
ಧಾರವಾಡ(ಸೆ.10): ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಚಾತುರ್ಮಾಸ ಕಾರ್ಯಕ್ರಮ ನಿಮಿತ್ತ ಸೆ. 11ರಿಂದ 20ರ ವರೆಗೆ ದಶಲಕ್ಷಣ ಮಹಾಪರ್ವ, ಅಣುವ್ರತ ಸಂಸ್ಕಾರ ಮತ್ತು ಧ್ಯಾನ ಯೋಗಸಾಧನಾ ಶಿಬಿರ ಹಾಗೂ ಕ್ಷಮಾವಳಿ ಜರುಗಲಿವೆ ಎಂದು ಸಂತ 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜರು ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸೆ. 11ರಂದು ಉತ್ತಮ ಕ್ಷಮಾ ಧರ್ಮ, 12ರಂದು ಉತ್ತಮ ಮಾರ್ಧವ ಧರ್ಮ, 13ರಂದು ಉತ್ತಮ ಅರ್ಜವ ಧರ್ಮ, 14ರಂದು ಉತ್ತಮ ಶೌಚ ಧರ್ಮ, 15ರಂದು ಉತ್ತಮ ಸತ್ಯ ಧರ್ಮ, 16ರಂದು ಉತ್ತಮ ಸಂಯಮ ಧರ್ಮ, 17ರಂದು ಉತ್ತಮ ತಪ ಧರ್ಮ, 18ರಂದು ಉತ್ತಮ ತ್ಯಾಗ ಧರ್ಮ, 19ರಂದು ಉತ್ತಮ ಆಕಿಂಚನ್ಯ ಧರ್ಮ ಹಾಗೂ 20ರಂದು ಉತ್ತಮ ಬ್ರಹ್ಮಚರ್ಯ ಧರ್ಮ ಹೀಗೆ ದಶಲಕ್ಷಣ ಮಹಾಪರ್ವದ ಕಾರ್ಯಕ್ರಮಗಳು ಪ್ರತಿದಿನ ಮಧ್ಯಾಹ್ನ 2 ರಿಂದ ಜರುಗಲಿವೆ. ಪ್ರತಿನಿತ್ಯ ಬೆಳಗ್ಗೆ 5ರಿಂದ ಧ್ಯಾನ, ಯೋಗ, ಜಿನ ಅಭಿಷೇಕ ಮತ್ತು ಅಷ್ಟವಿಧಾರ್ಚನೆ ಪೂಜೆ ನಡೆಯಲಿವೆ ಎಂದರು.
'ಪಾಸಿಟಿವ್ ಬದಲು ಪಾಸಿಟಿವ್ ಚಿಂತನೆ ಬೇಕಾಗಿದೆ' ಇಂದು ಜೈನ ಮುನಿ ಶ್ರೀ ಪ್ರಮನ್‌ಸಾಗರ್ ಜಿ ಮಾತು
ಹತ್ತು ದಿನಗಳವರೆಗಿನ ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸುವರ್ಣ ವಾಹಿನಿಯ ಮುಖ್ಯ ಸಂಪಾದಕ ಅಜಿತ ಹನುಮಕ್ಕನವರ, ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ, ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ ಹಾಗೂ ಯುವ ಬಿಗ್ರೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕೊಟಬಾಗಿ ಗ್ರಾಮದಲ್ಲಿ ಹತ್ತು ದಿನಗಳವರೆಗೆ ಜರುಗುವ ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ರಾಜ್ಯದಲ್ಲಿರುವ ಎಲ್ಲ ವಧಾಲಯಗಳನ್ನು ಹತ್ತು ದಿನಗಳವರೆಗೆ ಬಂದ್ ಮಾಡಿ, ಈ ಮೂಲಕ ಎಲ್ಲರೂ ಅಹಿಂಸಾ ಪರಮೋಧರ್ಮದ ತತ್ವವನ್ನು ಪಾಲಿಸಿ ನಮ್ಮೊಂದಿಗೆ ಕೈಜೋಡಿಸಬೇಕೆಂದು ಮುನಿಶ್ರೀ ಪ್ರಸಂಗಸಾಗರ ಮಹಾರಾಜರು ಮನವಿ ಮಾಡಿದ್ದಾರೆ.