Council Election Result : ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಶಕ್ತಿ ಇನ್ನೂ ಗಟ್ಟಿ

By Kannadaprabha News  |  First Published Dec 16, 2021, 12:53 PM IST
  •  ಹಳೇ ಮೈಸೂರು ಭಾಗದಲ್ಲಿ  ಜೆಡಿಎಸ್‌ ಶಕ್ತಿ ಇನ್ನೂ ಗಟ್ಟಿ 
  • ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಿಂದ ಉತ್ತರ

 ಮೈಸೂರು (ಡಿ.16):  ಮೈಸೂರು- ಚಾಮರಾಜನಗರ (Mysuru - chamarajanagar) ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ (MLC Election) ನಡೆದ ಚುನಾವಣೆಯಲ್ಲಿ ಜೆಡಿಎಸ್‌ (JDS) ಕಳೆದ ಬಾರಿಗಿಂತ ಹೆಚ್ಚು ಮತ ಪಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್‌ (Sa Ra Mahesh) ಹೇಳಿದರು.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಪ್ರಾಶಸ್ತ್ಯದಲ್ಲಿ ನಮಗೂ ನಮ್ಮ ಎದುರಾಳಿ ಅಭ್ಯರ್ಥಿಗೂ 139 ಮತಗಳ ಅಂತರವಿತ್ತು. ತಾಪಂ ಹಾಗೂ ಜಿಪಂ ಸದಸ್ಯರಿಲ್ಲದಿದ್ದರಿಂದ ನಮಗೆ ಸುಮಾರು 170 ಮತಗಳು ಕಡಿಮೆಯಾದವು. ಇದಲ್ಲದೇ ಬಿಜೆಪಿ (BJP) ಸರ್ಕಾರ ಪ್ರತಿ ಕ್ಷೇತ್ರದಲ್ಲಿ 3-5 ಮಂದಿಯನ್ನು ನಾಮ ನಿರ್ದೇಶನ ಮಾಡಿ, ಮತದಾನದ ಹಕ್ಕು ನೀಡಿತ್ತು. ಈ 35-40 ಮತಗಳ ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 200 ಮತಗಳು ನಮಗೆ ಇರಲಿಲ್ಲ ಎಂದು ವಿವರಿಸಿದರು.

2013ರಲ್ಲಿಯೇ ಮಂಜೇಗೌಡರಿಗೆ ಟಿಕೆಟ್‌ ಕೊಡಬೇಕಾಗಿತ್ತು. ಆದರೆ, ಪಕ್ಷದ ಹಿಂದಿನ ಶಾಸಕರು ಬಂದಿದ್ದರಿಂದ ಅವಕಾಶವಾಗಿರಲಿಲ್ಲ. ಈ ಬಾರಿ ಕಾಂಗ್ರೆಸ್‌ನಿಂದ ಬಂದ ಅವರಿಗೆ ಟಿಕೆಟ್‌ ನೀಡಿದೆವು. ಅವರನ್ನು ಪಕ್ಷದ ಕಾರ್ಯಕರ್ತರು, ನಿಷ್ಠಾವಂತ ಮುಖಂಡರು, ಮತದಾರರು ಗೆಲ್ಲಿಸುವ ಮೂಲಕ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಎತ್ತಿ ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಉಸ್ತುವಾರಿ ಮಂತ್ರಿ ಇಲ್ಲೇ ಇದ್ದರು. ಅವರ ಅಭ್ಯರ್ಥಿ ಆರು ತಿಂಗಳಿಂದ ಪ್ರಚಾರ ಮಾಡಿದ್ದರು. ಆದರೆ, ನಮ್ಮನ್ನು ಗೆಲ್ಲಿಸುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಶಕ್ತಿ ಇನ್ನೂ ಇದೆ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.

