಾಂತರ ನಿಷೇಧದ ಕಾಯ್ದೆ ಎದುರಾಗುತ್ತದೆಯಾದರೂ, ಅದನ್ನು ಎದುರಿಸಿಯೂ ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆ ಇಲ್ಲದಿಲ್ಲ.
ಶಿವಮೊಗ್ಗದಲ್ಲಿಯೂ ಶುರುವಾಯ್ತು ಉದ್ಯೋಗ ಕಡಿತ
ಇನ್ನೊಂದೆಡೆ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಹೊಸ ಪ್ರಸ್ತಾಪ ಎದುರಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಯಾವುದೇ ಕಾನೂನು ತೊಡಕಿಲ್ಲದೆ ಅಧಿಕಾರ ಹಂಚಿಕೆ ಸಾಧ್ಯವಾಗಬಹುದು. ಒಟ್ಟಾರೆ ರಾಜ್ಯದಲ್ಲಿ ಎದುರಾದ ರಾಜಕೀಯ ವಿಪ್ಲವದ ಪರಿಣಾಮ ಜಿಲ್ಲೆಯ ಮೇಲೂ ಕಾಣಿಸಲಿದೆ.
ಜಿ.ಪಂ. ಒಟ್ಟು ಬಲಾಬಲ
ಒಟ್ಟು ಸ್ಥಾನಗಳು: 31
ಬಿಜೆಪಿ - 15
ಜೆಡಿಎಸ್- 8
ಕಾಂಗ್ರೆಸ್ -7
ಪಕ್ಷೇತರ -1
-ಗೋಪಾಲ್ ಯಡಗೆರೆ