ಬೆಳಗಾವಿ (ಆ.17): ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದರು.
ನಗರದ ಧರ್ಮನಾಥ ಭವನದಲ್ಲಿ ಸೋಮವಾರ ಬೆಳಗಾವಿ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಒಂದು ವರ್ಷದ ಹಿಂದೆಯೇ ಬೆಳಗಾವಿಗೆ ಬಂದ ವೇಳೆಯೇ ಬೆಳಗಾವಿ ಪಾಲಿಕೆ ಚುನಾವಣೆಗೆ ಬಿಜೆಪಿ ಚಿಹ್ನೆಯ ಆಧಾರದ ಮೇಲೆ ಸ್ಪರ್ಧಿ ಮಾಡಬೇಕು ಎನ್ನುವ ಮಾತುಗಳು ಕೇಳಿಬಂದಿದ್ದವು. ಅದರಂತೆಯೇ ಈಗ ಪಕ್ಷದ ಚಿಹ್ನೆಯಡಿ ಚುನಾವಣೆ ಎದುರಿಸಲಾಗುತ್ತಿದೆ. ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡುವ ನಿರ್ಧಾರ ನಾಯಕರದ್ದಲ್ಲ. ಕಾರ್ಯಕರ್ತರದ್ದಾಗಿದೆ. ಈ ಚುನಾವಣೆ ನಾಯಕರ ಚುನಾವಣೆಯಲ್ಲ. ಬೆಳಗಾವಿ ಕಾರ್ಯಕರ್ತರ ಚುನಾವಣೆಯಾಗಿದ್ದು, ಈ ಚುನಾವಣೆಯನ್ನು ಬಿಜೆಪಿ ಸವಾಲ್ ಆಗಿ ಸ್ವೀಕರಿಸಿದೆ ಎಂದರು.
ಸ್ವಾತಂತ್ರ್ಯ ರಥ ಯಾತ್ರೆಗೆ SDPI ಅಡ್ಡಿ ಪ್ರಕರಣ; ನಳೀನ್ ಕುಮಾರ್ ಕಟೀಲ್ ಆಕ್ರೋಶ!
ಮಂಗಳೂರು ಮತ್ತು ಬೆಳಗಾವಿಗೆ ಬಹಳ ಸಾಮ್ಯತೆಯಿದೆ. ಮಂಗಳೂರಿನಲ್ಲಿ ಬಿಜೆಪಿ ಅಧಿಕಾರ ಹಿಡಿದಂತೆ ಬೆಳಗಾವಿಯಲ್ಲಿಯೂ ಅಧಿಕಾರ ಹಿಡಿದೇ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸಿಎಂ ಇದ್ದಾಗ ಸ್ಮಾರ್ಟ ಸಿಟಿ ಕೆಲಸಗಳು ನಡೆಯುತ್ತಿರಲಿಲ್ಲ. ಯಡಿಯೂರಪ್ಪ ಸಿಎಂ ಆದ ಬಳಿಕ ಸ್ಮಾರ್ಟ ಸಿಟಿ ಕಾಮಗಾರಿ ವೇಗ ಪಡೆದುಕೊಂಡಿದೆ. ಸುರೇಶ ಅಂಗಡಿ ಸಚಿವರಾಗಿದ್ದಾಗ ಅದ್ಭುತ ಕೆಲಸ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸುರೇಶ ಅಂಗಡಿಯನ್ನು ಸ್ಮರಿಸಬೇಕಿದೆ. ಬೆಳಗಾವಿ ಪಾಲಿಕೆ ಚುನಾವಣೆಯನ್ನು ಸವಾಲ್ ಆಗಿ ಸ್ವೀಕರಿಸಿ ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ಇಲ್ಲಿ ಬಂದು ನಿಂತಿದ್ದೇನೆ ಎಂದರು.