Tap to resize

Latest Videos

undefined

ಮಂಜೇಗೌಡ ಕೃತಜ್ಞತೆ: ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮದಿಂದ ಕೇವಲ 15 ದಿನಗಳಲ್ಲಿ ನಾನು ವಿಧಾನ ಪರಿಷತ್‌ ಸದಸ್ಯನಾದೆ. ಇದಕ್ಕಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda), ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy), ಮಾಜಿ ಸಚಿವ ಎಚ್‌.ಡಿ. ರೇವಣ್ಣ (HD Revanna), ಶಾಸಕ ಸಾ.ರಾ. ಮಹೇಶ್‌ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಸಿ.ಎನ್‌.ಮಂಚೇಗೌಡ ಹೇಳಿದರು. ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಕಡೆಗೆ ಗಮನಹರಿಸುತ್ತೇನೆ ಎಂದು ಅವರು ಭರವಸೆ ನೀಡಿದರು. ಜಿ,ಟಿ.ದೇವೇಗೌಡರಿಗಿಂತ (GT Devegowda) ಅವರ ಮನೆಯ ಯುವರಾಜ ಜಿ.ಡಿ. ಹರೀಶ್‌ಗೌಡರು ಉತ್ತಮ. ಜಿಟಿಡಿ ಯಾರನ್ನೂ ಬೆಳೆಸಿಲ್ಲ ಎಂದು ದೂರಿದರು.

ಎಸ್‌ಟಿಎಸ್‌ಗೆ ಎಚ್ಚರಿಕೆ:  ಚುನಾವಣೆ (election) ವೇಳೆ ವೈಯಕ್ತಿಕವಾಗಿ ಆರೋಪ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಾಸ್ತವ ಸಂಗತಿಗಳ ಬಗ್ಗೆ ಅರಿವು ಮೂಡಿಸಲು ಬಯಸುತ್ತೇನೆ. ಆದರೂ ಟೀಕೆ ಮುಂದುವರೆಸಿದಲ್ಲಿ ನಾನು ಕೂಡ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೆದ್ದ ಕಾಂಗ್ರೆಸ್‌ - ಜೆಡಿಎಸ್  : ಉಭಯ ಜಿಲ್ಲೆಗಳ 15 ವಿಧಾನಸಭಾ (Assembly) ಕ್ಷೇತ್ರಗಳ ಪೈಕಿ ಕಾಂಗೆಸ್‌-6, ಬಿಜೆಪಿ-5, ಜೆಡಿಎಸ್‌-4 ಶಾಸಕರನ್ನು ಹೊಂದಿದೆ. ಇಬ್ಬರು ಸಂಸದರು ಕೂಡ ಬಿಜೆಪಿಗೆ (BJP) ಸೇರಿದವರು. ಇದಲ್ಲದೇ ಜೆಡಿಎಸ್‌-3, ಬಿಜೆಪಿ-1, ಕಾಂಗ್ರೆಸ್‌-1 ವಿಧಾನ ಪರಿಷತ್‌ ಸದಸ್ಯರನ್ನು ಹೊಂದಿತ್ತು. ಈ ಬಾರಿ ಜಿಲ್ಲಾ ಹಾಗೂ ತಾಪಂ ಸದಸ್ಯರಿಲ್ಲ. ಆದರೆ ಉಭಯ ಜಿಲ್ಲೆಗಳಲ್ಲೂ ಕಾಂಗ್ರೆಸ್‌ಗೆ ಭದ್ರ ನೆಲೆ ಇದೆ. ಆಯ್ಕೆಯಾಗಿರುವ ಗ್ರಾಪಂ ಸದಸ್ಯರಲ್ಲಿ ಕಾಂಗ್ರೆಸ್‌ನವರೇ ಹೆಚ್ಚು. ಹೀಗಾಗಿ ಆ ಪಕ್ಷಕ್ಕೆ ಗೆಲುವು ಸುಲಭವಾಗಿತ್ತು. ಆದರೂ ಸ್ವತಃ ಸಿದ್ದರಾಮಯ್ಯ ಅವರೇ ಉಭಯ ಜಿಲ್ಲೆಗಳ ಎಲ್ಲಾ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರ, ಮುಖಂಡರ ಸಭೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ, ಮಾಜಿ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ತನ್ವೀರ್‌ ಸೇಠ್‌, ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಆರ್‌. ನರೇಂದ್ರ, ಎಚ್‌.ಪಿ. ಮಂಜುನಾಥ್‌, ಅನಿಲ್‌ ಚಿಕ್ಕಮಾದು, ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್‌, ವಾಸು, ಕಳಲೆ ಕೇಶಮೂರ್ತಿ, ಎಸ್‌. ಬಾಲರಾಜ್‌, ಎಸ್‌, ಜಯಣ್ಣ, ಎ.ಆರ್‌. ಕೃಷ್ಣಮೂರ್ತಿ, ಮುಖಂಡರಾದ ಡಿ. ರವಿಶಂಕರ್‌, ಸುನೀಲ್‌ ಬೋಸ್‌, ಎಚ್‌.ಎಂ. ಗಣೇಶ್‌ ಪ್ರಸಾದ್‌ ಸೇರಿದಂತೆ ಮುಖಂಡರು, ಪದಾಧಿಕಾರಿಗಳು ಸಾಥ್‌ ನೀಡಿದ್ದರು.

