'ಮುಂದಿನ ಚುನಾವಣೆಯಲ್ಲಿ ನಾನು ಗೆಲ್ಲೋದು ಕನ್ಫರ್ಮ್'

By Kannadaprabha NewsFirst Published Dec 13, 2020, 3:58 PM IST
Highlights

ಮುಂದಿನ ಚುನಾವಣೆಯಲ್ಲಿ  ನಾನು ಗೆಲ್ಲೋದು ಕನ್ಫರ್ಮ್ ಎಂದು ಜೆಡಿಎಸ್ ಮುಖಂಡರೋರ್ವರು ಹೇಳಿದ್ದಾರೆ. ಇನ್ನು ತಮ್ಮ ಮುನಿಸನ್ನು ಮರೆತು ಒಂದೇ ವೇದಿಕೆಯಲ್ಲಿ ಮತ್ತೋರ್ವ ಮುಖಂಡರೊಂದಿಗೆ ಕುಳಿತಿದ್ದರು 

ಮಂಡ್ಯ (ಡಿ.13):  ಕಳೆದೊಂದು ತಿಂಗಳ ಹಿಂದಷ್ಟೇ ಹಾವು-ಮುಂಗುಸಿಯಂತೆ ಕಾದಾಟಕ್ಕಿಳಿದಿದ್ದ ನಾಗಮಂಗಲ ಶಾಸಕ ಕೆ.ಸುರೇಶ್‌ಗೌಡ ಹಾಗೂ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಗ್ರಾಪಂ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಅಕ್ಕ-ಪಕ್ಕ ಕುಳಿತು ಭಿನ್ನಮತದ ನಡುವೆಯೂ ಒಗ್ಗಟ್ಟು ಪ್ರದರ್ಶಿಸಿದರು. ಇದು ಕಾರ್ಯಕರ್ತರಲ್ಲಿ ಅಚ್ಚರಿ ಹಾಗೂ ಜನರಲ್ಲಿ ಕುತೂಹಲ ಮೂಡಿಸಿತ್ತು.

ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ನೆಲ್ಲೀಗೆರೆ, ಚುಂಚನಹಳ್ಳಿ, ದೇವಿಹಳ್ಳಿ, ಲಾಳನಕೆರೆ, ಕದಬಹಳ್ಳಿ ಹಾಗೂ ತಿಟ್ಟಣ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಗ್ರಾಪಂ ಚುನಾವಣಾ ಸಂಬಂಧದ ಪೂರ್ವಭಾವಿ ಸಭೆಯಲ್ಲಿ ಜೊತೆ ಜೊತೆಯಾಗಿ ಭಾಗವಹಿಸಿದ್ದು ಎಲ್ಲರ ಗಮನಸೆಳೆಯಿತು.

ಎಚ್‌ಡಿಕೆ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕನ ಮನೆಗೆ ಡಿಕೆಶಿ: ಸಂಧಾನ ಯತ್ನ

ಎಲ್‌ಆರ್‌ಎಸ್‌ ಸವಾಲು:

ವಿಧಾನಸಭಾ ಚುನಾವಣೆ ಎರಡೂವರೆ ವರ್ಷವಿರುವಾಗಲೇ ಕ್ಷೇತ್ರದ ಜನರ ವಿಶ್ವಾಸ ಸಂಪಾದಿಸಲು ಪ್ರತ್ಯೇಕವಾಗಿ ಕ್ಷೇತ್ರ ಪ್ರವಾಸ ಆರಂಭಿಸಿದ್ದ ಎಲ್‌.ಆರ್‌.ಶಿವರಾಮೇಗೌಡರು ನಾಗಮಂಗಲ ಕ್ಷೇತ್ರದ ಮುಂದಿನ ಅಭ್ಯರ್ಥಿ ನಾನೇ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಅಲ್ಲದೆ, 2023ರ ಚುನಾವಣೆಯಲ್ಲಿ ನಾನು ವಿಧಾನಸಭೆ ಪ್ರವೇಶಿಸುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ ಎಂದು ಸವಾಲು ಹಾಕಿದ್ದರಲ್ಲದೆ, ಕೆ.ಸುರೇಶ್‌ಗೌಡ ಶಾಸಕರಲ್ಲ, ಅವರೊಬ್ಬ ಕಂಟ್ರ್ಯಾಕ್ಟರ್‌ ಎಂದೂ ಟೀಕಿಸಿದ್ದರು.

