‘ಸಮಾಜಕ್ಕೆ ಪತ್ರಿಕೋದ್ಯಮ ಬಹಳ ಮುಖ್ಯ’

By Kannadaprabha NewsFirst Published Nov 17, 2019, 10:17 AM IST
Highlights

ಪತ್ರಿಕೋದ್ಯಮ ಅಥವಾ ಮಾಧ್ಯಮ ಅಂಗ ಸಕ್ರಿಯವಾಗಿ ಕಾರ್ಯನಿರ್ವಹಿಸದಿದ್ದರೆ ಪ್ರಜಾಪ್ರಭುತ್ವದ ಅಸ್ತಿತ್ವವೇ ಕುಸಿಯುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಹೇಳಿದರು. 

ಬೆಂಗಳೂರು [ನ.17]:  ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಕಾರ್ಯ ನಿರ್ವಹಿಸದಿದ್ದರೂ ಪ್ರಜಾಪ್ರಭುತ್ವ ಬದುಕುಳಿಯಬಹುದು. ಆದರೆ, ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಅಥವಾ ಮಾಧ್ಯಮ ಅಂಗ ಸಕ್ರಿಯವಾಗಿ ಕಾರ್ಯನಿರ್ವಹಿಸದಿದ್ದರೆ ಪ್ರಜಾಪ್ರಭುತ್ವದ ಅಸ್ತಿತ್ವವೇ ಕುಸಿಯುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಪ್ರತಿಪಾದಿಸಿದ್ದಾರೆ.

‘ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ, ಪತ್ರಿಕೋದ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮ ವಿಭಾಗ’ದ ಸಂಯುಕ್ತಾಶ್ರಯದಲ್ಲಿ ಜ್ಞಾನಭಾರತಿ ಕ್ಯಾಂಪಸ್‌ನ ಡಾ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ಉಳಿವಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿಂತ ನಾಲ್ಕನೇ ಅಂಗವಾದ ಮಾಧ್ಯಮ ಅಥವಾ ಪತ್ರಿಕೋದ್ಯಮ ಬಹಳ ಮುಖ್ಯ. ಮನುಷ್ಯ ಮೂಲತಃ ಸಮೂಹ ಹಾಗೂ ಸಂವಹನ ಜೀವಿ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಯಾವುದೂ ಬೇಕಿಲ್ಲ ಎನ್ನುವ ಸ್ಥಿತಿಗೆ ಬಂದರೂ ಸಂವಹನಕ್ಕೆ ಬೇಕಾದ ಮಾಧ್ಯಮ ಅಂಗ ಇಲ್ಲದೆ ಬದುಕಲಾರ. ಇತರೆ ಮೂರು ಅಂಗಗಳು ಇಲ್ಲದಿದ್ದರೂ ಪ್ರಜಾಪ್ರಭುತ್ವ ಬದುಕುಳಿಯಬಹುದು. ಆದರೆ, ಮಾಧ್ಯಮ ಅಂಗ ಇಲ್ಲದೆ ಉಳಿಯಲು ಸಾಧ್ಯವಿಲ್ಲ. ಮಾಧ್ಯಮ ಕಾಲಕಾಲಕ್ಕೆ ಬದಲಾಗುತ್ತಿರಬಹುದು, ಇಂದಿನ ಕಾಲಘಟ್ಟದಲ್ಲಿ ಮೊಬೈಲ್‌, ಫೇಸ್ಬುಕ್‌, ವಾಟ್ಸಪ್‌, ಟ್ವೀಟರ್‌ ನಂತರ ಸಾಮಾಜಿಕ ಮಾಧ್ಯಮಗಳಿಲ್ಲದೆ ನಾವು ಬದುಕು ಸಾಧ್ಯವಿಲ್ಲದಂತಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಸಿ

‘ವರದಿಗಾರಿಕೆ: ಮಾಧ್ಯಮ ಜಗತ್ತಿನೊಳಗೊಂದು ಪಯಣ’ ವಿಷಯ ಕುರಿತು ಪ್ರಧಾನ ಭಾಷಣ ಮಾಡಿದ ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಅವರು, ಇಂದಿನ ಪತ್ರಿಕೋದ್ಯಮಕ್ಕೆ ಯಾರೋ ಹೇಳಿದ್ದನ್ನು ಸುದ್ದಿ ಮಾಡುವ ವರದಿಗಾರರು ಬೇಕಾಗಿಲ್ಲ. ಹೇಳದೆ ಬಚ್ಚಿಟ್ಟವಿಷಯವನ್ನು ಹೊರ ತೆಗೆಯುವ ಚಾಕಚಕ್ಯತೆ, ಅಕ್ರಮಗಳನ್ನು ತನಿಖಾ ವರದಿಗಾರಿಕೆ ಮೂಲಕ ಬಯಲಿಗೆಳೆಯುವ ಧೈರ್ಯ ವರದಿಗಾರನಿಗೆ ಇರಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಈಗಿನಿಂದಲೇ ಅಂತಹ ಚಾಕಚಕ್ಯತೆ, ಧೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ಹಿರಿಯ ಪತ್ರಕರ್ತೆ ಸಿ.ಜಿ.ಮಂಜುಳಾ ಅವರು ಮಾತನಾಡಿ, ಮಾಧ್ಯಮಗಳು ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಸಾರ್ವಜನಿಕ ಹಿತಾಸಕ್ತಿಯಿಂದ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಆಡಳಿತಕ್ಕೆ ಕಾರ್ಯಾಸೂಚಿಸಯಾಗಿ ನಿಲ್ಲುವ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವರು ಸದಾ ಅಧ್ಯಯನದಲ್ಲಿ ಕ್ರಿಯಾಶೀಲರಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರ ಮಾಧ್ಯಮ ಕಾರ್ಯದರ್ಶಿ ಎನ್‌. ಭೃಂಗೀಶ್‌, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ.ರೂಪಾ, ಅಕಾಡೆಮಿಯ ಮಾಜಿ ಅಧ್ಯಕ್ಷ ಸಿದ್ದರಾಜು, ವಾರ್ತಾ ಇಲಾಖೆ ಉಪ ನಿರ್ದೇಶಕ ಮುಳೀಧರ್‌, ಬೆಂ.ವಿವಿ ಕುಲಸಚಿವ ಪ್ರೊ.ಬಿ.ಕೆ.ರವಿ, ವಿದ್ಯುನ್ಮಾನ ಮಾಧ್ಯಮ ವಿಭಾಗದ ಮುಖ್ಯಸ್ಥೆ ಡಾ.ವಾಹಿನಿ, ಪ್ರಾಧ್ಯಾಪಕರಾದ ಡಾ.ಬಿ.ಶೈಲಶ್ರೀ, ಡಾ.ರಾಜೇಶ್ವರಿ, ಡಾ.ಎನ್‌.ಸಂಜೀವ್‌ರಾಜ್‌, ಡಾ.ಟಿ.ಶ್ರೀಪತಿ ಮತ್ತಿತತರು ಉಪಸ್ಥಿತರಿದ್ದರು.

click me!