ಮೂರೂವರೆ ಸಾವಿರ ಚುನಾಯಿತ ಪ್ರತಿನಿಧಿಗಳು ಇದ್ದಾರೆ ಎಂದು ಹೇಳಿಕೊಂಡಿದ್ದ ಕಾಂಗ್ರೆಸ್‌ ಸುಲಭವಾಗಿ ಗೆಲ್ಲುವುದು ಖಚಿತವಾಗಿತ್ತು. ಆದರೆ ಅದಕ್ಕಾಗಿ ಇತರೆ ಪಕ್ಷಗಳ ಜೊತೆ ಪೈಪೋಟಿಗೆ ಬಿದ್ದು ಹಣವನ್ನು ಕೂಡ ಹಂಚಬೇಕಾಯಿತು.

ಈ ಕ್ಷೇತ್ರದಲ್ಲಿ ಹಿಂದಿನ ಜನತಾ ಪರಿವಾರ (JDS), ಈಗ ಅದರ ಪ್ರಾತಿನಿಧಿಕ ಸ್ವರೂಪವಾದ ಜೆಡಿಎಸ್‌ ಯಾವತ್ತೂ ಸೋತಿಲ್ಲ. ಹೀಗಾಗಿ ಆ ಪಕ್ಷಕ್ಕೂ ಗೆಲ್ಲುವುದು ಮುಖ್ಯವಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಶಾಸಕರಾದ ಸಾ.ರಾ. ಮಹೇಶ್‌, ಕೆ. ಮಹದೇವ್‌, ಎಂ. ಅಶ್ವಿನ್‌ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕರಾದ ಚಿಕ್ಕಣ್ಣ, ಮುಖಂಡರು, ಪಕ್ಷದ ಪದಾಧಿಕಾರಿಗಳು ಪ್ರಚಾರ ನಡೆಸಿದ್ದರು. ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್‌ಗೆ ನೆಲೆ ಇದೆ. ಜೆಡಿಎಸ್‌ನಿಂದ ದೂರವಿರುವ ಜಿ.ಟಿ. ದೇವೇಗೌಡರು ಚಾಮುಂಡೇಶ್ವರಿ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಬಳಸಿ, ತಮ್ಮ ಬೆಂಬಲಿಗರ ಮತಗಳು ಜೆಡಿಎಸ್‌ಗೆ ಹೋಗದಂತೆ ನೋಡಿಕೊಂಡರು. ಇದಲ್ಲದೇ ವಿಧಾನ ಪರಿಷತ್‌ ಸದಸ್ಯರಾದ ಸಂದೇಶ್‌ ನಾಗರಾಜ್‌ ಅವರು ಕೂಡ ಪಕ್ಷದ ವಿರುದ್ಧವಾಗಿದ್ದರು. ಜೆಡಿಎಸ್‌ ಅತಿ ಹೆಚ್ಚು ಹಣವನ್ನು ವ್ಯಯ ಮಾಡಿದರೂ ಗೆಲ್ಲಲು ಕೊನೆಕ್ಷಣದವರೆಗೂ ತಿಣುಕಾಡಬೇಕಾಯಿತು. ಆದರೆ ಸಾ.ರಾ. ಮಹೇಶ್‌ (SA RA Mahesh) ಒಂದು ರೀತಿಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ, ಗೆಲುವು ಕೈತಪ್ಪಿ ಹೋಗದಂತೆ ನೋಡಿಕೊಂಡು, ಪಕ್ಷದ ಮಾನ ಉಳಿಸಲು ಹಗಲುರಾತ್ರಿ ಶ್ರಮಿಸಿದ್ದು ಫಲ ನೀಡಿದೆ.

click me!