ರಾಮನಗರ (ಆ.17): ವರ್ಚಸ್ಸು ನಶಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಳು ಕೊರೋನಾ ನಡುವೆಯೂ ರಾಜ್ಯ ಪ್ರವಾಸ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ಮತ್ತು ಕಾಂಗ್ರೆಸ್ ಪ್ರತಿನಿಧಿಗಳ ಸಮಾವೇಶಗಳ ಕುರಿತು ವ್ಯಂಗ್ಯವಾಡಿದರು. ಕೇಂದ್ರ ಸಚಿವರು ಕೋವಿಡ್ ನಡುವೆಯೂ 280 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲು ಮುಂದಾಗುತ್ತಿದ್ದಾರೆ. ಈ ಪ್ರವಾಸದಿಂದ ಏನು ಪ್ರಯೋಜನಕ್ಕೆ ಬರುವುದಿಲ್ಲ. ಜನರ ಕಷ್ಟಗಳನ್ನು ನೋಡಿ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಬೇಕು ಎಂದರು.
ಮುಂದಿನ ಚುನಾವಣೆಗೆ ಜೆಡಿಎಸ್ ಮಿಷನ್-123: ಎಚ್ ಡಿ ಕುಮಾರಸ್ವಾಮಿ
ಇನ್ನು ಜಾತಿ ಜನಗಣತಿ ವರದಿಯನ್ನು ಕುಮಾರಸ್ವಾಮಿ ಅವರು ಸ್ವೀಕಾರ ಮಾಡಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನಗೆ ಯಾರು ವರದಿಯನ್ನು ಕೊಡಲಿಲ್ಲ ಎಂದರು. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರೇ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಜಾತಿ ಜನಗಣತಿ ವರದಿ ಬಗ್ಗೆ ನನ್ನ ಜೊತೆಗೆ ಚರ್ಚೆ ಮಾಡಿರಲಿಲ್ಲ ಎಂದರು.