ಕಾನೂನಿನ ಅಡಿಯಲ್ಲಿ ಅವಕಾಶವಿರದ ನಡೆ ಇಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ಚುನಾವಣೆ ಬೆನ್ನಲ್ಲೇ ಗ್ರಾಮ ಪಂಚಾಯತ್ 4 ಸ್ಥಾನಗಳನ್ನು ಹರಾಜು ಹಾಕಲಾಗಿದೆ.
ಜೇವರ್ಗಿ (ಡಿ.07): ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿ 8 ಸದಸ್ಯ ಸ್ಥಾನಗಳಲ್ಲಿ ನಾಲ್ಕು ಸದಸ್ಯ ಸ್ಥಾನಗಳನ್ನು ಗ್ರಾಮಸ್ಥರು 26 ಲಕ್ಷಕ್ಕೆ ಹರಾಜು ಹಾಕಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಳವಾರ ಗ್ರಾಪಂನಲ್ಲಿ ಒಟ್ಟು 8 ಸದಸ್ಯ ಸ್ಥಾನಗಳಿವೆ. ಈ 8 ಸ್ಥಾನಗಳನ್ನು ಹರಾಜು ಹಾಕಿ ಬಂದ ಹಣವನ್ನು ಗ್ರಾಮದಲ್ಲಿರುವ ಹನುಮಂತ ದೇವರ ಮಂದಿರ ಕಾಮಗಾರಿಗೆ ಬಳಸಿಕೊಳ್ಳುವ ಉದ್ದೇಶವಿತ್ತು. ಆದರೆ, ಗ್ರಾಮದಲ್ಲಿ ನಾಲ್ಕು ಸ್ಥಾನಗಳನ್ನು ಮಾತ್ರ ಹರಾಜು ಹಾಕಲು ಒಪ್ಪಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಆ ನಾಲ್ಕು ಸ್ಥಾನವನ್ನು ಮಾತ್ರ ಗ್ರಾಮದ ಮುಖಂಡರು ಇತ್ತೀಚೆಗೆ ಹರಾಜು ಹಾಕಿದ್ದಾರೆ. ಹರಾಜಿನಿಂದ 26.55 ಲಕ್ಷ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಗ್ರಾಪಂನಲ್ಲಿ 4 ಜನ ಅವಿರೋಧ ಆಯ್ಕೆಯಾದಂತಾಗಿದ್ದು, ಇನ್ನು 4 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.
ಮೊದಲ ಹಂತದ ಗ್ರಾಪಂ ಸಮರಕ್ಕೆ ನಾಮಪತ್ರ ಸಲ್ಲಿಕೆ ಶುರು
ಈ ಬಗ್ಗೆ ಹೆಸರು ಹೇಳಲು ಇಚ್ಛಿಸದ ಊರಿನ ಮುಖಂಡರೊಬ್ಬರು ಮಾತನಾಡಿ, ಕೆಲವರು ಊರಲ್ಲಿ ಪೈಪೋಟಿ ಬೇಡವೆಂಬ ಕಾರಣಕ್ಕೆ ಇಂತಹ ವಿಚಾರ ಚರ್ಚೆ ಮಾಡಿದ್ದಾರೆ. ಆದರೆ, ಹರಾಜು ಮಾಡಿಲ್ಲ ಎಂದಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ಪ್ರತಿಕ್ರಿಯಿಸಿ, ಕಾನೂನಿನಲ್ಲಿ ಹರಾಜಿಗೆ ಅವಕಾಶವಿಲ್ಲ. ಈ ಬಗ್ಗೆ ಯಾರಾದರೂ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಬಿಳವಾರದಲ್ಲಿ ಏನು ನಡೆದಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.