ಎಚ್ಡಿಕೆ ಚಿತ್ತ ಉತ್ತರದತ್ತ: ಜೆಡಿಎಸ್‌ ಸಮಾವೇಶಕ್ಕೆ ಬಾಗಲಕೋಟೆ ಸಜ್ಜು

By Kannadaprabha News  |  First Published Jan 30, 2021, 11:07 AM IST

ನಾಳೆ ನಡೆಯಲಿರುವ ಜೆಡಿಎಸ್‌ ಬೃಹತ್‌ ಸಂಘಟನಾ ಸಮಾವೇಶ| 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ| 2023 ಚುನಾವಣೆ ಟಾರ್ಗೆಟ್ ಇಟ್ಟುಕೊಂಡು ಜೆಡಿಎಸ್ ಪಕ್ಷ ಸಂಘಟನೆ| ಮಾಜಿ ಸಿಎಂ ಸಿದ್ದರಾಮಯ್ಯ ಸ್ವಜಿಲ್ಲೆ ಮೂಲಕ ಪಕ್ಷ ಸಂಘಟನೆಗೆ ಮುಂದಾದ ಕುಮಾರಸ್ವಾಮಿ| 


ಬಾಗಲಕೋಟೆ(ಜ.30): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜನವರಿ 31ರಂದು ನಗರದಲ್ಲಿ ನಡೆಯಲಿರುವ ಜೆಡಿಎಸ್‌ ಪಕ್ಷದ ಬೃಹತ್‌ ಸಂಘಟನಾ ಸಮಾವೇಶಕ್ಕೆ ಆಗಮಿಸಲಿದ್ದಾರೆಂದು ಪಕ್ಷದ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಅಂದಿನ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದೆ. ಬೃಹತ್‌ ಪೆಂಡಾಲದಲ್ಲಿ ನಡೆಯಲಿರುವ ಸಮಾವೇಶಕ್ಕೆ ಸುಮಾರು 10 ಸಾವಿರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ, ಸಮಾವೇಶದಿಂದ ಜಿಲ್ಲೆಯ ಪ್ರತಿ ತಾಲೂಕಿನ ಕಾರ್ಯಕರ್ತರು ಬರಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.

Tap to resize

Latest Videos

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಂದು ಬೆಳಗ್ಗೆ 11 ಗಂಟೆಗೆ ಆಗಮಿಸಿ ಸಮಾವೇಶವನ್ನು ಉದ್ಘಾಟಿಸಲಿದ್ದು, ಜೆಡಿಎಸ್‌ ರಾಜ್ಯ ನಾಯಕರಾದ ಬಸವರಾಜ ಹೊರಟ್ಟಿ, ಕೋನರೆಡ್ಡಿ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ದಿಂದ ಅನೇಕ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ, ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ, ಪದಾಧಿಕಾರಿಗಳ ಅಧಿಕಾರ ಗ್ರಹಣ, ಸದಸ್ಯತ್ವ ಅಭಿಯಾನ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಅಕ್ರಮ ಗಣಿಗಾರಿಕೆಗೆ ಇವರೇ ಕಾರಣ ಎಂದು ಬೊಟ್ಟು ಮಾಡಿದ ತೋರಿಸಿದ ಎಚ್‌ಡಿಕೆ

ನೂತನ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇನ್ನು ಇದೇ ವೇಳೆಯಲ್ಲಿ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಮುಖಂಡರು ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದಾರೆ. ನಾಳಿನ ಸಮಾವೇಶದಲ್ಲಿ ಎಚ್‌ಡಿಕೆ ಪಂಚರತ್ನ ಯೋಜನೆ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. 

ಕಾರ್ಯಕ್ರಮ ಮುಗಿದ ನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಮಾಡಲಾಗಿದೆ, ಕುಮಾರಸ್ವಾಮಿ ಅವರು ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಬಾಗಲಕೋಟೆ ಸಮಾವೇಶ ಪ್ರಥಮವಾಗಿದ್ದು, 2023ರ ವಿಧಾನಸಭೆ ಚುನಾವಣೆಗೆ ಈಗಾಗಲೇ ಸಿದ್ದತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ, ಸಲೀಂ ಮೋಮಿನ್‌, ಘನಶ್ಯಾಂ ಭಾಂಡಗೆ, ಕೃಷ್ಣ ಪಾಟೀಲ ಉಪಸ್ಥಿತರಿದ್ದರು.
 

click me!