Ramanagara: ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ

By Govindaraj SFirst Published Aug 28, 2022, 7:28 PM IST
Highlights

ತಾಲೂಕಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾದ ಹಾನಿ ಕುರಿತು ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮಳೆಹಾನಿ ಸಂತ್ರಸ್ತರಿಗೆ ಕೂಡಲೇ 10 ಸಾವಿರ ರು. ಪರಿಹಾರ ನೀಡುವಂತೆ ಸೂಚಿಸಿದ್ದೇನೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. 

ಚನ್ನಪಟ್ಟಣ (ಆ.28): ತಾಲೂಕಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾದ ಹಾನಿ ಕುರಿತು ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮಳೆಹಾನಿ ಸಂತ್ರಸ್ತರಿಗೆ ಕೂಡಲೇ 10 ಸಾವಿರ ರು. ಪರಿಹಾರ ನೀಡುವಂತೆ ಸೂಚಿಸಿದ್ದೇನೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ರಾತ್ರಿ ಸುರಿದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ಇಂದೇ 10 ಸಾವಿರ ರು. ಸೇರಿದಂತೆ ಶಾಶ್ವತ ಪರಿಹಾರ, ಮಳೆ ಹಾನಿ ಜತೆಗೆ ಕುರಿ, ಕೋಳಿ, ಬೆಳೆ ಹಾನಿಗಳಿಗೂ ಪರಿಹಾರ ನೀಡಲು ಸೂಚಿಸಿದ್ದೇನೆಂದರು.

ಪಕ್ಷದಿಂದಲೂ ಪರಿಹಾರ: ಸರ್ಕಾರ ನೀಡುವ ಎರಡು ಮೂರು ಸಾವಿರ ಪರಿಹಾರ ಯಾತಕ್ಕೂ ಸಾಕಾಗುವುದಿಲ್ಲ. ಸರ್ಕಾರದಿಂದ ದೊರೆಯುವ ಪರಿಹಾರದೊಂದಿಗೆ ಜೆಡಿಎಸ್‌ ಪಕ್ಷದಿಂದಲೂ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಕೋಲೂರಿನ ಗಾಂಧಿ ಗ್ರಾಮ, ತಿಟ್ಟಮಾರನಹಳ್ಳಿ ಸೇರಿದಂತೆ ವಿವಿಧೆಡೆ ಫುಡ್‌ಕಿಟ್‌ ವಿತರಣೆ ಮಾಡಲು ಸೂಚಿಸಿದರು. ಕಳೆದ ಬಾರಿಯೂ ಮಳೆ ಸಂತ್ರಸ್ತರಿಗೆ ವೈಯಕ್ತಿಕ ಮತ್ತು ಪಕ್ಷದಿಂದ ಸುಮಾರು 15ರಿಂದ 20 ಲಕ್ಷ ರು. ಪರಿಹಾರ ನೀಡಲಾಗಿತ್ತು ಎಂದರು. ನಗರದ ಕುಡಿ ನೀರು ಕಟ್ಟೆಯ ನೀರು ರಭಸವಾಗಿ ಹರಿದು ರಸ್ತೆ ಬಿರುಕು ಬಿಟ್ಟಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ನಗರ ಸಭೆ ಅಧಿಕಾರಿಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸೂಚಿಸಿದ್ದೇನೆ. ಬೀಡಿ ಕಾಲೋನಿ, ತಿಟ್ಟಮಾರನಹಳ್ಳಿ, ಗಾಂಧಿ ಗ್ರಾಮ ಸೇರಿದಂತೆ ವಿವಿಧೆಡೆ ಅನಾಹುತ ಆಗಿರೋದು ಗಮನಕ್ಕೆ ಬಂದಿದೆ ಎಂದರು.

ಇಡೀ ರಾಜ್ಯದಲ್ಲಿ ಕಮಿಷನ್‌ ಭ್ರಷ್ಟಾಚಾರವಿದೆ: ಎಚ್‌.ಡಿ.ಕುಮಾರಸ್ವಾಮಿ

ಅವೈಜ್ಞಾನಿಕ ಕಾಮಗಾರಿ: ಗಾಂಧಿ ಗ್ರಾಮದ ಅನಾಹುತಕ್ಕೆ ಬೆಂ-ಮೈ ಹೆದ್ದಾರಿಯ ಅವೈಜ್ಞಾನಿಕ ನಡೆದಿರುವುದೇ ಈ ಅನಾಹುತಕ್ಕೆ ಕಾರಣ. ಕಳೆದ ಬಾರಿಯೂ ಈ ವಿಚಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರೂ, ಮತ್ತೆ ಅನಾಹುತಗಳು ಸಂಭವಿಸಿವೆ ಎಂದು ಅಧಿಕಾರಿಗಳಿಗೆ ಮತ್ತೆ ತಾಕೀತು ಮಾಡಿದರು.

