ಪಾಲಿಕೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಮುಂದುವರಿಕೆ, ಗೆಲುವು ಖಚಿತ

Kannadaprabha News   | Asianet News
Published : Jan 29, 2020, 02:52 PM IST
ಪಾಲಿಕೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಮುಂದುವರಿಕೆ, ಗೆಲುವು ಖಚಿತ

ಸಾರಾಂಶ

ರಾಜ್ಯದ ಮಟ್ಟಿಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುರಿದು ಬಿದ್ದರೂ ಪಾಲಿಕೆ, ನಗರಸಭೆ ಚುನಾವಣೆಗಳಲ್ಲಿ ಮೈತ್ರಿಗೆ ತೊಂದರೆಯಾಗಿಲ್ಲ. ಇತ್ತೀಚೆಗಷ್ಟೇ ಮೈಸೂರು ನಗರಸಭಾ ಚುನಾವಣೆಯಲ್ಲಿ ಮೈತ್ರಿ ಗೆಲುವು ಸಾಧಿಸಿತ್ತು. ಇದೀಗ ತುಮಕೂರಿನಲ್ಲಿ ದೋಸ್ತಿ ಮುಂದುವರಿದಿದೆ.

ತುಮಕೂರು(ಜ.29): ಇಲ್ಲಿನ ಮಹಾನಗರಪಾಲಿಕೆಯಲ್ಲಿ ಮತ್ತೆ ಜೆಡಿಎಸ್‌, ಕಾಂಗ್ರೆಸ್‌ ದೋಸ್ತಿಗಳ ನಡುವೆ ಹೊಂದಾಣಿಕೆಯಾಗಿದ್ದು, ಜನವರಿ 30ರಂದು ನೂತನ ಮೇಯರ್‌, ಉಪಮೇಯರ್‌ ಆಯ್ಕೆ ನಡೆಯಲಿದೆ. 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 12, ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ 10 ಮಂದಿ ಆಯ್ಕೆಯಾಗಿದ್ದರೆ ಮೂವರು ಪಕ್ಷೇತರು ಇದ್ದಾರೆ.

ಸದ್ಯ ಮೂರು ಮಂದಿ ಪಕ್ಷೇತರರು ಒಂದೊಂದು ಪಕ್ಷದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ಪಾಲಿಕೆಯಲ್ಲಿ ಈಗ ಬಿಜೆಪಿ 13, ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ 11 ಮಂದಿ ಸದಸ್ಯರಿದ್ದಂತಾಗಿದೆ. ಕಳೆದ ಬಾರಿಯೂ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿಯಾಗಿತ್ತು. ಈಗ ಅದು ಮುಂದುವರಿದಿದೆ.

ನಾಳೆ ಹೊಸ ಮೇಯರ್‌?:

ಕಳೆದ ಒಂದು ವರ್ಷದ ಅವಧಿಯಲ್ಲಿ ಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿತ್ತು. ಉಪಮೇಯರ್‌ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲಾಗಿತ್ತು. ಹೀಗಾಗಿ ಜೆಡಿಎಸ್‌ನ ಲಲಿತಾ ಮೇಯರ್‌ ಆಗಿದ್ದರೆ ಕಾಂಗ್ರೆಸ್‌ನ ರೂಪಶ್ರೀ ಉಪಮೇಯರ್‌ ಆಗಿದ್ದರು. ಈಗ ಅವರಿಬ್ಬರ ಅವಧಿ ಮುಗಿದಿದ್ದು ಜನವರಿ 30 ರಂದು ಹೊಸ ಮೇಯರ್‌ ಆಯ್ಕೆ ನಡೆಯಲಿದೆ.

