ಗ್ರಾಹಕರು ಮಾಸ್ಕ್‌ ಧರಿಸದಿದ್ದರೆ ನಮಗೇಕೆ ದಂಡ?

By Kannadaprabha NewsFirst Published Dec 7, 2020, 7:43 AM IST
Highlights

ಇತರರಿಗೆ ಇರದ ಕಾನೂನು ನಮಗೆ ಮಾತ್ರ ಏಕೆ?| ವ್ಯಾಪಾರಿಗಳು, ಹೊಟೇಲ್‌, ಮಾಲ್‌, ಮಳಿಗೆಗಳ ಮಾಲೀಕರ ಪ್ರಶ್ನೆ| ಬಿಬಿಎಂಪಿ ವಿರುದ್ಧ ಕಿಡಿ| ಕೂಡಲೇ ಸುತ್ತೋಲೆ ಹಿಂಪಡೆಯುವಂತೆ ಆಗ್ರಹ| ಇಲ್ಲವಾದರೆ ಉಗ್ರ ಹೋರಾಟದ ಎಚ್ಚರಿಕೆ| 
 

ಬೆಂಗಳೂರು(ಡಿ.07): ಸಾರ್ವಜನಿಕರು ಮಾಸ್ಕ್‌ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಸಂಬಂಧಪಟ್ಟ ವ್ಯಾಪಾರಿ ಸ್ಥಳದ ಮಾಲೀಕರಿಗೆ ದಂಡ ವಿಧಿಸುವ ಬಿಬಿಎಂಪಿ ಸುತ್ತೋಲೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸುತ್ತೋಲೆ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುವುದಾಗಿ ವಿವಿಧ ಸಂಘಟನೆಗಳು ಎಚ್ಚರಿಸಿವೆ.

ಕೊರೋನಾದಿಂದ ಈಗಾಗಲೇ ವ್ಯಾಪಾರಿಗಳು ತತ್ತರಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೋವಿಡ್‌-19 ತಡೆಗಟ್ಟುವ ನೆಪದಲ್ಲಿ ಅಧಿಕ ಮೊತ್ತದ ದಂಡ ವಿಧಿಸಿ ತನ್ನ ಖಜಾನೆ ಭರ್ತಿಗೊಳಿಸುವ ಕಾರ್ಯಕ್ಕೆ ಇಳಿದಿದೆ ಎಂದು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕೊರೋನಾ ಸೋಂಕು ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ. ಗ್ರಾಹಕರು ಮಾಸ್ಕ್‌ ಧರಿಸದಿದ್ದರೆ ಸಂಬಂಧಪಟ್ಟ ಮಾಲೀಕರಿಗೆ ದಂಡ ವಿಧಿಸಬೇಕೇ?, ಕೋವಿಡ್‌ ನೆಪದಲ್ಲಿ ನಿರೀಕ್ಷೆಗೂ ಮೀರಿ ದಂಡ ವಸೂಲಿಗೆ ಇಳಿದಿರುವುದು ಎಷ್ಟು ಸರಿ?, ಬಿಬಿಎಂಪಿ ಈ ಸುತ್ತೋಲೆ ಹಿಂಪಡೆಯಬೇಕು. ಇಲ್ಲದಿದ್ದರೆ ಬೃಹತ್‌ ಹೋರಾಟ ಮಾಡಲಾಗುವುದು ಎಂದು ವಿವಿಧ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

2ನೇ ಅಲೆ ಭೀತಿ ಮಧ್ಯೆ ಕೊರೋನಾ ಸಾವು ಹೆಚ್ಚಳ: ಜನರಲ್ಲಿ ಹೆಚ್ಚಿದ ಆತಂಕ

ಕೋವಿಡ್‌-19 ಬಂದಾಗಿನಿಂದಲೂ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದೇವೆ. ಹೋಟೆಲ್‌ಗಳು, ಚಿತ್ರಮಂದಿರ, ಮಾಲ್‌ಗಳು, ರೆಸ್ಟೋರೆಂಟ್‌ಗಳು ಒಳಗೊಂಡಂತೆ ಜನಸಂದಣಿ ಹೆಚ್ಚಿರುವ ವ್ಯಾಪಾರ ಕೇಂದ್ರಗಳಲ್ಲಿ ವಿವಿಧ ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತಿದೆ. ಹೀಗಿದ್ದರೂ ಬಿಬಿಎಂಪಿ ದಂಡ ವಸೂಲಿಗೆ ಇಳಿದಿರುವುದು ನ್ಯಾಯಸಮ್ಮತವಲ್ಲ ಎಂದು ಹೋಟೆಲ್‌ ಮಾಲೀಕರ ಸಂಘ, ಚಿತ್ರಮಂದಿರ ಮಾಲೀಕರ ಸಂಘ, ಕಲ್ಯಾಣ ಮಂಟಪಗಳ ಮಾಲೀಕರ ಸಂಘ, ಮಾಲ್‌ಗಳು, ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬಿಬಿಎಂಪಿ ನಡೆಯನ್ನು ವಿರೋಧಿಸಿದ್ದಾರೆ.

