ಕೋಲಾರ (ಅ.04): ಕೋಲಾರ (Kolar) ಶಾಸಕ ಕೆ.ಶ್ರೀನಿವಾಸಗೌಡರು (K Shrinivas Gowda) ಸತ್ತ ಹಾವಿನಂತಿದ್ದು ಅವರು ಜೆಡಿಎಸ್ (JDS) ಬಿಡುವುದರಿಂದ ನಮ್ಮ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಕಿಡಿಕಾರಿದರು.
ನಗರದ ತಮ್ಮ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರಂತೆ. ಶಾಸಕರು ಪಕ್ಷ ಬಿಟ್ಟು ಹೋಗಲು ನೆಪ ಹುಡುಕಿಕೊಂಡಿದ್ದಾರೆ. ಅವರಿಗೆ ಟಿಕೆಟ್ ಕೊಡಿಸುವ ವಿಷಯದಲ್ಲಿ ನಾನು ಘೋರ ತಪ್ಪು ಮಾಡಿದ್ದೇನೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದರು.
undefined
ಕಾಂಗ್ರೆಸ್‌ಗೆ ದುರಂತ ಕಟ್ಟಿಟ್ಟಬುತ್ತಿ
ಶ್ರೀನಿವಾಸಗೌಡರು ಯಾರನ್ನೂ ಬೆಳೆಸಿಲ್ಲ. ಕೇವಲ ಮೂರು ಗ್ರಹಗಳನ್ನು ಮಾತ್ರವೇ ಬೆಳೆಸಿದ್ದಾರೆ. ಈಗ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆಯಿಲ್ಲ. ಅತ್ತ ಸ್ವರ್ಗಕ್ಕೂ ಹೋಗಲಾರದೆ, ನರಕಕ್ಕೂ ಹೋಗಲಾರದೆ ಅಂತರ್ ಪಿಶಾಚಿಯಾಗಿದ್ದು, ಹಾಗೆಯೇ ಇರಲಿ. ಅವರು ಹೋದರೆ ನಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ. ಆದರೆ, ಕಾಂಗ್ರೆಸ್‌ಗೆ ಮಾತ್ರ ದುರಂತ ಮಾತ್ರ ಕಟ್ಟಿಟ್ಟಬುತ್ತಿ ಎಂದು ಲೇವಡಿ ಮಾಡಿದರು.
ನಾನು ಕಾಂಗ್ರೆಸ್ ಸೇರುವುದು ಖಚಿತ : ಜೆಡಿಎಸ್ ಶಾಸಕರಿಂದಲೇ ಕನ್ಫರ್ಮ್
ಕೆಸಿ ವ್ಯಾಲಿಯಿಂದ ಬೆಳೆಗಳು ಹಾಳು
ಕೆಸಿ ವ್ಯಾಲಿ (KC Vally) ನೀರಿನಿಂದ ನಮ್ಮ ಜಿಲ್ಲೆಯಲ್ಲಿ ಬೆಳೆದ ಟೊಮೆಟೋ, ರೇಷ್ಮೆ ಬೆಳೆಗೆ ಹಳದಿ ಕಾಮಾಲೆ ರೋಗ ಬಂದಿದೆ. ಹೀಗೆಯೇ ಮುಂದುವರೆದರೆ ರೈತರ ಗತಿಯೇನು ಎಂದು ಕೆಸಿವ್ಯಾಲಿ ನೀರನ್ನು ಎಚ್ಡಿಕೆ (HD Kumaraswamy) ಕೊಚ್ಚೆ ನೀರು ಅಂದಿರುವುದು ಸತ್ಯ. ನಾನೂ ಹೇಳುತ್ತಿದ್ದೇನೆ ಅದು ಕೊಚ್ಚೇ ನೀರು ಎಂದರು.
ದಿನವೂ ಕೆಸಿ ವ್ಯಾಲಿ ನೀರು ಕುಡಿಯಲಿ
ಮಾತಿಗೆ ಮೊದಲು ನಾನು ಕೆಸಿವ್ಯಾಲಿ ನೀರು ಕುಡಿದಿದ್ದೇನೆ. ನನಗೇನಾಗಿದೆ, ನಾನು ಸತ್ತು ಹೋಗಿದ್ದೀನಾ ಎಂದು ಮಾತನಾಡುವ ಶಾಸಕರ ನಿವಾಸಕ್ಕೆ ಪ್ರತಿದಿನವೂ ನನ್ನ ಸ್ವಂತ ಖರ್ಚಿನಲ್ಲಿ ಒಂದೊಂದು ಟ್ಯಾಂಕರ್‌ನಲ್ಲಿ ಕೆಸಿವ್ಯಾಲಿ ನೀರು ಪೂರೈಕೆ ಮಾಡುತ್ತೇನೆ. ಅದನ್ನೇ ಕುಡಿದು, ಬಳಸಿ ತೋರಿಸಲಿ ಎಂದೂ ಸವಾಲು ಹಾಕಿದರು.