ತುಮಕೂರು: ದೇಗುಲ ಪೂಜಾರಿ ಮನೆಯಲ್ಲಿ ಗಾಂಜಾ

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಸಭೆ ಸೇರಿ ಮುಂದಿನ ಒಂದು ವರ್ಷದ ಮೇಯರ್‌ ಹುದ್ದೆಯನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡುವುದು, ಉಪಮೇಯರ್‌ ಹುದ್ದೆಯನ್ನು ಜೆಡಿಎಸ್‌ಗೆ ನೀಡುವುದೆಂದು ತೀರ್ಮಾನವಾಗಿದೆ. ಮಾಜಿ ಸಚಿವ ಹಾಗೂ ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಮನೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಾಂತರ ಜೆಡಿಎಸ್‌ ಶಾಸಕ ಗೌರಿಶಂಕರ್‌, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆಂಜಿನಪ್ಪ, ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡ ರಫೀಕ್‌ ಅಹಮದ್‌ ಕೂಡ ಭಾಗಿಯಾಗಿದ್ದರು. ಎರಡೂ ಪಕ್ಷಗಳ ಮುಖಂಡರು ಒಂದೆಡೆ ಸೇರಿ ಚರ್ಚೆ ನಡೆಸಿ ಈ ಒಪ್ಪಂದಕ್ಕೆ ಬಂದಿದ್ದಾರೆ.

ಕೈ-ದಳಕ್ಕೆ ಅಧಿಕಾರ ಖಚಿತ:

ಸದ್ಯ 35 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ದೋಸ್ತಿಯಿಂದಾಗಿ ದೋಸ್ತಿ ಪಕ್ಷಗಳ ಬಲಾಬಲ 22 ಆಗಲಿದೆ. ಹಾಗೆಯೇ ವಿಧಾನ ಪರಿಷತ್‌ ಸದಸ್ಯರೊಬ್ಬರು ಮತ ಹಾಕಬಹುದಾಗಿದ್ದು ಬಲಾಬಲ 23 ಆಗಲಿದೆ. ಹೀಗಾಗಿ ದೋಸ್ತಿಗಳಿಗೆ ಬಹುಮತ ಇರುವುದರಿಂದ ಮೇಯರ್‌ ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಉಪಮೇಯರ್‌ ಜೆಡಿಎಸ್‌ ಪಾಲಾಗುವುದು ಬಹುತೇಕ ಖಚಿತ.

ಫರೀದಾಬೇಗಂ ಮುಂದಿನ ಮೇಯರ್‌?:

ಸದ್ಯ ಮೇಯರ್‌ ಆಗಿ 13ನೇ ವಾರ್ಡಿನ ಫರೀದಾಬೇಗಂ ಅವರು ಆಯ್ಕೆಯಾಗುವುದು ಬಹುತೇಕ ಖಚಿತ. ಹಾಗೆಯೇ ಜೆಡಿಎಸ್‌ನಿಂದ 33ನೇ ವಾರ್ಡಿನ ಶಶಿಕಲಾ ಅವರು ಉಪಮೇಯರ್‌ ಆಗುವ ಸಾಧ್ಯತೆ ಇದೆ. ಚುನಾವಣೆ ಜ.30ರಂದು ನಿಗದಿಯಾಗಿರುವುದರಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಲಿಕೆ ಸದಸ್ಯರು ಪ್ರವಾಸಕ್ಕೆ ತೆರಳಿದ್ದು ಚುನಾವಣೆ ದಿವಸವಾದ ಜ.30ರಂದು ನೇರವಾಗಿ ಪಾಲಿಕೆಗೆ ಬರಲಿದ್ದಾರೆ. ಎರಡೂ ಪಕ್ಷಗಳ ನಡುವೆ ದೋಸ್ತಿ ಪಕ್ಕಾ ಆಗಿರುವುದರಿಂದ ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ.

ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ

1. ಬಿಜೆಪಿ- 12 ಮಂದಿ

2. ಜೆಡಿಎಸ್‌- 10 ಮಂದಿ

3. ಕಾಂಗ್ರೆಸ್‌- 10 ಮಂದಿ

4. 3 ಮಂದಿ ಪಕ್ಷೇತರರು

PREV
click me!

Recommended Stories

ರಾಮನ ಹೆಸರಲ್ಲಿ ರಾಜ್ಯಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ: ಸಚಿವ ಮಹದೇವಪ್ಪ
ಶಬರಿಮಲೆ ದೇಗುಲದ ಬಂಗಾರ ಕಳವು ಪ್ರಕರಣ, ಬಳ್ಳಾರಿ ಚಿನ್ನದ ವ್ಯಾಪಾರಿ ಗೋವರ್ಧನ್ ಕೇರಳದಲ್ಲಿ ಬಂಧನ!