Raichur: ಜಿಲ್ಲಾಧಿಕಾರಿ ‌ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ‌486 ಅರ್ಜಿಗಳ ಸಲ್ಲಿಕೆ!

By Govindaraj S  |  First Published May 28, 2022, 2:00 AM IST

ತಾಲೂಕಿನ ವೆಂಕಟಾಪೂರು ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಚಾಲನೆ ನೀಡಿದರು.‌


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ಮೇ.28): ತಾಲೂಕಿನ ವೆಂಕಟಾಪೂರು ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಚಾಲನೆ ನೀಡಿದರು.‌ ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಯೋಜನೆಗಳನ್ನು ಪಡೆಯಲು ಕಚೇರಿ- ಕಚೇರಿ ಅಲೆಯುವುದರನ್ನ ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಜನರಿಗೆ ಕರೆ ನೀಡಿದ್ರು. 

Latest Videos

undefined

ಜಿಲ್ಲಾಧಿಕಾರಿ ಕೆರೆ ನಿರ್ಮಿಸುವಂತೆ ಶಾಸಕರು ‌ಮನವಿ: ಜಾಗೀರ ವೆಂಕಟಾಪೂರು ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಹತ್ತಾರು ಬಾರಿ ಅಧಿಕಾರಿಗಳ ‌ಗಮನಕ್ಕೆ ತೆಗೆದುಕೊಂಡು ಬಂದ್ರೂ ನೀರಿನ ಸಮಸ್ಯೆ ಹಾಗೇ ಇದೆ. ಹೀಗಾಗಿ ಜಾಗೀರ ವೆಂಕಟಾಪೂರ ಗ್ರಾಮ ಮತ್ತು ಇತರೆ ಗ್ರಾಮಗಳಿಗೆ ನೀರಿನ ಸಮಸ್ಯೆ ಪರಿಹಾರ ಮಾಡಲು ಒಂದು ಕೆರೆ ನಿರ್ಮಾಣ ಮಾಡುವಂತೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಡಳಿತವೇ ನಿಮ್ಮ ಗ್ರಾಮಕ್ಕೆ ಬಂದಿದೆ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತವೇ ನಿಮ್ಮ ಬಳಿ ಬಂದಿದ್ದು, ಯಾವುದೇ ಸಮಸ್ಯೆ ಇದ್ದರೂ ಮುಕ್ತವಾಗಿ ನಮ್ಮ ಜೊತೆಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ, ನಿಮ್ಮ ಸಮಸ್ಯೆ ಆಲಿಸಲು ನಾವು ನಿಮ್ಮ ಊರಿಗೆ ಬಂದಿದ್ದೇವೆ ಎಂದು ತಿಳಿಸಿದರು.

ಕಡಿದು ಹಾಕಿದ್ದ ಆಲದ ಮರಕ್ಕೆ ಮರು ಜೀವ ನೀಡಿದ ಪರಿಸರ ಪ್ರೇಮಿ

ಮಹಿಳೆಯೇ ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ: ರಾಯಚೂರು ತಾಲೂಕಿನ ಜಾಗೀರ್ ವೆಂಕಟಾಪುರ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒನೂರ ಜಹಾರ್ ಖಾನಂ ರಾಯಚೂರು ಜಿಲ್ಲೆಯ ಬಹುತೇಕ ಗರ್ಭಿಣಿ ಮಹಿಳೆಯರಲ್ಲಿ ರಕ್ತದ ಕೊರತೆ ಹೆಚ್ಚಾಗಿದೆ. ಹೀಗಾಗಿ ಮಹಿಳೆಯರು ಕಡ್ಡಾಯವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಲ್ಲದೆ ಪೌಷ್ಟಿಕಾಂಶ ಆಹಾರ ಸೇವನೆ ಮಾಡಬೇಕೆಂದು ತಿಳಿ ಹೇಳಿದ್ರು. ಸರ್ಕಾರ ನಿಮ್ಮ ಸಲುವಾಗಿ ಹತ್ತಾರು ಯೋಜನೆಗಳು ಜಾರಿಗೆ ತಂದಿದೆ. ಆ ಯೋಜನೆಗಳ ಲಾಭ ಪಡೆಯುವಂತೆ ಗ್ರಾಮೀಣ ಜನರಿಗೆ ತಿಳಿಸಿದರು.

