ಕೊರೋನಾ ಆತಂಕದ ಮಧ್ಯೆಯೂ ಇಂದಿರಾ ಕ್ಯಾಂಟೀನ್ ಓಪನ್!

By Kannadaprabha NewsFirst Published Mar 23, 2020, 8:38 AM IST
Highlights

ಇಂದಿರಾ ಕ್ಯಾಂಟೀನ್‌ ತೆರೆದಿರುತ್ತೆ| ಸರ್ಕಾರದಿಂದ ಅನುಮತಿ| ಎಂದಿನಂತೆ ಊಟ, ತಿಂಡಿ ಪೂರೈಕೆ: ಬಿಎಂಪಿಯ ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್‌|ಕಚೇರಿ ಸಿಬ್ಬಂದಿ ಹಾಗೂ ಇನ್ನಿತರರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹೋಟೆಲ್ ನಲ್ಲಿ ಆಹಾರ ಪಾರ್ಸಲ್‌ ಗೆ ಅವಕಾಶ|

ಬೆಂಗಳೂರು[ಮಾ.23]: ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಕ್ಯಾಂಟೀನ್‌ ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿರುವುದರಿಂದ ಬಿಬಿಎಂಪಿಯ ಎಲ್ಲ 198 ವಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗಳು ಎಂದಿನಂತೆ ಊಟ, ತಿಂಡಿ ಪೂರೈಸಲಿವೆ ಎಂದು ಬಿಬಿಎಂಪಿಯ ಹಣಕಾಸು ವಿಭಾಗದ ಜಂಟಿ ಆಯುಕ್ತ ವೆಂಕಟೇಶ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರದಿಂದ ಮಾ.31ರ ವರೆಗೆ ಕೊರೋನಾ ಪೀಡಿತ ಜಿಲ್ಲೆಗಳನ್ನು ಬಂದ್‌ಗೆ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲ ಹೋಟೆಲ್‌, ಕ್ಯಾಂಟೀನ್‌ ಬಂದ್‌ ಆಗಲಿದ್ದು, ಒಂದು ವೇಳೆ ತೆರೆದರೂ ಗ್ರಾಹಕರು ಹೋಟೆಲ್‌, ಕ್ಯಾಂಟೀನ್‌ನಲ್ಲಿ ಕುಳಿತುಕೊಂಡು ಊಟ, ತಿಂಡಿ ಸೇವನೆ ಮಾಡುವಂತಿಲ್ಲ. ಕಚೇರಿ ಸಿಬ್ಬಂದಿ ಹಾಗೂ ಇನ್ನಿತರರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಆಹಾರವನ್ನು ಪಾರ್ಸಲ್‌ ನೀಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಬೆಂಗಳೂರಲ್ಲಿ 120 ವರ್ಷದ ಹಿಂದೆಯೇ 3 ಸಾವಿರ ಜನರ ಬಲಿ ಪಡೆದಿತ್ತು ಈ ರೋಗ!

ಇಂದಿರಾ ಕ್ಯಾಂಟೀನ್‌ಗಳನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವುದರಿಂದ ಅದನ್ನು ತೆರೆಯುವುದಕ್ಕೆ ಅವಕಾಶವಿದೆ. ಹೀಗಾಗಿ, ಸೋಮವಾರದಿಂದ ನಗರದಲ್ಲಿ ಎಲ್ಲ ಇಂದಿರಾ ಕ್ಯಾಂಟೀನ್‌ ಹಾಗೂ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಎಂದಿನಂತೆ ಊಟ, ತಿಂಡಿ ಪೂರೈಕೆ ಮಾಡಲಿವೆ ಎಂದು ಸ್ಪಷ್ಟಪಡಿಸಿದರು.

ಶೇ.5 ಗ್ರಾಹಕರ ಸಂಖ್ಯೆ ಹೆಚ್ಚಳ:

ಬೀದಿ ಬದಿಯ ಆಹಾರ ಮಾರಾಟ ಮಳಿಗೆಗಳನ್ನು ಸ್ಥಗಿತಗೊಳಿಸಿದ ಬಳಿಕ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಕೆಲ ಕಡೆ ಗ್ರಾಹಕರ ಕೊರತೆಯಿದ್ದರೂ ಒಟ್ಟಾರೆ ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಶೇ.5ರಿಂದ 10ರಷ್ಟುಗ್ರಾಹಕರ ಸಂಖ್ಯೆ ಹೆಚ್ಚಾಗಿದೆ ಎಂದು ಇಂದಿರಾ ಕ್ಯಾಂಟೀನ್‌ ಆಹಾರ ಸರಬರಾಜು ಗುತ್ತಿಗೆದಾರ ಹಾಗೂ ಚೆಫ್‌ಟಾಕ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಪೂಜಾರಿ ಮಾಹಿತಿ ನೀಡಿದ್ದಾರೆ.

ಕೊರೋನಾ ಭೀತಿ: ಮೆಟ್ರೋ ಸಂಚಾರ ಸಂಪೂರ್ಣ ರದ್ದು

ಪೊಲೀಸರಿಗೆ ಇಂದಿರಾ ಕ್ಯಾಂಟೀನ್‌ ಊಟ

ನಗರದಲ್ಲಿ ಬಹುತೇಕ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಬಂದ್‌ ಆಗಿರುವುದರಿಂದ ನಗರದ ಭದ್ರತೆಗೆ ನಿಯೋಜಿಸಿದ ಪೊಲೀಸ್‌ ಸಿಬ್ಬಂದಿಗೆ ಊಟ, ತಿಂಡಿ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಉಪ ಆಯುಕ್ತರ ಕಚೇರಿಗೆ ಸೋಮವಾರದಿಂದ ಒಟ್ಟು 200 ಪ್ಲೇಟ್‌ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಎರಡು ಹೊತ್ತು ಊಟ ಪೂರೈಕೆಗೆ ಮನವಿ ಬಂದಿದೆ. ಉಪ್ಪಿಟ್ಟು, ಇಡ್ಲಿ, ಅನ್ನ ಸಾಂಬಾರು, ಪಾಯಸ ನೀಡುತ್ತೇವೆ. ಬಿಬಿಎಂಪಿ ಆಯುಕ್ತರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಪೊಲೀಸರಿಗೆ ಉಚಿತವಾಗಿ ಊಟ, ತಿಂಡಿ ವಿತರಣೆ ಅನುಮತಿ ನೀಡಿದರೆ ಪೂರೈಕೆ ಮಾಡುವುದಾಗಿ ಗೋವಿಂದ ಪೂಜಾರಿ ಹೇಳಿದ್ದಾರೆ.

click me!