ಕೊರೋನಾ ಅಟ್ಟಹಾಸ: ಆಕ್ಸಿಜನ್‌ ಕೊರತೆ ನೀಗಿಸಲು ಮುಂದಾದ JSW

By Kannadaprabha News  |  First Published Apr 29, 2021, 2:12 PM IST

ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ ಮಾಡಿಕೊಂಡ ಸಂಸ್ಥೆ| ಕೊರೋನಾ ಸಂಕಷ್ಟದಲ್ಲಿ ಸರ್ಕಾರಕ್ಕೆ ಆಕ್ಸಿಜನ್‌ ಪೂರೈಕೆಯ ಮಹತ್ವದ ನಿರ್ಧಾರ| ಕೊರೋನಾ ನಿಯಂತ್ರಿಸುವ ದಿಸೆಯ ಕ್ರಮಗಳಿಗೆ ಕೈ ಜೋಡಿಸುವುದು ನಮ್ಮ ಆದ್ಯ ಕರ್ತವ್ಯ: ರಾಜಶೇಖರ ಪಟ್ಟಣಶೆಟ್ಟಿ| 


ಬಳ್ಳಾರಿ(ಏ.29): ಕೊರೋನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್‌ ಕೊರತೆಯನ್ನು ನೀಗಿಸಲು ಜೆಎಸ್‌ಡಬ್ಲ್ಯು ಸ್ಟೀಲ್‌ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ತೋರಣಗಲ್‌ನ ಪ್ಲಾಂಟ್‌ನಲ್ಲಿ ವೈದ್ಯಕೀಯ ಆಕ್ಸಿಜನ್‌ನ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಳ ಮಾಡಿದೆ.

ಕಳೆದ ಏಪ್ರಿಲ್‌ ತಿಂಗಳ ಆರಂಭದಲ್ಲಿ ಸರಾಸರಿ 200 ಟನ್‌ನಷ್ಟು ಆಕ್ಸಿಜನ್‌ ಉತ್ಪಾದಿಸುತ್ತಿತ್ತು. ಇದೀಗ 680 ಟನ್‌ಗೆ ಉತ್ಪಾದನೆಯ ಹೆಚ್ಚಳ ಮಾಡಿಕೊಂಡಿದೆ. ಈ ಮೂಲಕ ಕೊರೋನಾ ಸಂಕಷ್ಟದಲ್ಲಿ ನೆರವಾಗಲು ಮಾನವೀಯ ಕಾರ್ಯಕ್ಕೆ ಮುಂದಾಗಿದೆ.

Latest Videos

undefined

ಜಿಂದಾಲ್‌ಗೆ 3,677 ಎಕರೆ ಜಮೀನು ಮಾರಾಟ: ಸರ್ಕಾರದ ವಿರುದ್ಧ ಎಚ್‌ಡಿಕೆ ಕೆಂಡ

ಈ ಕುರಿತು ಪ್ರಕಟಣೆ ನೀಡಿರುವ ಜೆಎಸ್‌ಡಬ್ಲ್ಯು ಸ್ಟೀಲ್‌ ವಿಜಯನಗರ ವರ್ಕ್ಸ್‌ನ ಅಧ್ಯಕ್ಷ ರಾಜಶೇಖರ ಪಟ್ಟಣಶೆಟ್ಟಿ, ಈ ಮೊದಲು ಉತ್ಪಾದಿಸುತ್ತಿದ್ದ ವೈದ್ಯಕೀಯ ಆಮ್ಲಜನಕಕ್ಕೆ ಹೋಲಿಸಿದರೆ ಜೆಎಸ್‌ಡಬ್ಲ್ಯು ಹತ್ತಾರುಪಟ್ಟು ಉತ್ಪಾದನೆಯನ್ನು ಹೆಚ್ಚಿಸಿಕೊಂಡಿದೆ. ಏಪ್ರಿಲ್‌ ತಿಂಗಳಲ್ಲಿ 11500 ಟನ್‌ಗಿಂತಲೂ ಹೆಚ್ಚಿನ ವೈದ್ಯಕೀಯ ಆಮ್ಲಜನಕ ಉತ್ಪಾದಿಸಲಾಗಿದ್ದು, ಇದರಲ್ಲಿ ಬಹುಪಾಲು ಕರ್ನಾಟಕಕ್ಕೆ ಪೂರೈಸಲಾಗುತ್ತಿದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸರ್ಕಾರಗಳು ಕೈಗೊಳ್ಳುತ್ತಿರುವ ಕಾರ್ಯಗಳಿಗೆ ಜೆಎಸ್‌ಡಬ್ಲ್ಯು ಸ್ಪಂದಿಸುತ್ತಲೇ ಬಂದಿದೆ. ಇದೀಗ ಆಮ್ಲಜನಕದ ಕೊರತೆಯನ್ನು ನೀಗಿಸುವ ಮೂಲಕ ಸರ್ಕಾರದ ನೆರವಿಗೆ ಧಾವಿಸಲು ಸಂಸ್ಥೆ ಮಹತ್ವದ ನಿಲುವು ತೆಗೆದುಕೊಂಡಿದ್ದು ಆಮ್ಲಜನಕದ ಉತ್ಪಾದನೆಯನ್ನು ಏರಿಕೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

ಕೊರೋನಾ ನಿಯಂತ್ರಿಸುವ ದಿಸೆಯ ಕ್ರಮಗಳಿಗೆ ಕೈ ಜೋಡಿಸುವುದು ನಮ್ಮ ಆದ್ಯ ಕರ್ತವ್ಯವೂ ಆಗಿದೆ. ಜನರ ಜೀವಗಳನ್ನು ಉಳಿಸಲು ಆಮ್ಲಜನಕ ಮಹತ್ವದ ಕೆಲಸ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಜೆಎಸ್‌ಡಬ್ಲ್ಯು ಸಂಸ್ಥೆ ಬದ್ಧತೆಯಿಂದ ನಡೆದುಕೊಳ್ಳಲಿದೆ. ರಾಷ್ಟ್ರದ ಹಿತದೃಷ್ಟಿಯನ್ನಿಟ್ಟುಕೊಂಡು ಆಮ್ಲಜನಕವನ್ನು ಪೂರೈಕೆ ಮಾಡಲು ಸಂಸ್ಥೆಯು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದೆ ಎಂದು ಪಟ್ಟಣಶೆಟ್ಟಿ ಹೇಳಿದ್ದಾರೆ.
 

click me!