
ಬೆಂಗಳೂರು: ಬಿಡಿಎ ನಿರ್ಮಿಸುತ್ತಿರುವ ಡಾ.ಕೆ. ಶಿವರಾಮ ಕಾರಂತ ಬಡಾವಣೆಗೆ 16 ಸಾವಿರ ಕೋಟಿ ರು. ಹೂಡಿಕೆ ಮಾಡಲಾಗಿದೆ. ಭೂಪರಿಹಾರ ಪಡೆದ ರೈತರು ಕಷ್ಟವಿದ್ದರೂ ನಿವೇಶನ ಮಾರಿಕೊಳ್ಳಬೇಡಿ. ಮುಂದೆ ಬೆಲೆ ನಿಮ್ಮ ನಿರೀಕ್ಷೆಗೂ ಮೀರಿ ಬೆಳೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.
ಸೋಮವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೆಹರು ತಾರಾಲಯದ ಯು.ಆರ್.ರಾವ್ ಭವನದಲ್ಲಿ ಆಯೋಜಿಸಿದ್ದ ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ 3200 ಭೂಮಾಲೀಕರು, ರೈತರಿಗೆ ಸಾಂಕೇತಿಕವಾಗಿ ಭೂ ಪರಿಹಾರ ವಿತರಣೆ ಮಾಡಿ ಅವರು ಮಾತನಾಡಿದರು.
ಯೋಜನೆಗೆ ಭೂಮಿ ನೀಡಿದ್ದ ರೈತರು, ಭೂಮಾಲೀಕರಿಗೆ ಮೂರು ವರ್ಷಗಳಿಂದಲೇ ಪರಿಹಾರ ನೀಡುವ ಪ್ರಯತ್ನ ಮಾಡಿ ಅರ್ಜಿಗಳನ್ನು ಕರೆಯಲಾಗಿತ್ತು. ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಶಿವರಾಮ ಕಾರಂತ ಬಡಾವಣೆ ಭೂ ಮಾಲೀಕರಿಗೆ ಪರಿಹಾರ ನೀಡುವುದು ತಡವಾಗಿದೆ. ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಲು ಮುಂದಾದಾಗಲೂ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ 1000 ಕೋಟಿ ರು. ನಷ್ಟವಾಗಿದೆ ಎಂದು ತಿಳಿಸಿದರು.
ಕಾರಂತ ಬಡಾವಣೆಯಲ್ಲಿ ಶೇ.55ರಷ್ಟು ಜಾಗ ಬಿಡಿಎಗೆ ಸಿಗಲಿದೆ ಎಂದು ಅಂದಾಜಿಸಿದ್ದೆವು. ಆದರೆ ಸಿಕ್ಕಿದ್ದು ಮಾತ್ರ ಶೇ.49ರಷ್ಟು ಮಾತ್ರ. ಖಾಸಗಿಯವರಿಗೆ ಆಗಿದ್ದರೆ ಶೇ.55 ನಿವೇಶನ ನೀಡಲು ಸಾಧ್ಯವಾಗುತ್ತದೆ. ಆದರೆ ನಾವು ಅತ್ಯುತ್ತಮ ರಸ್ತೆಗಳು, ಸಾರ್ವಜನಿಕ ಸೌಲಭ್ಯ ಕಲ್ಪಿಸಿದ್ದು, ಶೇ.42 ಮಾತ್ರ ನಿವೇಶನಗಳನ್ನು ನೀಡಲು ಸಾಧ್ಯವಾಗಿದೆ. ಎಕರೆಗೆ ಅಭಿವೃದ್ಧಿಪಡಿಸಿದ ಶೇ.40ರಷ್ಟು ಭೂಮಿಯನ್ನು ಭೂ ಮಾಲೀಕರಿಗೆ ನಿವೇಶನ ಕೊಡಲಾಗುತ್ತಿದೆ ಎಂದು ಹೇಳಿದರು.