ವಿವಿಧ ಗ್ರಾಮಗಳಿಗೆ ಭೇಟಿ: ಮಳೆಯಿಂದ ಹಾನಿಗೊಳಗಾದ ನಗರದ ಪೇಟೆಚೆರೆ, ಬೀಡಿ ಕಾಲೋನಿ, ಮಂಗಳವಾರಪೇಟೆ, ಲಾಳಘಟ್ಟ, ತಿಟ್ಟಮಾರನಹಳ್ಳಿ, ಕೋಲೂರಿನ ಗಾಂಧಿ ಗ್ರಾಮಗಳಿಗೆ ಭೇಟಿ ನೀಡಿದ ಕುಮಾರಸ್ವಾಮಿ ಮಳೆಯಿಂದಾದ ಹಾನಿ ಪರಿಶೀಲಿಸಿದರು. ನಗರಸಭೆ ಅಧ್ಯಕ್ಷ ಪ್ರಶಾಂತ್‌, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌, ತಹಸೀಲ್ದಾರ್‌ ಸುದರ್ಶನ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು, ನಗರಸಭೆ ಸದಸ್ಯರಾದ ರಫೀಕ್‌, ನಾಗೇಶ್‌, ಸತೀಶ್‌ ಬಾಬು ಇತರರಿದ್ದರು.

200ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು: ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಮನಗರ ಜಿಲ್ಲೆಯಾದ್ಯಂತ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ಬೊಂಬೆನಗರಿ ಚನ್ನಪಟ್ಟಣ ಅಕ್ಷರಶಃ ನಲುಗಿ ಹೋಗಿದೆ. ತಾಲ್ಲೂಕಿನ ಬಹುತೇಕ ಕೆರೆಗಳು ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದು, ಮನೆಗಳಿಗೆ ನೀರು ನುಗ್ಗಿದೆ, ಕೆಲಕಡೆ ರಸ್ತೆಗಳೆಲ್ಲವೂ ನದಿಯಂತಾಗಿದೆ. ಚನ್ನಪಟ್ಟಣ ಟೌನ್‌ನ ಬಿಡಿ ಕಾಲೋನಿಯ 30ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಮನೆಯಲ್ಲಿದ್ದ ವಸ್ತುಗಳು, ಪದಾರ್ಥಗಳು ಸಂಪೂರ್ಣವಾಗಿ ಜಲಾವೃತವಾಗಿವೆ. 

Ramanagara; ಕಾಂಗ್ರೆಸ್‌ನಲ್ಲಿ ಬಣ ರಾಜ​ಕೀಯ ಮತ್ತೊಮ್ಮೆ ಸ್ಫೋಟ!

ಅಲ್ಲೇ ಪಕ್ಕದಲ್ಲಿ ಇದ್ದ ರಂಗನಾಥ ರೈಸ್ ಮಿಲ್‌ಗೆ ನೀರು ನುಗ್ಗಿ ರೈಸ್ ಮಿಲ್‌ನಲ್ಲಿದ್ದ, ಅಕ್ಕಿ, ಗೋಧಿ, ಮೆಕ್ಕಿಜೋಳದ ಮೂಟೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇನ್ನೂ 20 ವರ್ಷಗಳ ನಂತರ ಹೊಂಗನೂರು ಕೆರೆ ತುಂಬಿ ಕೋಡಿ ಬಿದ್ದು, ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ಕಬ್ಬಾಳು, ಸಾತನೂರು, ಹಲಗೂರು, ಇಗ್ಗಲೂರು ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಟ್ ಆಗಿದ್ದು, ಅಲ್ಲಿನ ಜನರು ಹತ್ತಾರು ಕಿಮೀ ಬಳಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆ ಕೋಡಿ ಹೊಡೆದು ಅಲ್ಲಿನ 30 ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. 

click me!