ಇನ್ನೂ ಆ ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್ ಪಿಂಚಣಿ , ಆಶ್ರಯ ಯೋಜನೆ, ಪೌತಿ ಖಾತೆ, ಸ್ಮಶಾನ, ಪಹಣಿ  ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದ ಅಡೆತಡೆ ನಿವಾರಣೆ ಸಂಬಂಧ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

486 ಅರ್ಜಿಗಳ ಸಲ್ಲಿಕೆ, ಸ್ಥಳದಲ್ಲೇ 403 ಅರ್ಜಿಗಳ ಇತ್ಯರ್ಥ: ಜಿಲ್ಲಾಧಿಕಾರಿ ‌ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಾಗೀರ್ ವೆಂಕಟಪೂರ ಗ್ರಾಮಸ್ಥರು ಹಾಗೂ ವಿವಿಧ ಗ್ರಾಮಗಳಿಂದ ಬಂದ ಗ್ರಾಮಸ್ಥರು 486 ಅಹವಾಲು ಅರ್ಜಿಗಳನ್ನು ಸಲ್ಲಿಕೆ ‌ಮಾಡಿದ್ರು.  ಕಂದಾಯ, ಗ್ರಾಮ ಪಂಚಾಯತ್, ಆಹಾರ, ಲೋಕೋಪಯೋಗಿ, ಭೂ ಮಾಪನ, ಕೃಷಿ, ತೋಟಗಾರಿಕೆ, ಶಿಕ್ಷಣ, ಪಶುಸಂಗೋಪನೆ, ವಿಕಲಚೇತನ ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದ  ಅರ್ಜಿ ಸಲ್ಲಿಸಿದ್ದರು. ವಿವಿಧ ಇಲಾಖೆಗಳಿಂದ ಆಗಮಿಸಿದ ಅಧಿಕಾರಿಗಳು ಸ್ಥಳದಲ್ಲೇ 403 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಉಳಿದ 86 ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳಿಸಿಲಾಗಿದೆ ಎಂದು ತಹಸೀಲ್ದಾರರು ಮಾಹಿತಿ ‌ನೀಡಿದ್ರು.

ಆರೋಗ್ಯ ಇಲಾಖೆಯಿಂದ ಜಾಗೃತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ತಂಬಾಕು ನಿಯಂತ್ರಣ ಕಾರ್ಯಕ್ರಮ, ಮಲೇರಿಯಾ, ಡೆಂಗ್ಯೂ ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳು, ಮೆದುಳು ಜ್ವರ, 2025ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿ, ಬಾಯಿ ಆರೋಗ್ಯ ಶಿಬಿರ, ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಮತ್ತು ತಡೆಗಟ್ಟುವ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನಾ ವಿಧಾನಗಳು ಸೇರಿದಂತೆ ವಿವಿಧ ಇಲಾಖೆಯ ಯೋಜನೆಗಳ ಸೌಲಭ್ಯ ಕುರಿತು ಜಾಗೀರ ವೆಂಕಟಾಪೂರು ಗ್ರಾಮದ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯಿತು. 

ಸಮಗ್ರ ಕೃಷಿ ಅಭಿಯಾನ ವಾಹನಗಳಿಗೆ ಶಾಸಕರಿಂದ ಚಾಲನೆ: ಕಲ್ಮಲಾ ಹೋಬಳಿಯ ಜಾಗೀರ ವೆಂಕಟಾಪೂರು ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ವತಿಯಿಂದ ನಡೆದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಹಾಗೂ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇತರೆ  ಇಲಾಖೆಗಳ ಸಹಯೋಗದೊಂದಿಗೆ ಸಮಗ್ರ ಕೃಷಿ ಅಭಿಯಾನದ ವಾಹನಗಳಿಗೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಿ. 

SSLC ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆಗೆ ಫಸ್ಟ್ , ಆಧಾರ್ ಕಾರ್ಡ್‌ಗಾಗಿ ಅಲೆದಾಡಿ ಸುಸ್ತು!

ಅಲ್ಲದೆ ರಸಗೊಬ್ಬರವು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ಮೇಲೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇನ್ನೂ ‌ಇದೇ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಪ್ರಾಣೇಶ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಸಿಇಒ ನೂರ ಜಹಾರ್ ಖಾನಂ, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್, ರಾಯಚೂರು ತಾಲೂಕು ತಹಸೀಲ್ದಾರ್ ಡಾ.ಹಂಪಣ್ಣ ಸಜ್ಜನ್, ರಾಯಚೂರು ತಾ.ಪಂ. ಇಒ ರಾಮರೆಡ್ಡಿ, ರಾಯಚೂರಿನ ಕೃಷಿ ಇಲಾಖೆಯ ಉಪ ನಿರ್ದೇಶಕ ನಯೀಮ್ ಹುಸೇನ್, ರಾಯಚೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪಲತಾ ಸೇರಿದಂತೆ ಇತರರು ಇದ್ದರು.

click me!