ನನ್ನನ್ನು ಬದಲಿಸಲಾಗುತ್ತೆ ಎಂಬುದು ನಿಜವಲ್ಲ: ನಳಿನ್ ಕುಮಾರ್ ಸಂದರ್ಶನ
ಒಂದೊಂದು ವಾರ್ಡಗೆ ಒಬ್ಬೊಬ್ಬ ಶಾಸಕರನ್ನು ಹಾಕುತ್ತೇವೆ. ಪಾಲಿಕೆ ಚುನಾವಣೆ ಮುಗಿಯುವವರೆಗೂ ಯಾವ ಶಾಸಕರು ಬೆಂಗಳೂರಿಗೆ ಹೋಗುವಂತಿಲ್ಲ. ಸಭೆ, ಸಮಾರಂಭಗಳನ್ನು ಮಾಡುವಂತಿಲ್ಲ ಎಂದು ಶಾಸಕರಿಗೆ ಸೂಚಿಸಿದ ಅವರು, 25 ವರ್ಷದ ನಂತರ ಪಕ್ಷದ ಚಿಹ್ನೆ ಮೇಲೆ ಬೆಳಗಾವಿ ಪಾಲಿಕೆ ಚುನಾವಣೆಗೆ ನಿಲ್ಲುತ್ತಿದ್ದೇವೆ. ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಧ್ವಜ ಹಾರಿಸಿದಂತೆ ಬೆಳಗಾವಿಯಲ್ಲಿಯೂ ಬಿಜೆಪಿ ಧ್ವಜ ಹಾರಿಸುತ್ತೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ನಮಗೆ ಹೆಚ್ಚು ಶಕ್ತಿಯಿದೆ. 18 ಕ್ಷೇತ್ರಗಳ ಪೈಕಿ 13 ಶಾಸಕರು, ಇಬ್ಬರು ಸಂಸದರು ನಮ್ಮವರಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಮಾಡಿರುವ ಕಾರ್ಯ ಜನರಿಗೆ ಮತ್ತೊಮ್ಮೆ ತಿಳಿಸಬೇಕು. ಪಕ್ಷದ ಗೆಲುವು ಕಾರ್ಯಕರ್ತರ ಮೇಲೆ ಅವಲಂಬನೆಯಾಗಿರುತ್ತದೆ. ಮೋದಿ ನಾಯಕತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬಿಜೆಪಿ ಸದೃಢತೆಯಿದೆ. ಟಿಕೆಟ್ ಯಾರಿಗೆ ಸಿಗಲಿ ಎಲ್ಲರೂ ಹುರಿಯಾಳು ಎಂದು ಕೆಲಸ ಮಾಡಿದರೆ 58ರ ಪೈಕಿ 50 ವಾರ್ಡಗಳಲ್ಲಿ ನಾವು ಗೆಲ್ಲುತ್ತೇವೆ. ಮೂರು ಪಾಲಿಕೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ಸಿಎಂ ಬೊಮ್ಮಾಯಿ ಆಶಯವಾಗಿದೆ. ಯಡಿಯೂರಪ್ಪ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎಂದರು.
ಅರಣ್ಯ ಮತ್ತು ಆಹಾರ ಸಚಿವ ಉಮೇಶ ಕತ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಎಪ್ಪತ್ತು ವರ್ಷದಿಂದ ದೇಶದಲ್ಲಿ ಸರಿಯಾದ ಅಭಿವೃದ್ಧಿಯಾಗಿರಲಿಲ್ಲ. ಕೇಂದ್ರ ಸರ್ಕಾರದ ಯೋಜನೆಯಿಂದ ಅಭಿವೃದ್ಧಿಯಾಗುತ್ತಿದೆ. ಈ ಚುನಾವಣೆ ಜಾತಿ, ಹೆಸರು, ಎಂಇಎಸ್ ಮೇಲೆ ಆಗುವುದಿಲ್ಲ. ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರದಿಂದ ಎಂಇಎಸ್ ಮತ ಪಡೆದಿತ್ತು. ಹದಿಮೂರು ಜನ ಶಾಸಕರೆಲ್ಲರೂ ಸೇರಿ ಕೆಲಸ ಮಾಡಿದರೆ 58 ವಾರ್ಡ ಗಳಲ್ಲಿ 50 ವಾರ್ಡಗಳನ್ನು ಗೆಲ್ಲುವ ವಿಶ್ವಾಸವಿದೆ. ನಲವತ್ತು ವರ್ಷದಿಂದ ಬೆಳಗಾವಿಯಲ್ಲಿ ಬೇರೆ ಧ್ವಜ ಹಾರುತ್ತಿದೆ. ಈ ಬಾರಿ ಬಿಜೆಪಿ ಧ್ವಜ ಹಾರಿಸುವ ಕೆಲಸ ಮಾಡೋಣ. ಹದಿನೈದು ದಿನ ಬೆಳಗಾವಿಯಲ್ಲಿದ್ದು ಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದರು.
ಸಂಸದರಾದ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ವಿಧಾನ ಪರಿಷತ್ ಸರ್ಕಾರ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಶ್ರೀಮಂತ ಪಾಟೀಲ, ಅನಿಲ ಬೆನಕೆ, ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ಪಿ.ರಾಜೀವ, ಮಹಾಂತೇಶ ದೊಡ್ಡಗೌಡರ ಮೊದಲಾದವರು ಉಪಸ್ಥಿತರಿದ್ದರು.