ಸುರೇಶ್‌ಗೌಡ ಮೇಲುಗೈ:

ಕೆ.ಸುರೇಶ್‌ಗೌಡರು ಜೆಡಿಎಸ್‌ ಶಾಸಕ ಎನ್ನುವುದನ್ನು ಮರೆತು ಅವರ ವಿರುದ್ಧ ನಿರಂತರವಾಗಿ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದರು. ಶಿವರಾಮೇಗೌಡರ ಟೀಕಾಸ್ತ್ರಗಳಿಗೆ ಶಾಸಕ ಕೆ.ಸುರೇಶ್‌ಗೌಡ ಬ್ರಹ್ಮಾಸ್ತ್ರ ಪ್ರಯೋಗಿಸದೆ ಬೀದಿಯಲ್ಲಿ ನಿಂತು ಮಾತನಾಡುವವರಿಗೆ ನಾನು ಉತ್ತರ ಕೊಡುವುದಿಲ್ಲ ಎಂದಷ್ಟೇ ಹೇಳುವುದರ ಜೊತೆಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರಿಂದ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ನಾನೇ ಎಂದು ಘೋಷಿಸಿಕೊಂಡು ಎಲ್‌ಆರ್‌ಎಸ್‌ ವಿರುದ್ಧ ಮೇಲುಗೈ ಸಾಧಿಸಿದ್ದರು.

ಮೇಲ್ನೋಟದ ಒಗ್ಗಟ್ಟು:

ನಾಗಮಂಗಲ ಕ್ಷೇತ್ರದಲ್ಲಿ ಪಕ್ಷದೊಳಗೆ ನಡೆದಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಂತೆ ಕಂಡುಬಂದಿರುವ ವರಿಷ್ಠರು ಇಬ್ಬರೂ ನಾಯಕರಿಗೆ ಬುದ್ಧಿವಾದ ಹೇಳಿರುವ ಸಾಧ್ಯತೆಗಳಿವೆ. ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಹಾಲಿ-ಮಾಜಿ ಶಾಸಕರಿಗೆ ಸೂಚಿಸಿದ್ದಾರೆನ್ನಲಾಗಿದ್ದು, ಪಕ್ಷದೊಳಗಿನ ನಾಯಕರ ಭಿನ್ನಮತ ಮುಂದೆ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಸೃಷ್ಟಿಮಾಡಿಕೊಡಬಹುದೆಂಬ ಆತಂಕವಿದೆ. ಇದನ್ನು ಮನಗಂಡು ವರಿಷ್ಠರು ಒಟ್ಟಾಗಿ ಚುನಾವಣಾ ಸಭೆಗಳನ್ನು ನಡೆಸುವಂತೆ ನಿರ್ದೇಶಿಸಿರುವ ಮೇರೆಗೆ ಹಾಲಿ-ಮಾಜಿ ಶಾಸಕರು ತಮ್ಮ ಆಂತರಿಕ ಭಿನ್ನಮತವನ್ನು ತಾತ್ಕಾಲಿಕವಾಗಿ ಬದಿಗಿಟ್ಟು ಜನರೆದುರು ಮೇಲ್ನೋಟದ ಒಗ್ಗಟ್ಟು ಪ್ರದರ್ಶಿಸುತ್ತಿರಬಹುದೇ ಎಂಬ ಅನುಮಾನಗಳೂ ಕಾಡುತ್ತಿವೆ.

ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಕೇಂದ್ರೀಕರಿಸಿಕೊಂಡಿರುವ ಶಿವರಾಮೇಗೌಡರು ಗ್ರಾಪಂ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರಿಗೆ ಹತ್ತಿರವಾಗುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ. ಇದರೊಂದಿಗೆ ಕ್ಷೇತ್ರ ಪ್ರವಾಸವನ್ನೂ ಪೂರೈಸಿದಂತಾಗಬಹುದೆಂಬ ದೂರದೃಷ್ಟಿಯ ಲೆಕ್ಕಾಚಾರವೂ ಇದ್ದಂತಿದೆ.

ಜೆಡಿಎಸ್‌ ನಾಯಕರೊಳಗೆ ಪರಸ್ಪರ ಏನೇ ಭಿನ್ನಾಭಿಪ್ರಾಯಗಳಿದ್ದರೂ ಗ್ರಾಪಂ ಚುನಾವಣೆ ಕಾರಣದಿಂದ ಭಿನ್ನಮತ ತಾತ್ಕಾಲಿಕವಾಗಿ ಶಮನಗೊಂಡಂತೆ ಕಾಣುತ್ತಿದೆ. ಅದು ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಅದು ಮತ್ತೆ ಯಾವಾಗ ಸ್ಫೋಟಗೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

click me!