ಬಡಾವಣೆಯು 3 ಸಾವಿರ ಎಕರೆಯಲ್ಲಿ ನಿರ್ಮಾಣವಾಗಿದೆ. 3 ಕೋಟಿಯಷ್ಟು ಚದರ ಅಡಿ ನಿವೇಶನವನ್ನು 3,886 ಭೂಮಾಲೀಕರು ಮತ್ತು 3500 ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದ ಅವರು, ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣ ಮಾಡುತ್ತಿದ್ದು ಅದಕ್ಕಾಗಿ 26 ಸಾವಿರ ಕೋಟಿ ರು. ಸಾಲ ಪಡೆಯಲಾಗುತ್ತಿದೆ ಎಂದರು.
ಬಿಡಿಎಗಾಗಿ ಜಮೀನು ಕಳೆದುಕೊಂಡರೆ ಹಳೆ ದರವನ್ನೇ ಕೊಡಬೇಕೆಂದಿದೆ. ಆದರೆ ರೈತರಿಗೆ ಅನ್ಯಾಯವಾಗಬಾರದೆಂದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಗೈಡೆನ್ಸ್ ವ್ಯಾಲ್ಯೂವಿನ ದುಪ್ಪಟ್ಟು ಪರಿಹಾರ, ದುಪ್ಪಟ್ಟು ಟಿಡಿಆರ್, ಇಲ್ಲದಿದ್ದರೆ ಶೇ.35ರಷ್ಟು ವಾಣಿಜ್ಯ ನಿವೇಶನ, ಎಫ್‌ಎಆರ್ ಅಥವಾ ಶೇ.40 ರಷ್ಟು ಅಭಿವೃದ್ಧಿಪಡಿಸಿದ ಭೂಮಿ ನೀಡಲು ಮುಂದಾಗಿದ್ದೇವೆ. ದೇಶದಲ್ಲಿಯೇ ಹೆಚ್ಚು ಪರಿಹಾರ ನೀಡಲಾಗಿದೆ. ಪೆರಿಫೆರಲ್ ರಸ್ತೆಗೆ ಟೆಂಡರ್ ಕರೆದಿದ್ದು, ಕೋಗಿಲು ತನಕ ಕಾಮಗಾರಿ ನಡೆಯುತ್ತಿದೆ. ಶೇ.80ರಷ್ಟು ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಲಾಗಿದೆ. ಈ ರಸ್ತೆ ಪೂರ್ಣವಾದ ಬಳಿಕ ನಿಮ್ಮ ಆಸ್ತಿಯ ಬೆಲೆ ದುಪ್ಪಟ್ಟಾಗಲಿದೆ ಎಂದರು.
ಒಂದು ವರ್ಷಕ್ಕೆ ಕನಿಷ್ಠ 1 ಕೋಟಿ ತೇಗದ ಸಸಿ ನೆಡುವ ಕಾರ್ಯಕ್ರಮ ರೂಪಿಸಲಾಗಿದ್ದು, ಸಸಿಯನ್ನು ಸರ್ಕಾರವೇ ನೀಡುತ್ತದೆ. ಗಿಡವನ್ನು ರೈತರೇ ಕಾಪಾಡಿಕೊಳ್ಳಬೇಕು. 25 ವರ್ಷಗಳನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆ ತರಲಾಗಿದೆ. ಒಂದು ಚದರ ಅಡಿ ತೇಗದ ಬೆಲೆ 7500 ರು. ಆಗಿದೆ. ಇದರಿಂದ ಬರುವ ಲಾಭಾಂಶದಲ್ಲಿ ಶೇ.70 ರೈತರಿಗೆ, ಶೇ.30 ಸರ್ಕಾರಕ್ಕೆ ಹಂಚಿಕೆಯಾಗುತ್ತದೆ ಎಂದರು.
ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಮಾತನಾಡಿ, ಕಳೆದ 18 ವರ್ಷಗಳಿಂದ ಜಮೀನು ಕಳೆದುಕೊಂಡು ನಿವೇಶನಕ್ಕಾಗಿ ಕಾಯುತ್ತಿದ್ದ ರೈತರ ಸುದೀರ್ಘ ಕಾಯುವಿಕೆಗೆ ಈಗ ನ್ಯಾಯ ಸಿಕ್ಕಂತಾಗಿದೆ. ರೈತರು ಯಾವುದೇ ಬ್ರೋಕರ್ ಅಥವಾ ಮಧ್ಯವರ್ತಿಗಳ ಬಳಿ ಹೋಗುವ ಅಗತ್ಯವಿಲ್ಲ. ನೇರವಾಗಿ ಬಿಡಿಎ ಮೂಲಕವೇ ಪಾದರ್ಶಕವಾಗಿ ನಿವೇಶನ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಇ-ಗವರ್ನೆನ್ಸ್ ಇಲಾಖೆಯ ಸಹಯೋಗದಲ್ಲಿ ಸಾಫ್ಟ್‌ವೇರ್ ಮೂಲಕ ದಾಖಲೆಗಳನ್ನು ಭದ್ರಪಡಿಸಲಾಗಿದ್ದು, ಇನ್ಮುಂದೆ ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡುವುದು ಅಥವಾ ಅಕ್ರಮ ಎಸಗಲು ಸಾದ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಶಾಸಕ ಮುನಿರಾಜು, ಎಸ್.ಆರ್.ವಿಶ್ವನಾಥ್, ಬಿಡಿಎ ಆಯುಕ್ತ ಕ್ಯಾಪ್ಟನ್ ಮಣಿವಣ್ಣನ್ ಸೇರಿದಂತೆ ಇತರರಿದ್ದರು.
1 ಎಕರೆ ಕೊಟ್ಟವರಿಗೆ 9583 ಚದರಡಿ ಜಾಗ
ಶಿವರಾಮ ಬಡಾವಣೆ ನಿರ್ಮಾಣಕ್ಕೆ ಬಿಡಿಎ ನಿಯಮದಂತೆ ಒಂದು ಎಕರೆ ಜಮೀನಿಗೆ ಶೇ.40ರಷ್ಟು (9,583 ಚದರ ಅಡಿ) ಅಭಿವೃದ್ಧಿಪಡಿಸಿದ ಜಾಗವನ್ನು ರೈತರಿಗೆ ನೀಡಲಾಗುತ್ತಿದೆ. ವಸತಿ ನಿವೇಶನಗಳು ಶೇ.39.80, ವಾಣಿಜ್ಯ ಚಟುವಟಿಕೆಗಳು ಶೇ.3.78, ಸಿಎ ನಿವೇಶನ ಶೇ.10, ಪಾರ್ಕ್ ಮತ್ತು ಹೊರಾಂಗಣ ಮೈದಾನ ಶೇ.16.66. ರಸ್ತೆ ನಿರ್ಮಾಣ ಶೇ.29.70 ಭೂಮಿಯನ್ನು ಬಳಕೆ ಮಾಡಲಾಗಿದೆ.
ದೇಶದಲ್ಲೇ ಅತಿ ಹೆಚ್ಚು ಪರಿಹಾರ
ಬಿಡಿಎಗಾಗಿ ಜಮೀನು ಕಳೆದುಕೊಂಡರೆ ಹಳೆ ದರವನ್ನೇ ಕೊಡಬೇಕೆಂದಿದೆ. ಆದರೆ ರೈತರಿಗೆ ಅನ್ಯಾಯವಾಗಬಾರದೆಂದು ಗೈಡೆನ್ಸ್ ವ್ಯಾಲ್ಯೂವಿನ ದುಪ್ಪಟ್ಟು ಪರಿಹಾರ, ದುಪ್ಪಟ್ಟು ಟಿಡಿಆರ್, ಇಲ್ಲದಿದ್ದರೆ ಶೇ.35ರಷ್ಟು ವಾಣಿಜ್ಯ ನಿವೇಶನ, ಎಫ್‌ಎಆರ್ ಅಥವಾ ಶೇ.40 ರಷ್ಟು ಅಭಿವೃದ್ಧಿಪಡಿಸಿದ ಭೂಮಿ ನೀಡಲು ಮುಂದಾಗಿದ್ದೇವೆ. ದೇಶದಲ್ಲಿಯೇ ಹೆಚ್ಚು ಪರಿಹಾರ ನೀಡಲಾಗಿದೆ.
ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