4 ವರ್ಷದಲ್ಲಿ ಹೊಸ ಸಾ.ರಾ. ಮಹೇಶ್‌ ಸೃಷ್ಟಿಸಲು ಆಗೋಲ್ಲ

By Kannadaprabha NewsFirst Published Sep 18, 2019, 8:56 AM IST
Highlights

ವಸತಿ ಸಚಿವ ವಿ ಸೋಮಣ್ಣ ಜೆಡಿಎಸ್ ಶಾಸಕರ ಬಗ್ಗೆ ಮಾತನಾಡಿದ್ದು, ಇವರೆಲ್ಲಾ ನನ್ನ ಸ್ನೇಹಿತರು ಎಂದಿದ್ದಾರೆ.ಅಲ್ಲದೇ ಈ ವೇಳೆ ಸಾರಾ ಮಹೇಶ್ ಬಗ್ಗೆಯೂ ಕೂಡ ಪ್ರಸ್ತಾಪ ಮಾಡಿದ್ದಾರೆ. 

ಮೈಸೂರು [ಸೆ.18]: ಶಾಸಕ ಜಿ.ಟಿ. ದೇವೇಗೌಡರು ಹಳೆಯ ಸ್ನೇಹಿತರು. ಶಾಸಕ ಸಾ.ರಾ. ಮಹೇಶ್‌ ಸಹ ನನ್ನ ಸ್ನೇಹಿತ, ಆತ್ಮೀಯ. ದಸರಾ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳದಿದ್ದರೆ ಬೇಡ. ಅವರು ಬರದಿದ್ದರೆ ತೊಂದರೆ ಇಲ್ಲ. ಇನ್ನು 4 ವರ್ಷ ಹೊಸ ಸಾ.ರಾ. ಮಹೇಶ್‌ ಸೃಷ್ಟಿಸಲು ಆಗುವುದಿಲ್ಲ. ಇನ್ನು 4 ವರ್ಷ ಇದೆ ಆಮೇಲೆ ನೋಡೋಣ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಮಂಗಳವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಾ.ರಾ. ಮಹೇಶ್‌ ನನ್ನ ಸಹೋದರ ಇದ್ದಂಗೆ. ಅವರು ಮೂರು ಬಾರಿ ಗೆದ್ದಿದ್ದಾರೆ. ಇನ್ನು 2 ಬಾರಿ ಗೆಲ್ಲಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ಪಾಪ ಅವರಿಗೆ ನನ್ನೊಂದಿಗೆ ವೇದಿಕೆ ಹಂಚಿಕೊಳ್ಳಲು ದಿಗಿಲು ಇದೆ. ಅವರು ಒಳ್ಳೆಯರು, ಅವರಿಗೆ ಒಳ್ಳೆ ಸಂಸ್ಕಾರ ಇದೆ, ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನಾನು ಮೂರು ಪಕ್ಷದಲ್ಲಿ ಇದ್ದವನು. ಇದು ಅನೂಕೂಲವು ಹೌದು, ಅನನುಕೂಲವೂ ಹೌದು. ಯಾರು ಯಾರು ಎಲ್ಲೆಲ್ಲಿ ಚಕ್‌ ಇಡುತ್ತಾರೆ ನನಗೆ ಗೊತ್ತಾಗೊಲ್ಲ. ಮೂರು ಪಕ್ಷದವರನ್ನೂ ಮ್ಯಾನೇಜ್‌ ಮಾಡುತ್ತಿದ್ದೇನೆ. ಅದೇ ಈ ಸೋಮಣ್ಣ. ಅನುಭವದಲ್ಲಿ ಎಲ್ಲವನ್ನೂ ನಿಭಾಯಿಸುತ್ತೇನೆ ಎಂದು ಅವರು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಕುಟುಂಬದವರೇ. ಈಗಾಗಲೇ ಅವರನ್ನು ದಸರೆಗೆ ಆಹ್ವಾನಿಸಲು ಸಂಪರ್ಕಿಸಿ ಮಾತನಾಡಿದ್ದೇನೆ. ದಸರಾ ಚೆನ್ನಾಗಿ ಮಾಡುತ್ತಿದ್ದೀಯಾ ಮಾಡಪ್ಪ ಎಂದಿದ್ದಾರೆ. ಆದರೆ, ಭೇಟಿಗೆ ಅವಕಾಶ ಸಿಕ್ಕಿಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ಒಂದೇ ಪಕ್ಷದಲ್ಲಿ ಇದ್ದವರು. ಅವರು ಅದೃಷ್ಟದಿಂದ 5 ವರ್ಷ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ಉಳ್ಳವರು. 13 ಬಾರಿ ಬಜೆಟ್‌ ಮಂಡಿಸಿದ ಅನುಭವ ಉಳ್ಳವರು. ಅವರನ್ನೂ ದಸರೆಗೆ ಆಹ್ವಾನಿಸಲಾಗುವುದು ಎಂದು ಸೋಮಣ್ಣ ಪುನರುಚ್ಚರಿಸಿದರು.

ಒಂದೇ ಕುಟುಂಬ ಅಂದ ಮೇಲೆ ಒಬ್ಬರ ಮೇಲೆ ಪ್ರೀತಿ ಜಾಸ್ತಿ ಇರುತ್ತೆ. ಹಾಗೇನೇ ಶಾಸಕ ಜಿ.ಟಿ. ದೇವೇಗೌಡರ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ ಇದೆ. ಅವರು ನನ್ನ ಹಳೆಯ ಸ್ನೇಹಿತರು. ದಸರಾ ಮಾಡುವಾಗ ನಾವೆಲ್ಲ ಒಂದೆ ಕುಟುಂಬ ಇದ್ದಂತೆ. ಹೀಗಾಗಿ, ಕುಟುಂಬ ಅಂದ ಮೇಲೆ ಒಬ್ಬರ ಮೇಲೆ ಜಾಸ್ತಿ ಇದ್ದೆ ಇರುತ್ತದೆ. ಹಾಗೇ ಜಿ.ಟಿ. ದೇವೇಗೌಡರ ಮೇಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

click me!