ತಮ್ಮ ಮಾತಿನ ಉದ್ಧಕ್ಕೂ ಶಾಸಕ ಕೆ.ಶ್ರೀನಿವಾಸಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಇಂಚರ ಗೋವಿಂದರಾಜು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ವಿರುದ್ಧವೂ ಕಿಡಿಕಾರಿದರು. ಅಂದು 17 ಶಾಸಕರು ಬಿಜೆಪಿಗೆ ಸೇರ್ಪಡೆಯಾದಾಗ ಅವರನ್ನು ಪಕ್ಷ ದ್ರೋಹಿಗಳು ಎಂದಿದ್ದ ರಮೇಶ್‌ಕುಮಾರ್ ಈಗ ಕೆ.ಶ್ರೀನಿವಾಸಗೌಡರು ಮಾಡುತ್ತಿರುವುದು ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದರು.
ಎತ್ತಿನ ಹೊಳೆ ಯೋಜನೆಯಲ್ಲಿ ಅವ್ಯವಹಾರ
ಎತ್ತಿನಹೊಳೆ ಯೋಜನೆಗೆ (Attinahole project) 9 ಸಾವಿರ ಕೋಟಿರೂ ವೆಚ್ಚ ಇದ್ದದ್ದು ಇದೀಗ 22 ಸಾವಿರ ಕೋಟಿಗೆ ಬಂದಿದೆ. ಯೋಜನೆಯು ವಿಳಂಬವಾಗಿರುವುದಲ್ಲದೆ ಅವ್ಯವಹಾರ ಆಗಿರುವುದಂತೂ ಸತ್ಯ. ಈ ಬಗ್ಗೆಯೂ ನಮ್ಮ ವರಿಷ್ಠರಿಂದ ಸಿಎಂಗೂ ಮನವಿ ಸಲ್ಲಿಸಿ, ಯೋಜನೆಯಲ್ಲಿನ ತೊಡಕುಗಳನ್ನು ಬಗೆಹರಿಸಿ ಶೀಘ್ರ ನೀರು ಹರಿಸುವಂತೆ ಮನವಿ ಮಾಡಿದರು.
ಎಚ್ಡಿಕೆ ಸಿಎಂ ಆಗಿದ್ದಾಗ ಸಹಕಾರಿ ಸಂಸ್ಥೆಗಳಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ 260 ಕೋಟಿರೂ ಸಾಲ ಮನ್ನಾ ಮಾಡಿದ್ದಾರೆ. ನಗರದಲ್ಲಿ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ರು.ಗಳನ್ನು ನೀಡುವುದಾಗಿ ಸಚಿವರು ಭರವಸೆ ನೀಡಿದ್ದು, ಎಚ್ಡಿಕೆ ಸಹ ನಮಗೆ ಬೆಂಬಲ ನೀಡಿರುವುದಾಗಿ ತಿಳಿಸಿದರು.
ನೀರಾವರಿ ಯೋಜನೆಗೆ ವಿರೋಧಿಸಿಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅಪಾರ ಅನುಭವವುಳ್ಳ ರಾಜಕಾರಣಿ.ಎಚ್.ಡಿ.ದೇವೆಡಗೌಡ, ಎಚ್.ಡಿ.ಕುಮಾರಸ್ವಾಮಿರನ್ನು ಮಣ್ಣಿನ ಮಕ್ಕಳು ಎಂದಿರುವುದು ಸ್ವಾಗತಾರ್ಹ. ಆದರೆ, ನೀರಾವರಿ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿರುವುದು ಅಪ್ಪಟ ಸುಳ್ಳು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮೂರನೇ ಹಂತದ ಶುದ್ದೀಕರಣ ಘಟಕ ನೀಡುವುದಾಗಿಯೂ ತಿಳಿಸಿದ್ದಾರೆ. ಕಲುಷಿತ ನೀರಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿ 2 ಹಂತದ ಬದಲಿಗೆ 3 ಹಂತದಲ್ಲಿ ಶುದ್ಧೀಕರಿಸಿ ನೀಡುವಂತೆ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಜೆಡಿಎಸ್ ಮುಖಂಡರಾದ ಮಲ್ಲೇಶ್ ಬಾಬು, ಬಣಕನಹಳ್ಳಿ ನಟರಾಜ್, ವಡಗೂರು ರಾಮು,ಪೆರ್ಜೇನಹಳ್ಳಿ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.