
ಕೆ.ಆರ್. ನಗರ [ಸೆ.18]: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ಸೆ.21 ಮತ್ತು 22 ರಂದು ಕಾವೇರಿ ಜಲಪಾತೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಸ್ಥಳ ಪರಿಶೀಲನೆ ನಡೆಸಿದರು.
ಕಾರ್ಯಕ್ರಮ ನಡೆಯುವ ಎರಡು ದಿನಗಳು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಯಾವುದೇ ಲೋಪವಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಸಮರ್ಪಕವಾಗಿ ಆಸನದ ವ್ಯವಸ್ಥೆ ಮಾಡುವುದರ ಜತೆಗೆ ದೀಪಾಲಂಕಾರ, ಕುಡಿಯುವ ನೀರು, ಸಾರಿಗೆ, ಸ್ವಚ್ಛತೆ ಮತ್ತು ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಲಪಾತೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದಲ್ಲದೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಆಗಮಿಸಲಿದ್ದು, ಈ ಸಂದರ್ಭದಲ್ಲಿ ವಾಹನ ಮತ್ತು ಜನರ ನಿಯಂತ್ರಣಕ್ಕೆ ಪೊಲೀಸರು ಮುಂಜಾಗೃತ ಕ್ರಮ ಕೈಗೊಳ್ಳಬೇಕು. ನಾಳೆಯಿಂದಲೇ ನಿತ್ಯ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಪೊಲೀಸರಿಗೆ ತಾಕೀತು ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾತನಾಡಿ, ಸೆ.21ರ ಸಂಜೆ 6ಕ್ಕೆ ಚುಂಚನಕಟ್ಟೆಯ ಶ್ರೀರಾಮದೇವಾಲಯದ ಹಿಂಭಾಗ ನೂತನವಾಗಿ ನಿರ್ಮಾಣ ಮಾಡಿರುವ ಜಲಪಾತೋತ್ಸವ ಕಾರ್ಯಕ್ರಮದ ಶಾಶ್ವತ ವೇದಿಕೆಯಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಶಾಸಕ ಸಾ.ರಾ. ಮಹೇಶ್, ಚಿತ್ರ ನಟ ಲೂಸ್ ಮಾದ ಯೋಗಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮ ನಡೆಸಲು ಶಾಸಕ ಸಾ.ರಾ. ಮಹೇಶ್ ಅವರ ಮನವಿಯನ್ನು ಪರಿಗಣಿಸಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಸರ್ಕಾರದಿಂದ . 50 ಲಕ್ಷ ಹಣ ಮಂಜೂರು ಮಾಡಿದ್ದು, ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಕಾವೇರಿ ನದಿಯ ಧನುಷ್ಕೋಟಿ ಜಲಪಾತಕ್ಕೆ ಲೇಸರ್ ಲೈಟ್ ಸೇರಿದಂತೆ ಇತರ ಅಲಂಕಾರ ಮಾಡಲಿದ್ದು ಇದರ ಜತೆಗೆ ಚಲನ ಚಿತ್ರ, ಕಿರುತೆರೆ ಮತ್ತು ವಿವಿಧ ಕಲಾವಿದರು ಹತ್ತಾರು ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಅವರು ವಿವರಿಸಿದರು.
ಕುಪ್ಪೆ ಗ್ರಾಪಂ ಅಧ್ಯಕ್ಷೆ ಪ್ರೇಮಕುಮಾರ್, ಹುಣಸೂರು ಉಪ ವಿಭಾಗಾಧಿಕಾರಿ ವೀಣಾ, ತಾಪಂ ಇಒ ಗಿರೀಶ್, ಲೋಕೋಪಯೋಗಿ ಇಇ ಕಿಶೋರ್‌ಚಂದ್ರ, ಎಇಇ ಅರುಣ್ ಕುಮಾರ್, ಎಂಜಿನಿಯರ್‌ಗಳಾದ ಮೋಹನ್, ಶಿವಪ್ಪ, ಸೆಸ್ಕ್ ಎಇಇ ಅರ್ಕೇಶ್‌ಮೂರ್ತಿ, ಅಬಕಾರಿ ಉಪ ನಿರೀಕ್ಷಕಿ ಎಚ್.ಡಿ. ರಮ್ಯ, ತಾಲೂಕು ಆರೋಗ್ಯಾಧಿಕಾರಿ ಮಹೇಂದ್ರಪ್ಪ, ಉಪ ತಹಸೀಲ್ದಾರ್ ಮೋಹನ್ ಮೊದಲಾದವರು ಇದ್ದರು.