ಬಿಬಿಎಂಪಿ ಸುತ್ತೋಲೆ ಕುರಿತಂತೆ ಆಯುಕ್ತರೊಂದಿಗೆ ಈಗಾಗಲೇ ಚರ್ಚಿಸಿದ್ದೇವೆ. ದಂಡ ಹಾಕುವುದಕ್ಕೂ ಒಂದು ಕ್ರಮವಿರುತ್ತದೆ. 25 ಸಾವಿರ, 50 ಸಾವಿರ ದಂಡ ಹಾಕಲು ಲೆಕ್ಕಾಚಾರವಿಲ್ಲವೇ? ಸದ್ಯ ಹೊರಡಿಸಿರುವ ಸುತ್ತೋಲೆ ಹಿಂಪಡೆದು ಸೂಕ್ತ ಬದಲಾವಣೆ ಮಾಡಬೇಕು. ಹೋಟೆಲ್‌ ಮಾಲೀಕರ ಸಂಘದ ನೇತೃತ್ವದಲ್ಲಿ ಡಿ.7ರ ಸೋಮವಾರ ಎಲ್ಲಾ ಸಂಘಟನೆಗಳ ಮುಖಂಡರು ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ ಎಂದು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ತಿಳಿಸಿದ್ದಾರೆ.

ಗ್ರಾಹಕರು ಮಾಸ್ಕ್‌ ಹಾಕದಿದ್ದರೆ ವ್ಯಾಪಾರಿಗಳಿಗೆ 5 ಸಾವಿರ ರು. ದಂಡ ಹಾಕುವುದು ಯಾವ ರೀತಿ ನ್ಯಾಯ? ಬೀದಿ ಬದಿ ವ್ಯಾಪಾರಿಗಳು ಕೇವಲ 100ರಿಂದ 300 ರು. ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಹೆಚ್ಚಿನ ದಂಡ ಕಟ್ಟಲು ಆಗುತ್ತದೆಯೇ? ಸರ್ಕಾರ ಹಾಗೂ ಬಿಬಿಎಂಪಿ ಈ ಸುತ್ತೋಲೆ ಹಿಂಪಡೆಯಬೇಕು ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.

ಇತರರಿಗೆ ಇರದ ಕಾನೂನು ನಮಗೆ ಮಾತ್ರ ಏಕೆ? ಸಚಿವ ವಿ.ಸೋಮಣ್ಣನವರ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ನೂರಾರು ಜನರು ಸೇರಿದ್ದರು. ಕರ್ನಾಟಕ ಬಂದ್‌ ದಿನ ಪ್ರತಿಭಟನಾಕಾರರು ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿದ್ದರು. ಅವರಿಗೆಲ್ಲ ಯಾವ ಕಾನೂನು ಇಲ್ಲವೇ? ಆಗ ಸೋಂಕು ಹರಡುವ ನೆನಪಾಗಲಿಲ್ಲವೇ? ಎಂದು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಹೇಳಿದ್ದಾರೆ. 

ಕೊರೋನಾದಿಂದ ಹೋಟೆಲ್‌ ಉದ್ಯಮ ಆರ್ಥಿಕ ಸಂಕಷ್ಟಕ್ಕೆ ಗುರಿಯಾದಾಗ ಸರ್ಕಾರ ನಮ್ಮ ಸಹಾಯಕ್ಕೆ ಬರಲಿಲ್ಲ. ನಮ್ಮ ಪಾಡಿಗೆ ನಾವು ವ್ಯಾಪಾರ ಮಾಡಿಕೊಂಡಿದ್ದರೂ ಉಪದ್ರವ ನೀಡಲಾಗುತ್ತಿದೆ. ರಸ್ತೆ ಬದಿ ವ್ಯಾಪಾರಿಗಳಿಂದ ಕೊರೋನಾ ಹರಡುವುದಿಲ್ಲವಾ? ಫುಟ್‌ಬಾತ್‌ನಲ್ಲಿ ಹೇಗೆ ವ್ಯಾಪಾರ ನಡೆಸಿದರೂ ಕೇಳುವವರಿಲ್ಲ. ನಾವು ಎಲ್ಲಾ ಸೌಲಭ್ಯ ನೀಡಿ ನಿಯಮ ಪಾಲಿಸಿಯೂ ನಮ್ಮ ಮೇಲೆ ದಂಡ ಪ್ರಯೋಗ ಸರಿಯಲ್ಲ ಎಂದು ರಾಜ್ಯ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಅಸೋಸಿಯೇಷನ್‌ ಅಧ್ಯಕ್ಷ ಬಿ.ಚಂದ್ರಶೇಖರ ಹೆಬ್ಬಾರ್‌ ಹೇಳಿದ್ದಾರೆ. 

ಇದು ಎಂದಿಗೂ ನೆರವೇರದ ಸುತ್ತೋಲೆ. ಯಾವುದೇ ಕಾರಣಕ್ಕೂ ಇಷ್ಟುದೊಡ್ಡ ಮೊತ್ತದ ದಂಡ ಕಟ್ಟುವುದಿಲ್ಲ. ಕಳೆದ ಆರು ತಿಂಗಳಿನಿಂದ ಸರಿಯಾಗಿ ವ್ಯಾಪಾರವಿಲ್ಲ. ಹೋಟೆಲ್‌ಗಳು, ಕಲ್ಯಾಣಮಂಟಪಗಳು, ಮಾಲ್‌ಗಳು ಎಲ್ಲಾ ಮುಚ್ಚಿದ್ದವು. ಆದರೂ ತೆರಿಗೆ, ವಿದ್ಯುತ್‌ ಬಿಲ್‌ನಲ್ಲಿ ವಿನಾಯಿತಿ ನೀಡಲಿಲ್ಲ. ಸರ್ಕಾರ ನಮಗೆ ಸಹಾಯ ಮಾಡದಿದ್ದರೂ ತೊಂದರೆ ನೀಡಬಾರದು ಎಂದು ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

click me!