ಮೈಸೂರು ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಕಾರಣವಾಗಿದ್ದ ಜ್ಯುಬಿಲಿಯಂಟ್ ಕಾರ್ಖಾನೆಯು ನಂಜನಗೂಡು ತಾಲೂಕಿನ 10 ಹಳ್ಳಿಗಳನ್ನು ದತ್ತು ಪಡೆಯಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ
ಮೈಸೂರು(ಮೇ 16): ಮೈಸೂರು ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಕಾರಣವಾಗಿದ್ದ ಜ್ಯುಬಿಲಿಯಂಟ್ ಕಾರ್ಖಾನೆಯು ನಂಜನಗೂಡು ತಾಲೂಕಿನ 10 ಹಳ್ಳಿಗಳನ್ನು ದತ್ತು ಪಡೆಯಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಇದಲ್ಲದೆ ನಂಜನಗೂಡು ತಾಲೂಕಿನಲ್ಲಿ 50 ಸಾವಿರ ಆಹಾರ ಕಿಟ್ ವಿತರಿಸಲಿದ್ದಾರೆ. ನಾನು ಮುಖ್ಯಮಂತ್ರಿಗಳು ಹಾಗೂ ಕೈಗಾರಿಕಾ ಸಚಿವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಮಾಲೀಕರೊಂದಿಗೆ ಸಭೆ ನಡೆಸಿ, ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರು.:
ಕೊರೋನಾ ವೈರಸ್ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆಯಿಂದ ತಲಾ 3 ಸಾವಿರ ರು. ಪ್ರೋತ್ಸಾಹಧನ ನೀಡಲಾಗುವುದು ಎಂದರು,
ಯೋಜನೆಗಳಿಗೆ ಚಾಲನೆ:
ತ್ಯಾಜ್ಯ ವಿಲೇವಾರಿ ಸಂಬಂಧ ಸಂಸದ ಪ್ರತಾಪ್ ಸಿಂಹ ಅವರ ಪ್ರಸ್ತಾಪಿಸಿರುವ ಯೋಜನೆಯ ಬಗ್ಗೆ ಮುಖ.್ಯಮಂತ್ರಿಗಳ ಗಮನ ಸೆಳೆದಿದ್ದೇನೆ. ಶೀಘ್ರ ಒಪ್ಪಿಗೆ ಸಿಗಲಿದೆ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸ್ವಾಗತ:
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ಅವರು ಸ್ವಾಗತಿಸಿ, ಇದರಿಂದ ನನ್ನ ಬೆಳೆ, ನನ್ನ ಹಕ್ಕು ಎಂದು ರೈತ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಇದರಿಂದ ರೈತರಿಗೆ ಯಾವುದೇ ತೊಂದರೆಯಾಗದು. ಸಾಧಕಬಾಧಕ ಗಮನಿಸಿಯೇ ತೀರ್ಮಾನ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.